ಮುಂದುವರೆದ ಅತಿಥಿ ಉಪನ್ಯಾಸಕರ ಧರಣಿ

ತುಮಕೂರು:


ಅತಿಥಿ ಉಪನ್ಯಾಸಕರ ಸಂಘಟನೆಗಳ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ನಾಲ್ಕೈದು ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿಯ ಅಮಾನಿಕೆರೆ ಮುಂಭಾಗ ಸತ್ಯಾಗ್ರಹ ನಡೆಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಬೆಂಬಲ ಸೂಚಿಸಿದೆ.

ಅತಿಥಿ ಉಪನ್ಯಾಸಕರನ್ನು ಬೆಂಬಲಿಸಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಮುರಳೀಧರ ಹಾಲಪ್ಪ ಮಾತನಾಡಿ, ಶಿಕ್ಷಕರು ದೇವರು, ವಿದ್ಯೆ ಕಲಿತಿದ್ದೇವೆ ಎಂದರೆ ಅದು ಶಿಕ್ಷಕರನ್ನು ನಾವು ನೆನೆಯುತ್ತೇವೆ, ಅಂತಹ ಶಿಕ್ಷಕ ವೃತ್ತಿಯನ್ನು ಗೌರವಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಕೂಡ ಆಗಿದೆ.

ಅಂತಹುದರಲ್ಲಿ ರಾಜ್ಯಾದ್ಯಂತ ಇಂದು ಸುಮಾರು 14500 ಮಂದಿ ಅತಿಥಿ ಉಪನ್ಯಾಸಕರು ಅದರಲ್ಲೂ ತುಮಕೂರು ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರು ವೇತನ ಮತ್ತು ಖಾಯಂ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಇತ್ತ ತಿರುಗಿಯೂ ನೋಡದೇ ಇರುವುದು ದುರಂತ ಎಂದರು.

ಕೆಲಸ ಸಿಕ್ಕಿದೆ ಎಂದು ಕೆಲವರು ಮದುಗೆ ಮಾಡಿಕೊಂಡು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ, ಇನ್ನೂ ಕೆಲವರು ಸಾಲ ಸೋಲ ಮಾಡಿ ಮನೆ ಕಟ್ಟಿ ಸಾಲ ಕಟ್ಟದಂತಹ ಪರಿಸ್ಥಿತಿಯಲ್ಲಿ ಕೆಲವರಿದ್ದಾರೆ, ಮಕ್ಕಳಿಗೆ ಶಾಲಾ ಶುಲ್ಕ, ಮನೆ ಬಾಡಿಗೆ ಕಟ್ಟಲಾಗದಂತಹ ಪರಿಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರು ತಮ್ಮ ಜೀವನ ಸಾಗಿಸುತ್ತಿದ್ದಾರೆ,

ವರ್ಷಕ್ಕೆ ನಾಲ್ಕೈದು ತಿಂಗಳುಗಳಿಂದ ವೇತನವಿಲ್ಲ, ವೇತನ ನೀಡಿದರೂ ಸಹ ಕೇವಲ 9ರಿಂದ 11 ಸಾವಿರ ಮಾತ್ರ. ಇದರಲ್ಲಿ ಅತಿಥಿ ಉಪನ್ಯಾಸಕರು ತಮ್ಮ ಕುಟುಂಬವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂದು ಪ್ರಶ್ನಿಸಿದರು.

ಕೇವಲ 14500 ಅತಿಥಿ ಉಪನ್ಯಾಸಕರಷ್ಟೇ ಅಲ್ಲ, ಅವರನ್ನು ಅವಲಂಬಿತರಾಗಿರುವ ಕುಟುಂಬವರ್ಗದವರನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸ್ಪಂಧಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಈ ಕೂಡಲೇ ಅತಿಥಿ ಉಪನ್ಯಾಸಕರ ನ್ಯಾಯಬದ್ಧವಾದ ಬೇಡಿಕೆಗಳನ್ನು ಒಪ್ಪಿಕೊಂಡು ಈಡೇರಿಸಬೇಕು, ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ನಾವು ಸದಾ ಬೆಂಬಲವಾಗಿರುತ್ತೇವೆ, ಆದಷ್ಟು ಬೇಗ ನಿಮ್ಮ ಸಮಸ್ಯೆಗಳನ್ನು ಸರ್ಕಾರ ಈಡೇರಿಸಿ ನೀವು ಮತ್ತು ನಿಮ್ಮ ಕುಟುಂಬ ಸಂತೋಷವಾಗಿರಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇನೆ, ನಿರುದ್ಯೋಗ ಹೋಗಲಾಡಿಸಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಡುತ್ತೇನೆ ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಬಿಜೆಪಿ ಅಧಿಕಾರಕ್ಕೆ ತಂದರೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತೇವೆ, ಕಾಂಗ್ರೆಸ್‍ನವರು ವಿದೇಶದಲ್ಲಿ ಬಚ್ಚಿಟ್ಟಿರುವ ಹಣವನ್ನೆಲ್ಲಾ ತಂದು ನಿಮ್ಮ ಖಾತೆಗಳಿಗೆ ಜಮಾ ಮಾಡುತ್ತೇನೆ ಎಂದಿದ್ದರು.

ಎಲ್ಲಾ ಬೆಲೆಗಳನ್ನು ಕಡಿಮೆ ಮಾಡುತ್ತೇವೆ, ರೈತರಿಗೆ, ದೀನ ದಲಿತರಿಗೆ ಸಹಾಯ ಮಾಡುತ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡಿ, ಅಧಿಕಾರಕ್ಕೆ ಬಂದ ನಂತರ ಯುವಕರು, ನಿರುದ್ಯೋಗಿಗಳು ಉದ್ಯೋಗ ಕೇಳಿದರೆ ಬೋಂಡಾ, ಟೀ ಮಾರಿ ಉದ್ಯೋಗ ಮಾಡಿ ಜೀವನ ನಡೆಸಿ ಎಂದು ಹೇಳುತ್ತೀರಲ್ಲ ನಿಮಗೆ ನಾಚಿಕೆಯಾಗಲ್ಲವೇ ಎಂದು ಪ್ರಶ್ನಿಸಿದರು.

ಬಡತನದಲ್ಲಿ ಕಷ್ಟಪಟ್ಟು ಓದಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ತಮ್ಮ ಜೀವನ ನಿರ್ವಹಣೆಯೂ ಸಹ ಕಷ್ಟದಲ್ಲಿರುವಾಗ ಉದ್ಯೋಗವೂ ಖಾಯಂ ಇಲ್ಲ, ವೇತನವೂ ನೀಡುತ್ತಿಲ್ಲ, ಇವರ ಕಣ್ಣೀರು ನಿಮಗೆ ಒಳ್ಳೆಯದಾಗುವುದಿಲ್ಲ, ಕೂಡಲೇ ಅತಿಥಿ ಉಪನ್ಯಾಸಕರಿಗೆ ವೇತನ ಬಿಡುಗಡೆ ಮಾಡಬೇಕು, ಮತ್ತು ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಬೇಕು,

ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರುಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆಂಚಮಾರಯ್ಯ, ಚಂದ್ರಶೇಖರ್ ಗೌಡ, ಮರಿಚೆನ್ನಮ್ಮ, ರೇವಣ್ಣ ಸಿದ್ದಯ್ಯ, ಗ್ರಾಪಂ ಸದಸ್ಯ ಯದು,

ಗೀತಾ, ಸಾಹೇರ ಬಾನು,ಅತಿಥಿ ಉಪನ್ಯಾಸಕರಾದ ಶಿವಣ್ಣ ತಿಮ್ಲಾಪುರ, ಕುಮಾರ್, ಸುನೀಲ್ ಕುಮಾರ್, ಅಂಜನಮೂರ್ತಿ, ಗಂಗಾಧರ, ಶ್ರೀನಿವಾಸಯ್ಯ, ಆನಂದ, ಲಕ್ಷ್ಮೀಭಟ್, ಸವಿತಾ, ಡಾ. ತಿಮ್ಮರಾಜು, ರಂಗಧಾಮಯ್ಯ ಸೇರಿದಂತೆ ಇತರೆ ಉಪನ್ಯಾಸಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap