ಬೆಂಗಳೂರು
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗಿಂತ ಒಂದು ಹೆಜ್ಜೆ ಮುಂದಿರುವ ಕಾಂಗ್ರೆಸ್, ತನ್ನ ಮೊದಲ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು, ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ನಿಯಮವನ್ನು ಗಾಳಿಗೆ ತೂರಿದೆ. ಆದರೂ ಅಳೆದು ತೂಗಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಭಾರಿ ನಿರೀಕ್ಷೆ ಮೂಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಬದಲು ವರುಣಾ ಕ್ಷೇತ್ರದಿಂದ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕನಕಪುರ, ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಎಐಸಿಸಿ ಕೇಂದ್ರ ಚುನಾವಣಾ ಸಮಿತಿಯ ಉಸ್ತುವಾರಿ ಮುಕುಲ್ ವಾಸ್ನಿಕ್ ಪ್ರಕಟಿಸಿದ್ದಾರೆ.
ಇತ್ತೀಚೆಗೆ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧೃವ ನಾರಾಯಣ್ ಅವರ ಪುತ್ರ ದರ್ಶನ್ ಅವರಿಗೆ ನಂಜನಗೂಡು ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಬಹುತೇಕ ಹಾಲಿ ಶಾಸಕರಿಗೆ ಅವರವರ ಕ್ಷೇತ್ರಗಳಿಂದಲೇ ಸ್ಪರ್ಧಿಸಲು ಟಿಕೆಟ್ ಘೋಷಿಸಲಾಗಿದೆ. ಉಳಿದಂತೆ ಶಿರಾದಿಂದ ಟಿ.ಬಿ. ಜಯಚಂದ್ರ, ಶ್ರೀನಿವಾಸಪುರದಿಂದ ಕೆ.ಆರ್. ರಮೇಶ್ ಕುಮಾರ್, ದಾವಣಗೆರೆ ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪ, ಕಾಪುವಿನಿಂದ ವಿನಯ್‌ಕುಮಾರ್ ಸೊರಕೆ, ಬಬಲೇಶ್ವರದಿಂದ ಎಂ.ಬಿ. ಪಾಟೀಲ್, ಭಾಲ್ಕಿಯಿಂದ ಈಶ್ವರ್ ಖಂಡ್ರೆ ಅವರಿಗೆ ಟಿಕೆಟ್ ನೀಡಲಾಗಿದೆ.
ಬೆಂಗಳೂರಿನ ಬ್ಯಾಟರಾಯನಪುರದಿಂದ ಕೃಷ್ಣ ಬೈರೇಗೌಡ, ಸರ್ವಜ್ಞನಗರದಿಂದ ಕೆ.ಜೆ. ಜಾರ್ಜ್, ಗಾಂಧಿನಗರದಿಂದ ದಿನೇಶ್ ಗುಂಡೂರಾವ್, ಬಿಟಿಎಂ ಲೇಔಟ್‌ನಿಂದ ರಾಮಲಿಂಗಾರೆಡ್ಡಿ, ಚಾಮರಾಜಪೇಟೆಯಿಂದ ಜಮೀರ್ ಅಹಮದ್ ಖಾನ್, ವಿಜಯನಗರದಿಂದ ಎಂ.ಕೃಷ್ಣಪ್ಪ, ಗೋವಿಂದ ರಾಜನಗರದಿಂದ ಪ್ರಿಯಾಕೃಷ್ಣ, ಅವರಿಗೆ ಟಿಕೆಟ್ ಘೋಷಿಸಲಾಗಿದೆ. ನಾಗಮಂಗಲದಿAದ ಎನ್. ಚಲುವರಾಯಸ್ವಾಮಿ, ಬಂಟ್ವಾಳದಿಂದ ರಮಾನಾಥ ರೈ, ಮಂಗಳೂರಿನಿAದ ಯು.ಟಿ. ಖಾದರ್, ನರಸಿಂಹರಾಜ ಕ್ಷೇತ್ರದಿಂದ ತನ್ವೀರ್ ಸೇಠ್, ಟಿ.ನರಸಿಪುರದಿಂದ ಹೆಚ್.ಸಿ. ಮಹದೇವಪ್ಪ, ಗದಗದಿಂದ ಎಚ್.ಕೆ. ಪಾಟೀಲ್ ಅವರುಗಳಿಗೆ ಟಿಕೆಟ್ ನೀಡಲಾಗಿದೆ. ಕೇಂದ್ರದ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅವರು ದೇವನಹಳ್ಳಿ ಮೀಸಲು ಕ್ಷೇತ್ರದಿಂದ ಅಭ್ಯರ್ಥಿಯಾಗಲಿದ್ದಾರೆ. ಇವರ ಪುತ್ರಿ, ಹಾಲಿ ಶಾಸಕಿ ರೂಪಕಲಾ ಕೆಜಿಎಫ್‌ನಿಂದ ಮತ್ತೆ ಸ್ಪರ್ಧಿಸುವರು.
ಅಪ್ಪ-ಮಕ್ಕಳಿಗೆ ಟಿಕೆಟ್ ನೀಡುವ ಪರಿಪಾಠ ಈ ಬಾರಿಯೂ ಮುಂದುವರೆದಿದ್ದು, ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಬಿಟಿಎಂ ಕ್ಷೇತ್ರದ ಟಿಕೆಟ್ ನೀಡಿದ್ದರೆ, ಅವರ ಪುತ್ರಿ, ಹಾಲಿ ಶಾಸಕಿ ಸೌಮ್ಯರೆಡ್ಡಿ ಜಯನಗರದಿಂದ ಕಣಕ್ಕಿಳಿಯಲಿದ್ದಾರೆ. ದಾವಣಗೆರೆಯ ಶಾಸಕ ಶಾಮನೂರು ಶಿವಶಂಕರಪ್ಪರವರಿಗೆ ದಾವಣಗೆರೆ ದಕ್ಷಿಣ, ಅವರ ಪುತ್ರ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರಿಗೆ ದಾವಣಗೆರೆ ಉತ್ತರ ಕ್ಷೇತ್ರದ ಟಿಕೆಟ್ ನೀಡಲಾಗಿದೆ.
ವಿಜಯನಗರ ಕ್ಷೇತ್ರದಿಂದ ಹಾಲಿ ಶಾಸಕ ಕೃಷ್ಣಪ್ಪ ಅವರಿಗೆಟಿಕೆಟ್ ನೀಡಿದ್ದು, ಗೋವಿಂದರಾಜನಗರ ಕ್ಷೇತ್ರದಿಂದ ಕೃಷ್ಣಪ್ಪ ಪುತ್ರ ಪ್ರಿಯಾಕೃಷ್ಣಗೆ ಟಿಕೆಟ್ ನೀಡಲಾಗಿದೆ. ರಾಣೆ ಬೆನ್ನೂರು ಕ್ಷೇತ್ರದಿಂದ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಅವರ ಪುತ್ರ ಪ್ರಕಾಶ್‌ಕೋಳಿವಾಡ ಅವರಿಗೆ ಟಿಕೆಟ್ ನೀಡಲಾಗಿದೆ.
ಪಾವಗಡದಿಂದ ಹಾಲಿ ಶಾಸಕ ವೆಂಕಟರಮಣಪ್ಪ ಬದಲು ಅವರ ಪುತ್ರನಿಗೆ ಟಿಕೆಟ್ ಸಿಕ್ಕಿದ್ದು, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರ ಪುತ್ರ ಹಾಲಿ ಶಾಸಕ ಗಣೇಶ್ ಹುಕ್ಕೇರಿ, ಬೆಳಗಾವಿಯ ಸದಲಗ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ವರುಣಾ ಕ್ಷೇತ್ರದ ಹಾಲಿ ಶಾಸಕರಾಗಿದ್ದ ಯತೀಂದ್ರ ಸಿದ್ದರಾಮಯ್ಯ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ್ದಾರೆ.
ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕರ ಪೈಕಿ ಪುಲಿಕೇಶಿನಗರದ ಅಖಂಡ ಶ್ರೀನಿವಾಸಮೂರ್ತಿ, ಹರಿಹರದ ಎಂ. ರಾಮಪ್ಪ, ಕುಂದಗೋಳದ ಕುಸುಮಾಶಿವಳ್ಳಿ, ಲಿಂಗಸುಗೂರಿನ ಡಿ.ಎಸ್. ವಲಗೇರಿ, ಅಬ್ಸಲಾಪುರದ ಎಂ.ವೈ. ಪಾಟೀಲ, ಶಿಡ್ಲಘಟ್ಟದ ವಿ. ಮುನಿಯಪ್ಪ ಇವರುಗಳಿಗೆ ಟಿಕೆಟ್ ಘೋಷಿಸಿಲ್ಲ. ಉಳಿದಂತೆ ಎಲ್ಲ ಹಾಲಿ ಶಾಸಕರುಗಳಿಗೂ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ.
ಬಿಜೆಪಿ ತೊರೆದು ಇತ್ತೀಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಯಾದ ಯು.ಬಿ. ಬಣಕಾರ್‌ರವರಿಗೆ ಹಿರೇಕೆರೂರು, ಪುಟ್ಟಣ್ಣ ಅವರಿಗೆ ರಾಜಾಜಿನಗರದಿಂದ ಟಿಕೆಟ್ ನೀಡಲಾಗಿದೆ. ಪಕ್ಷೇತರ ಶಾಸಕರಾಗಿದ್ದ ಶರತ್‌ಬಚ್ಚೇಗೌಡ ಹೊಸಕೋಟೆಯಿಂದ, ಹೆಚ್. ನಾಗೇಶ್ ಮಹದೇವಪುರದಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್‌ರವರಿಗೆ ಬಸವನಗುಡಿ ಟಿಕೆಟ್‌ನ್ನು ಕಾಂಗ್ರೆಸ್ ಪಕ್ಷ ನೀಡಿದೆ.
ಇತ್ತೀಚೆಗೆ ನಿಧನರಾಗಿದ್ದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ರವರ ಪುತ್ರನಿಗೂ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಕ್ಕಿದ್ದು, ಧ್ರುವನಾರಾಯಣ್‌ಪುತ್ರ ದರ್ಶನ್ ಧ್ರುವನಾರಾಯಣ್, ನಂಜನಗೂಡಿನಿಂದ ಕಣಕ್ಕಿಳಿಯುವರು. ಇಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪರರಿಗೆ ಟಿ. ನರಸೀಪುರದಿಂದ ಕಣಕ್ಕಿಳಿಯುವಂತೆ ಪಕ್ಷ ಸೂಚಿಸಿದ್ದು, ಮಹದೇವಪ್ಪ ಪುತ್ರ ಸುನಿಲ್‌ಬೋಸ್‌ರವರಿಗೆ ಟಿಕೆಟ್ ಸಿಕ್ಕಿಲ್ಲ.
ಬೆಳ್ತಂಗಡಿಯಲ್ಲಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಸಹೋದರ ಬಿ.ಕೆ. ಶಿವರಾಂ ಪುತ್ರ ರಕ್ಷಿತ್ ಶಿವರಾಮ್‌ರವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕರ ಜತೆ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಬಹುತೇಕ ಮಾಜಿ ಶಾಸಕರಿಗೆ ಟಿಕೆಟ್ ಸಿಕ್ಕಿದೆ. ರಾಮನಗರ ಕ್ಷೇತ್ರದಿಂದ ಇಕ್ಬಾಲ್ ಹುಸೇನ್‌ರವರಿಗೆ ಟಿಕೆಟ್ ಸಿಕ್ಕಿದೆ.
ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಅಳೆದು ತೂಗಿ ಜಾತಿ ಲೆಕ್ಕಾಚಾರದ ಮೇಲೆ ಗೆಲ್ಲುವ ಮಾನದಂಡ ಹಾಗೂ ಸಮೀಕ್ಷಾ ವರದಿಯನ್ನಿಟ್ಟುಕೊಂಡು ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ 32 ಲಿಂಗಾಯತ, 19 ಒಕ್ಕಲಿಗ, 22 ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ 5, 8 ಮುಸ್ಲಿಂ, 5 ಬ್ರಾಹ್ಮಣ, 5 ಕುರುಬ, 20 ಹಿಂದುಳಿದ ವರ್ಗಗಳಿಗೆ ಸೇರಿದವರಿಗೆ ಟಿಕೆಟ್ ನೀಡಲಾಗಿದೆ. ಉಳಿದಂತೆ ರೆಡ್ಡಿ ಸಮುದಾಯದವರಿಗೆ 5, ಈಡಿಗ ಸಮುದಾಯದವರಿಗೆ 4, ಕ್ರೆöÊಸ್ತ ಸಮುದಾಯದವರಿಗೆ 1, ಭಂಟ ಸಮುದಾಯದವರಿಗೆ 1, ಮರಾಠ, ರಜಪೂತ ಸಮುದಾಯದವರಿಗೆ ತಲಾ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ.
ಕೆಲ ಕ್ಷೇತ್ರಗಳಲ್ಲಿ ಬಂಡಾಯ ಹೊಗೆ:
ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಹೊರಬೀಳುತ್ತಿದ್ದಂತೆಯೇ ಹಲವು ಕ್ಷೇತ್ರಗಳಲ್ಲಿ ಬಂಡಾಯದ ಸದ್ದು ಮೊಳಗಿದೆ. ಬೆಂಗಳೂರಿನ ರಾಜಾಜಿನಗರ, ಮಹದೇವಪುರ, ಸಾಗರ, ನೆಲಮಂಗಲ ಕ್ಷೇತ್ರಗಳಲ್ಲಿ ಅತೃಪ್ತಿ, ಅಸಮಾಧಾನ ಕಾಣಿಸಿಕೊಂಡಿದೆ.
ರಾಜಾಜಿನಗರ ಕ್ಷೇತ್ರದಿಂದ ಲಿಂಗಾಯತರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇತ್ತು. ಆದರೆ, ಲಿಂಗಾಯತ ಸಮುದಾಯಕ್ಕೆ ಸೇರಿದ ಮಾಜಿ ಉಪಮೇಯರ್ ಬಿ.ಎಸ್. ಪುಟ್ಟರಾಜು ಬದಲು ಪುಟ್ಟಣ್ಣ ಅವರಿಗೆ ಟಿಕೆಟ್ ನೀಡಿರುವುದ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ. ಹಾಗೆಯೇ, ಮಹದೇವಪುರ ಕ್ಷೇತ್ರದಿಂದ ಪಕ್ಷೇತರ ಶಾಸಕ ಹೆಚ್. ನಾಗೇಶ್‌ವರಿಗೆ ಟಿಕಟ್ ನೀಡಿರುವುದು ಮೂಲ ಕಾಂಗ್ರೆಸ್ಸಿಗರಲ್ಲಿ ಅತೃಪ್ತಿ ಮೂಡಿಸಿದೆ.
ಶಿವಮೊಗ್ಗದ ಸಾಗರ ಕ್ಷೇತ್ರದಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪರವರ ಪುತ್ರಿಗೆ ಟಿಕೆಟ್ ನೀಡಿಲ್ಲ. ಇಲ್ಲಿ ಕಾಗೋಡು ಅವರ ತಂಗಿ ಮಗ ಮಾಜಿ ಶಾಸಕ ಗೋಪಾಲಕೃಷ್ಣ ಬೇಲೂರು ಅವರಿಗೆ ಟಿಕೆಟ್ ನೀಡಲಾಗಿದೆ. ನೆಲಮಂಗಲ ಕ್ಷೇತ್ರದಿಂದ ನಿವೃತ್ತ ಐಆರ್‌ಎಸ್ ಅಧಿಕಾರಿ ಪುಟ್ಟದಾಸ್ ಅವರು ಟಿಕೆಟ್ ಸಿಕ್ಕದಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ಇಲ್ಲಿ ಶ್ರೀನಿವಾಸ್ ಕೈ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ