ಅಡುಗೆ ಎಣ್ಣೆ, ಹಣ್ಣು ತುಟ್ಟಿ : ಸೊಪ್ಪು, ತರಕಾರಿ ಅಗ್ಗ

ತುಮಕೂರು:

ಕೋಳಿ ಮಾಂಸ ದುಬಾರಿ : ಮಾಂಸ ಪ್ರಿಯರ ಜೇಬಿಗೆ ಕತ್ತರಿ

ಶಿವರಾತ್ರಿ ಹಬ್ಬವಿರುವ ಕಾರಣ ಈ ವಾರ ಹಣ್ಣುಗಳ ಬೆಲೆ ತುಸು ಹೆಚ್ಚಾಗಿದೆ. ಉಪವಾಸ, ಜಾಗರಣೆಗಾಗಿ ಜನರು ಹೆಚ್ಚು ಹಣ್ಣುಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.

ಅಲ್ಲದೇ ಹಬ್ಬದ ಅಡುಗೆಗಾಗಿ ಬಳಸುವ ಸೊಪ್ಪು-ತರಕಾರಿಗಳಿಗೂ ಬೇಡಿಕೆ ಹೆಚ್ಚಿದ್ದು ಜನರು ಹೆಚ್ಚು ಕಾಯಿ-ಪಲ್ಲೆ ಖರೀದಿಸುತ್ತಿದ್ದಾರೆ. ಈ ನಡುವೆ ಮಸಾಲೆ ಪದಾರ್ಥ ಮತ್ತು ಖಾದ್ಯ ತೈಲದ ಬೆಲೆಗಳು ಒಮ್ಮೆಲೆ ಏರಿಕೆ ಕಂಡಿವೆ. ಬ್ರಾಯ್ಲರ್ ಕೋಳಿ ಮಾಂಸದ ಬೆಲೆಯೂ ದಿಢೀರನೆ ತುಟ್ಟಿಯಾಗಿದ್ದು, ಮಾಂಸ ಪ್ರಿಯರ ಜೇಬಿಗೆ ಹೆಚ್ಚುವರಿ ಹೊರೆ ಬಿದ್ದಿದೆ.

ಮೆಣಸಿನಕಾಯಿ ಮತ್ತೆ ದುಬಾರಿ :

ಕಳೆದ ವಾರ 80 ರೂ. ಇದ್ದ ಹಸಿ ಮೆಣಸಿನಕಾಯಿ ಬೆಲೆ ಈ ವಾರ 20 ರೂ. ಹೆಚ್ಚಿದ್ದು ಕೆಜಿಗೆ 100 ರೂ. ನಂತೆ ಮಾರಾಟವಾಗುತ್ತಿದೆ. 70 ರೂ. ಇದ್ದ ಕ್ಯಾಪ್ಸಿಕಂ ಬೆಲೆ 50-60 ರೂ. ಗೆ ಇಳಿದಿದೆ. ಮಿಕ್ಕಂತೆ ಪಟ್ಲಿಕಾಯಿ-30 ರೂ., ಹೀರೆಕಾಯಿ-40 ರೂ., ಬೆಂಡೆಕಾಯಿ-40 ರೂ., ಗೋರಿಕಾಯಿ-40 ರೂ.

ಹಸಿ ಬಟಾಣಿ 50-120 ರೂ., ಹಾಗೂ ನಾಟಿ ಕೊತ್ತಂಬರಿ-40 ರೂ., ಫಾರಮ್ ಕೊತ್ತಂಬರಿ-30 ರೂ., ಸಬ್ಸಿಗೆ-40 ರೂ., ದಂಟು-40 ರೂ., ಪಾಲಕ್-40 ರೂ., ಪುದೀನಾ-30 ರೂ., ಚಕ್ಕೊತ-50 ರೂ., ಮೆಂತ್ಯೆ ಸೊಪ್ಪು-50 ರೂ. ನಂತೆ ಮಾರಾಟವಾಗುತ್ತಿವೆ. ಹಬ್ಬದ ಕಾರಣ ಜನರು ತರಕಾರಿ-ಸೊಪ್ಪು ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.

ಇದಕ್ಕೆ ಬೆಲೆ ಕಡಿಮೆ ಇರುವುದು ಪೂರಕವಾಗಿದೆ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ತರಕಾರಿ ಸಗಟು ವ್ಯಾಪಾರಿ ವಾಸು.

ಬಾಳೆಹಣ್ಣು ದುಬಾರಿ : ಶಿವರಾತ್ರಿ ಹಬ್ಬ ಸಮೀಪಿಸುತ್ತಿದ್ದಂತೆ ಹಣ್ಣುಗಳ ಬೆಲೆ ಮತ್ತಷ್ಟು ಏರಿಕೆಯಾಗಿದೆ. 35-40 ರೂ. ಗೆಲ್ಲಾ ಸಿಗುತ್ತಿದ್ದ ಏಲಕ್ಕಿ ಬಾಳೆಹಣ್ಣು ಈ ವಾರ ಕೆಜಿಗೆ 50-60 ರೂ. ನಂತೆ ಮಾರಾಟವಾಗುತ್ತಿದೆ. ಕಳೆದ ವಾರ 160 ರೂ. ಇದ್ದ ಸೇಬಿನ ಬೆಲೆ 220 ರೂ. ಗೆ ಏರಿಕೆ ಕಂಡಿದೆ.

ಮಿಕ್ಕಂತೆ ಮೋಸಂಬಿ, ಕಿತ್ತಳೆ, ಪಚ್ಚೆಬಾಳೆ, ದ್ರಾಕ್ಷಿ ಬೆಲೆಗಳು ಯಥಾಸ್ಥಿತಿ ಇವೆ. ಕಲ್ಲಂಗಡಿ, ಕರಬೂಜ ಬೆಲೆಗಳು ಕಳೆದ ವಾರಕ್ಕಿಂತ 10 ರೂ. ಏರಿಕೆ ಕಂಡಿವೆ. ಶಿವರಾತ್ರಿ ಹಬ್ಬದ ಉಪವಾಸದ ಕಾರಣ ಹಣ್ಣುಗಳ ವ್ಯಾಪಾರ ಜೊರಾಗಿದ್ದು, ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಬಾಳೆಹಣ್ಣಿಗೆ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ ಟಿಕೆಪಿ ಫ್ರೂಟ್ಸ್ ಸ್ಟಾಲ್‍ನ ಮಾಲೀಕ ವೆಂಕಟೇಶ್.

ಬ್ರಾಯ್ಲರ್ ದುಬಾರಿ : ಕಳೆದ ವಾರ ಕೆ.ಜಿ.ಗೆ 140 ರೂ. ನಂತೆ ಮಾರಾಟವಾಗುತ್ತಿದ್ದ ಬ್ರಾಯ್ಲರ್ ಕೋಳಿ ಮಾಂಸದ ಬೆಲೆ ಈ ವಾರ ದಿಢೀರನೆ 180 ರೂ. ಗೆ ಏರಿಕೆಯಾಗಿದೆ. ಹಾಗೂ ಫಾರಂ ಕೋಳಿ ಮಾಂಸ ಕೆ.ಜಿ. 120 ರೂ. ನಂತೆ ಮಾರಾಟವಾಗುತ್ತಿದೆ.

ಮೊಟ್ಟೆ 1 ಡಜನ್ ಗೆ 60 ರೂ. ಇದೆ. ಸದ್ಯಕ್ಕೆ ಕೋಳಿ ಮಾಂಸ ಇಳಿಯುವ ಸಾಧ್ಯತೆ ಕಡಿಮೆ, ಮೊಟ್ಟೆ ಧಾರಣೆಯಲ್ಲಿ ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಹುಳಿಯಾರಿನ ಕೋಳಿ ವರ್ತಕ ಕರವೇ ಶ್ರೀನಿವಾಸ್.

ಅಡುಗೆ ಎಣ್ಣೆ ದುಬಾರಿ :

ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿಮೆ ಮಾಡಿದ ನಂತರ ಬೆಲೆ ಇಳಿಕೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳುತ್ತಲೇ ಬಂದಿದ್ದರೂ, ಅಲ್ಪ ಕಡಿಮೆಯಾದಂತೆ ಕಂಡರೂ ಮತ್ತೆ ಏರಿಕೆಯಾಗುತ್ತಲೇ ಇದ್ದು, ಈ ವಾರ ಗಗನಮುಖಿಯಾಗಿದೆ.

ಹಿಂದಿನ ವಾರ ಕೆಜಿ 140 ರೂ. ನಂತೆ ಮಾರಾಟವಾಗುತ್ತಿದ್ದ ಸನ್‍ಫ್ಲವರ್ ಈ ವಾರ 150 ರೂ. ಗೆ ಏರಿಕೆಯಾಗಿದೆ. ಫಾಮಾಯಿಲ್ ಕೆಜಿ 128 ರೂ. ನಿಂದ 143 ರೂ. ಗೆ ಏರಿಕೆ ಕಂಡಿದೆ.

(ಅಂತರಸನಹಳ್ಳಿ ಮಾರುಕಟ್ಟೆ)

ಹಣ್ಣುಗಳ ಧಾರಣೆ
(ಬೆಲೆ ಕೆ.ಜಿ ರೂ.)

ಸೇಬು 180-220
ದಾಳಿಂಬೆ 180-200
ಮೊಸಂಬಿ 80
ನಾಟಿ ಕಿತ್ತಳೆ 60-80
ಸಪೋಟ 40-60
ಏಲಕ್ಕಿ ಬಾಳೆ 40-50
ಪಚ್ಚ ಬಾಳೆ 20
ಪಪ್ಪಾಯ 30
ಕಲ್ಲಂಗಡಿ 30
ಕರಬೂಜ 30-40
ಸೀಬೆ 80
ಪೈನಾಪಲ್ 60
ದ್ರಾಕ್ಷಿ 80

ತರಕಾರಿ (ಬೆಲೆ ಕೆ.ಜಿ ರೂ.)

ಟೊಮೆಟೊ 10-20
ಈರುಳ್ಳಿ 35-40
ಆಲೂಗಡ್ಡೆ 25-30
ಬೀನ್ಸ್ 15-20
ಕ್ಯಾರೆಟ್ 40-50
ಬೀಟ್ರೂಟ್ 25-30
ಮೂಲಂಗಿ 10-15
ಗಡ್ಡೆಕೋಸು 15-20
ನುಗ್ಗೆಕಾಯಿ 400
ಬದನೆಕಾಯಿ 20-25
ಎಲೆಕೋಸು 15-20
ಹೂಕೋಸು 10
ಹಸಿ ಮೆಣಸಿನಕಾಯಿ 100
ಕ್ಯಾಪ್ಸಿಕಂ 50-60

ಮೊಟ್ಟೆ/ಮಾಂಸ ಬೆಲೆ (ಕೆ.ಜಿಗೆ)
ಬ್ರಾಯ್ಲರ್ 180
ಫಾರಂ 110
ನಾಟಿ ಕೋಳಿ ಮಾಂಸ 250-300
ಮಟನ್ 600-650
ಮೀನು (ಸಾಮಾನ್ಯ) 120-150
ಮೊಟ್ಟೆ
(1 ಡಜನ್) 60

ಕೊಬ್ಬರಿ ಧಾರಣೆ
(ತಿಪಟೂರು)
ಪ್ರತಿ ಕ್ವಿಂಟಾಲ್
ಕನಿಷ್ಠ 16,500
ಗರಿಷ್ಠ 17,900
ಮಾದರಿ 17,500
ಒಟ್ಟು ಆವಕ–1756.97 ಕ್ವಿಂಟಾಲ್
(4086 ಚೀಲ)

          -ಚಿದಾನಂದ್ ಹುಳಿಯಾರು

 

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap