ಕಾಂಗ್ರೆಸ್ 130 ಸ್ಥಾನ ಗಳಿಸಲಿದೆ : ಸಿದ್ಧರಾಮಯ್ಯ

ಬೆಂಗಳೂರು :

     ಈ ಬಾರಿ ಕಾಂಗ್ರೆಸ್ ಪಕ್ಷ ಏನೇ ಆದರೂ ಕೂಡ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. 120 ರಿಂದ 130 ಸೀಟು ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಂಗಳವಾರ ನಂಜನಗೂಡಿಗೆ ಹೋಗಿದ್ದೆ. ಇಂದು (ಬುಧವಾರ) ವರುಣಾಕ್ಕೆ ಹೋಗುತ್ತಿದ್ದೇನೆ.

    ಅದು ಖಾಸಗಿ ಕಾರ್ಯಕ್ರಮ. ನಮ್ಮ ಎದುರಾಳಿ ಯಾರು ಅಂತ ಯಾವತ್ತೂ ಯೋಚಿಸಿಲ್ಲ. ಜನರು ಆಶೀರ್ವಾದ ಮಾಡುತ್ತಾರೆ. ವರುಣಾ ನನ್ನ ಹುಟ್ಟಿದೂರು, ಅಲ್ಲಿಂದಲೇ ರಾಜಕೀಯ ಪ್ರಾರಂಭಿಸಿದ್ದು, 1978 ರಲ್ಲಿ ತಾಲ್ಲೂಕು ಬೋರ್ಡ್ಗೆ ಸ್ಪರ್ಧಿಸಿದ್ದು, ಅಲ್ಲಿಂದಲೆ. ಹಾಗಾಗಿ 2008ರಲ್ಲಿ, 2013ರಲ್ಲಿ ಅಲ್ಲಿ ಸ್ಫರ್ಧಿಸಿದ್ದೆ. ಈ ಬಾರಿ ನನ್ನ ಕೊನೆಯ ಚುನಾವಣೆ, ನಾನು ನಮ್ಮ ಹುಟ್ಟೂರಿನಿಂದಲೇ ಸ್ಪರ್ಧೆ ಮಾಡುತ್ತೇನೆ. ಜನರು ಆಶೀರ್ವಾದ ಮಾಡುತ್ತಾರೆಂಬ ನಂಬಿಕೆ ಇದೆ. ನಂತರ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ತಿಳಿಸಿದರು.

     ಕೋಲಾರದಲ್ಲಿಯೂ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಕೋಲಾರದವರು ಕರೆಯುತ್ತಿದ್ದಾರೆ. ಹೈಕಮಾಂಡ್ ಒಪ್ಪಿದರೆ ನಿಲ್ಲುತ್ತೇನೆ ಎಂದರಲ್ಲದೆ, ಪೀಪಲ್ ರೆಪ್ರೆಸೆಂಟೇಶನ್ ಆಯಕ್ಟ್ (ಜನರ ಪ್ರಾತಿನಿಧ್ಯ ಕಾಯ್ದೆ)ನಲ್ಲಿ ಹೇಳಿರುವುದನ್ನು ಚಾಚೂ ತಪ್ಪದೆ ಚುನಾವಣಾ ಆಯೋಗ ಜಾರಿಗೆ ತರಬೇಕು. ಚುನಾವಣಾ ಅಕ್ರಮಗಳನ್ನು ತಡೆಯುವ ಕೆಲಸ ಮಾಡಬೇಕು. ಸಂಪೂರ್ಣವಾಗಿ ತಡೆಯುವ ಕೆಲಸ ಮಾಡಬಹುದು. ಅದು ಯಾವುದೇ ಪಕ್ಷ ಇರಲಿ, ಆಡಳಿತದಲ್ಲಿರುವ ಪಕ್ಷಗಳು ಹೆಚ್ಚು ಅಕ್ರಮಗಳನ್ನು ಮಾಡುತ್ತವೆ. ದುಡ್ಡನ್ನು ಹಂಚುವುದು, ಬೇರೆ ಬೇರೆ ಆಮಿಷ ಒಡ್ಡುವುದನ್ನು ಆಡಳಿತ ಪಕ್ಷಗಳು ಮಾಡುತ್ತವೆ. ಅವರ ಮೇಲೆ ಕಡಿವಾಣ ಹಾಕುವ, ನಿಗಾ ಇಡುವ ಕೆಲಸ ಮಾಡಬೇಕು ಎಂದರು.

     ಹೆಲಿಕಾಪ್ಟರ್‌ನಲ್ಲಿ ಪ್ರವಾಸ ಮಾಡುತ್ತೇನೆ. ಒಂದು ದಿನಕ್ಕೆ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಸುತ್ತೇನೆ. ಮೂವತ್ತು ದಿನದಲ್ಲಿ 120 ವಿಧಾನಸಭಾ ಕ್ಷೇತ್ರಗಳ ಪ್ರವಾಸ ಪೂರೈಸಬಹುದು. ಪ್ರಜಾಧ್ವನಿಯಲ್ಲಿ 60 ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ನಡೆಸಿದ್ದೇನೆ. ಇನ್ನೂ 120 ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಮಾಡುತ್ತೇನೆ. ಡಿ.ಕೆ.ಶಿವಕುಮಾರ್ ಕೂಡ ಕೆಲವು ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದಾರೆ.

    ಮಂಗಳವಾರವೂ ಕೂಡ ಅವರು ಶ್ರೀರಂಗಪಟ್ಟಣಕ್ಕೆ ಹೋಗಿದ್ದರು ಎಂದರಲ್ಲದೆ, ಎರಡನೇ ಪಟ್ಟಿ ಯಾವಾಗ ಬಿಡುಗಡೆಯಾಗುತ್ತದೆ ಎಂದು ಪ್ರಶ್ನಿಸಿದಾಗ, ಗುರುವಾರ (ಇಂದು) ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ಇದೆ, ಅದು ಮುಗಿದ ಮೇಲೆ ಸೆಂಟ್ರಲ್ ಎಲೆಕ್ಷನ್ ಕಮಿಟಿ ಮೀಟಿಂಗ್ ಇದೆ. ಅದಾದ ಮೇಲೆ ಬಿಡುಗಡೆ ಮಾಡುತ್ತೇವೆ ಎಂದರು.

     ಒಂದೊಂದು ಕ್ಷೇತ್ರದಲ್ಲಿ ಇಬ್ಬಿಬ್ಬರು ಮೂರು ಮಂದಿ ಆಕಾಂಕ್ಷಿಗಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಗಾಳಿ ಬೀಸಲು ಆರಂಭವಾಗಿದೆ. ಹಾಗಾಗಿ ಆಕಾಂಕ್ಷಿಗಳು ಜಾಸ್ತಿ ಆಗಿದ್ದಾರೆ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಬಿಜೆಪಿ-ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ ಆದರೂ ಆಗಬಹುದು, ಹಳೆ-ಮೈಸೂರೋ, ಹೊಸ ಮೈಸೂರೋ ಹೋದ ಸಲ ಅಂತೂ ಆಗಿತ್ತು. ಈ ಸಲ ಏನಾಗುತ್ತದೆ ಎಂದು ಕಾದು ನೋಡಬೇಕು. ನನಗೆ ಆಂತರಿಕ ಒಪ್ಪಂದ ಮಾಡಿಕೊಳ್ಳುತ್ತಾರೆಂಬ ಸೂಚನೆ ಇದೆ. ಈ ಸಾರಿ ಕಾಂಗ್ರೆಸ್ ಪಕ್ಷ ಏನೇ ಆದರೂ ಕೂಡ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. 120 ರಿಂದ 130 ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap