ನಿಗಮ ಮಂಡಳಿ ನೇಮಕಾತಿ : ಹೊಸ ಸೂತ್ರ ಕಂಡುಕೊಂಡ ಕಾಂಗ್ರೆಸ್‌ ಸರ್ಕಾರ

ಬೆಂಗಳೂರು: 

     ಸರ್ಕಾರ ರಚನೆ ಬಳಿಕ ದಾಟಬೇಕಾದ ಮೂರು ಹಂತಗಳನ್ನು ಗುರುತಿಸಿದ್ದ ಕಾಂಗ್ರೆಸ್, ಆ ಪ್ರಕಾರ ಬಜೆಟ್ ಮಂಡನೆ ಮೂಲಕ ಗ್ಯಾರಂಟಿ ಅನುಷ್ಠಾನಗೊಳಿಸುತ್ತಿದೆ. ನಂತರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಕೊಟ್ಟಿದೆ. ಮೂರನೇ ಕಾರ್ಯವಾಗಿ ನಿಗಮ- ಮಂಡಳಿಗಳ ನೇಮಕ ಮಾಡುವ ಕಾರ್ಯ ನಡೆಯಲಿದೆ.

    ನಿಗಮ- ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕ, ಸದಸ್ಯರನ್ನು ಆಯ್ಕೆ ಮಾಡುವಾಗ ಯಾವ ರೀತಿ ಆಯ್ಕೆಗಳು ನಡೆಯಬೇಕೆಂಬ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ. 

     ಒಟ್ಟು ನಿಗಮಗಳ ಪೈಕಿ ಶೇ.30ರಷ್ಟನ್ನು ಶಾಸಕರಿಗೆ, ಶೇ.70ರಷ್ಟನ್ನು ಪಕ್ಷದ ಕಾರ್ಯಕರ್ತರಿಗೆ ನೀಡಲು ಉದ್ದೇಶಿಸಲಾಗಿದೆ. ಅಲ್ಲದೇ, ಒಟ್ಟು ಹಂಚಿಕೆಯಲ್ಲಿ ಶೇ.50ರಷ್ಟನ್ನು ಯುವಕರಿಗೆ ನೀಡಬೇಕೆಂಬ ಸೂಚನೆಯೂ ಇದೆ. ಅಷ್ಟೇ ಅಲ್ಲದೇ ಲೋಕಸಭೆ ಚುನಾವಣೆ ಉದ್ದೇಶದಿಂದ ತಡಮಾಡದೇ ನೇಮಕ ಪ್ರಕ್ರಿಯೆ ನಡೆಯಬೇಕು, ಸಮುದಾಯವಾರು ಪ್ರಾತಿನಿಧ್ಯ ಕೊಡಬೇಕು, ಚುನಾವಣೆಯಲ್ಲಿ ದುಡಿದವರಿಗೆ ಮಣೆಹಾಕಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.

    ಒಟ್ಟಾರೆ 85 ಮಂದಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷರಾಗಿ ನೇಮಕ ಮಾಡಲು ಅವಕಾಶವಿತ್ತು. ಆದರೆ, ಇತ್ತೀಚೆಗೆ ಕೆಲವನ್ನು ರದ್ದು ಮಾಡಲಾಗಿದೆ, ಇನ್ನಷ್ಟು ರದ್ದು ಮಾಡುವ ಅಥವಾ ಇಲಾಖೆಯೊಂದಿಗೆ ವಿಲೀನಗೊಳಿಸುವ ಕಾರ್ಯ ಇಷ್ಟರಲ್ಲೇ ನಡೆಯಲಿದೆ. ಹೀಗಾಗಿ ಅಂದಾಜು 70 ಮಂದಿಗೆ ಅವಕಾಶ ಸಿಗಲಿದೆ. ಈ ಪೈಕಿ 21-22 ಶಾಸಕರಿಗೆ ಪ್ರಮುಖ ಅಥವಾ ಲಾಭದಾಯಕ ನಿಗಮ ಮಂಡಳಿಯ ಅಧ್ಯಕ್ಷ ಹುದ್ದೆ ಸಿಗಬಹುದು.

  ವಿಧಾನಸಭೆ ಚುನಾವಣೆಯಲ್ಲಿ ಸವಾಲು ಎದುರಿಸಿ ಶ್ರಮ ಹಾಕಿದ ಮುಖಂಡರು ಸಹಜವಾಗಿ ಸರ್ಕಾರದಿಂದ ಸಣ್ಣ ಲಾಭ ನಿರೀಕ್ಷಿಸುತ್ತಾರೆ. ಅವರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಿದಾಗ ಪಕ್ಷಕ್ಕೂ ಬಲ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು, ಸಿಎಂ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಶೀಘ್ರವೇ ಆಯ್ಕೆ ಪ್ರಕ್ರಿಯೆ ಆರಂಭಿಸುತ್ತಾರೆ. ಒಂದು ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಯಬಹುದು ಎಂಬ ವಿಶ್ವಾಸವಿದೆ ಎಂದು ಹೇಳಿದರು.

  ಲೋಕಸಭೆ ಚುನಾವಣೆಯಲ್ಲಿ ಮೋದಿ ಫ್ಯಾಕ್ಟರ್ ಕೆಲಸ ಮಾಡುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ತಡಮಾಡದೇ ಅಗ್ರೆಸಿವ್ ಆಗಿ ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳಬೇಕೆಂದು ಪಕ್ಷದ ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ ಕೊಟ್ಟಿದ್ದಾರೆ. ಬೆಲೆ ಏರಿಕೆ, ರೈತರ ಆದಾಯ ದ್ವಿಗುಣವಾಗಿಲ್ಲ, 15 ಲಕ್ಷ ರೂ. ಖಾತೆಗೆ ಹಾಕಿಲ್ಲ, 2 ಕೋಟಿ ಉದ್ಯೋಗ ನೀಡಿಲ್ಲ ಎಂಬ ಸಂಗತಿಯನ್ನು ಜನರ ನಡುವೆ ಒತ್ತಿ ಹೇಳುವಂತೆ ಮತ್ತು ಸಮಾವೇಶಗಳಲ್ಲಿ ಪ್ರಸ್ತಾಪಿಸುವಂತೆ ರಾಹುಲ್ ನಿರ್ದೇಶನ ಕೊಟ್ಟಿದ್ದಾರೆ.

  ಈ ನಡುವೆ ಸಚಿವಾಕಾಂಕ್ಷಿ ಗಳಾಗಿರುವವರು ನಿಗಮ- ಮಂಡಳಿಯಲ್ಲಿ ತೃಪ್ತಿಪಡುವ ಆಶಯ ಹೊಂದಿಲ್ಲ. ನಾನು ನಿಗಮ ಮಂಡಳಿ ಆಯ್ಕೆ ಮಾಡಿಕೊಳ್ಳುವ ಕೆಟ್ಟ ಕೆಲಸ ಮಾಡಲ್ಲ ಎಂದು ಶಾಸಕರೊಬ್ಬರು ಈಗಾಗಲೇ ಅನೌಪಚಾರಿಕ ಪ್ರಕ್ರಿಯೆಯನ್ನೂ ನೀಡಿದ್ದಾರೆ. ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ, ವರ್ಗಾವಣೆಗೆ ಮನ್ನಣೆ ಸಿಗುತ್ತಿಲ್ಲ ಎಂದು ದನಿ ಎತ್ತಿದ ಶಾಸಕರ್ಯಾರೂ ನಿಗಮ ಮಂಡಳಿ ಅಪೇಕ್ಷಿತರಲ್ಲ. ಆದರೆ, ಅವರೆಲ್ಲರಿಗೂ ‘ಹೈಪ್ರೊಫೈಲ್’ ನಿಗಮ- ಮಂಡಳಿ ಕೊಡಬೇಕೆಂದು ಪಕ್ಷ ಬಯಸಿದೆ. ಅವರೆಲ್ಲ, ಭವಿಷ್ಯದಲ್ಲಿ ಸಂಪುಟ ಪುನಾರಚನೆ ನಡೆದು, ಅದರಲ್ಲಿ ತಮಗೆ ಅವಕಾಶ ಸಿಗಬಹುದೆಂಬ ಅಪೇಕ್ಷೆ ಇಟ್ಟುಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap