ಹುಳಿಯಾರಿನಲ್ಲಿ ಗುರುವಾರ ಮಳೆ ಬಂದ್ರೆ ಸಂತೆ ಬಲಿ !

ಹುಳಿಯಾರು:

     ಮಳೆರಾಯನೇ ವಾರದಲ್ಲಿ ಆರು ದಿನವೂ ಬಾರಪ್ಪ, ಆದರೆ ಗುರುವಾರ ಮಾತ್ರ ಬರಬೇಡಪ್ಪ ಎಂದು ಬೇಡುವ ಪರಿಸ್ಥಿತಿ ಹುಳಿಯಾರಿನ ಸಂತೆ ರೈತರಿಗೆ ಬಂದೊದಗಿದೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುರುವಾರದ ಮಳೆ ಇಲ್ಲಿನ ರೈತರ ಸಂಭ್ರಮಕ್ಕೆ ತೊಡಕಾಗಿದೆ.

       ಹೌದು, ಹುಳಿಯಾರಿನಲ್ಲಿ ಗುರುವಾರ ಮಳೆ ಬಂದರೆ ಸಂತೆ ವ್ಯಾಪಾರಿಗಳು, ಗ್ರಾಹಕರು ಪತ್ತರಗುಟ್ಟುತ್ತಾರೆ. ಇಡೀ ಸಂತೆ ಕೆಸರುಗದ್ದೆಯಾಗುತ್ತದೆ. ತರಕಾರಿಗಳು, ದಿನಸಿ ಪದರ್ಥಾಗಳು ನೀರುಪಾಲಾಗುತ್ತವೆ. ಅಕ್ಷರಶಃ ರೈತರ ಬದುಕು ಬಲಿಯಾಗುತ್ತದೆ.

      ಹುಳಿಯಾರಿನಲ್ಲಿ ಸುಮಾರು ವರ್ಷಗಳಿಂದ ನಡೆಯುವ ಗುರುವಾರದ ಸಂತೆ ತುಂಬಾ ಪ್ರಸಿದ್ಧಿ. ನೂರಾರು ಹಳ್ಳಿಗಳಿಂದ ಸಾವಿರಾರು ಜನರು ಈ ಸಂತೆಗೆ ಬಂದೋಗುತ್ತಾರೆ. ಆದರೆ ಈ ಸಂತೆಗೆ ಕನಿಷ್ಟ ಮೂಲ ಸೌಲಭ್ಯ ಕಲ್ಲಿಸಿಲ್ಲ. ಪರಿಣಾಮ ವ್ಯಾಪಾರಿಗಳು ರಸ್ತೆಯಲ್ಲಿ, ಮಣ್ಣಿನಲ್ಲಿಯೇ ಕುಳಿತು ವ್ಯಾಪಾರ ಮಾಡಬೇಕು. ಪ್ಲಾಸ್ಟಿಕ್ ಮತ್ತು ಟಾರ್ಪಾಲ್‍ಗಳ ನೆರಳಿನಲ್ಲಿ ಅಂಗಡಿಗಳನ್ನು ಹಾಕಿಕೊಳ್ಳಬೇಕು. ಮಳೆ ಜೊತೆ ಗಾಳಿ ಬಂದರಂತೂ ಇವರ ಪಾಡು ದೇವರೆ ಗತಿ.

      ಬಿಸಿಲ ಝಳ ಎದುರಿಸಿ ಗಂಟಲು ಹರಿದೋಗುವ ಹಾಗೆ ಕೂಗಿ ಕೂಗಿ ಗ್ರಾಹಕರನ್ನು ಸೆಳೆಯಬೇಕು. ಮಳೆ ಬಂದರೆ ತಾನು ನೆನೆದು ಸೊಪ್ಪು, ತರಕಾರಿ ರಕ್ಷಿಸಬೇಕು. ಮಳೆಯಿಂದಾದ ಕೆಸರು ಸಿಡಿಸಿಕೊಂಡು ವ್ಯಾಪಾರ ಮಾಡಬೇಕು. ಹೀಗೆ ತನಗೇನೇ ಕಷ್ಟ ಎದುರಾದರೂ ಸಹಿಸಿಕೊಂಡು ವ್ಯಾಪಾರಕ್ಕೆ ನಿಂತರೆ ಮಳೆಗೆ ಗ್ರಾಹಕರ ಸಂಖ್ಯೆ ಕ್ಷೀಣಿಸಿ ವ್ಯಾಪಾರವಿಲ್ಲದೆ ಪೆಚ್ಚುಮೋರೆ ಹಾಕಿಕೊಳ್ಳಬೇಕು.

     ಸಂತಗೆ ಬರುವ ಒಬ್ಬೊಬ್ಬ ರೈತರಿಂದಲೂ ಇಲ್ಲಿನ ಪಟ್ಟಣ ಪಂಚಾಯ್ತಿ ಸುಂಕ ವಸೂಲಿ ಮಾಡುತ್ತದೆ. ಇದು ವಾರ್ಷಿಕ ನಾಲ್ಕೈದು ಲಕ್ಷ ರೂ. ದಾಟುತ್ತದೆ. ಆದರೆ ಸುಂಕ ಸಂಗ್ರಹಿಸಿಸುವ ಪಪಂ ಇಲ್ಲಿನ ಕನಿಷ್ಟ ಮೂಲ ಸೌಕರ್ಯ ಕಲ್ಪಿಸಿಲ್ಲ. ನೆಲ ಹಾಸನ್ನು ಮಾಡಿಲ್ಲ, ಮೇಲ್ಗಡೆ ಹೊದಿಕೆಯೂ ಇಲ್ಲ. ಸುಮಾರು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದರೂ ಚುನಾಯಿತ ಪ್ರತಿನಿಧಿಗಳು ಮತ್ತು ಪಪಂ ಅಧಿಕಾರಿಗಳು ಗಮನವನ್ನೇ ಹರಿಸದೆ ನಿರ್ಲಕ್ಷ್ಯಿಸಿದ್ದಾರೆ.

    ಪ್ರತಿಬಾರಿಯೂ ಸಂತೆ ಸುಂಕ ಸಂಗ್ರಹದ ಹರಾಜು ಆಗುವ ಸಂದರ್ಭದಲ್ಲಿ ರೈತರು ಈ ಬಗ್ಗೆ ಗಮನ ಸೆಳೆದಿದ್ದರೂ ಕೆಲವೇ ದಿನಗಳಲ್ಲಿ ಮೌಲ ಸೌಕರ್ಯ ಕಲ್ಪಿಸುವ ಭರವಸೆ ನೀಡಿ ಹರಾಜು ಮುಗಿಸಿ ದುಡ್ಡು ಇಸ್ಕೊಂಡವರು ಪುನಃ ಇತ್ತ ತಿರುಗಿಯೂ ಸಹ ನೋಡೋದಿಲ್ಲ. ಪರಿಣಾಮ ಸಾಲ ಸೂಲ ಮಾಡಿ ಸಂತೆ ವ್ಯಾಪಾರಕ್ಕೆ ಬರುವವರು ಮಳೆಗೆ ವ್ಯಾಪಾರವೇ ಬಲಿಯಾಗುವುದನ್ನು ಕಂಡು ಗುರುವಾರ ಮಾತ್ರ ಹುಳಿಯಾರಿಗೆ ಮಳೆ ಬಾರದಿರಲಿ ಎಂದು ಪ್ರಾರ್ಥಿಸುತ್ತಾರೆ. ಹಾಗೆಯೇ ಮೂಲ ಸೌಕರ್ಯ ಕಲ್ಪಿಸದ ಇಲ್ಲಿನ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap