ಕೋವಿಡ್ ಟೆಸ್ಟ್ ರಿಪೋರ್ಟ್ ವಿಳಂಬ : ಸೋಂಕು ಹರಡಲು ರಹದಾರಿ

 ತುಮಕೂರು  :  

      ಕೊರೊನಾ ಎರಡನೆ ಅಲೆ ಇಷ್ಟು ಕ್ಷಿಪ್ರವಾಗಿ ಪಸರಿಸಲು ಸಾರ್ವಜನಿಕರ ನಿರ್ಲಕ್ಷ್ಯ ಹೇಗೆ ಕಾರಣವೋ ಸರ್ಕಾರಿ ಯಂತ್ರದ ಅವ್ಯವಸ್ಥೆಯೂ ಅಷ್ಟೇ ಕಾರಣವಾಗುತ್ತಿದೆ. ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಂಡುಬಂದ ಕೂಡಲೇ ಅದು ಕೋವಿಡ್ ಇರಬಹುದು ಎಂಬ ಸಾಮಾನ್ಯ ಗ್ರಹಿಕೆ ಈಗ ಸಾರ್ವಜನಿಕ ವಲಯದಲ್ಲಿ ಇದೆ. ಆರೋಗ್ಯ ಇಲಾಖೆಯೂ ಇದನ್ನೇ ಹೇಳುತ್ತದೆ. ದುರಂತವೆಂದರೆ ಈ ರೀತಿ ಲಕ್ಷಣಗಳಿರುವ ವ್ಯಕ್ತಿಗಳ ಪರೀಕ್ಷೆ ಮತ್ತು ವರದಿ ವಿಳಂಬವಾಗುತ್ತಿರುವುದು ಸೋಂಕು ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದೆ.

      ಕೋವಿಡ್-19 ಪರೀಕ್ಷೆಗೆ ರ್ಯಾಟ್ ಆಂಟಿಜನ್ ಟೆಸ್ಟ್, ಆರ್‍ಟಿಪಿಸಿಆರ್ ಮಾದರಿಗಳನ್ನು ಬಳಸಲಾಗುತ್ತದೆ. ಆರ್‍ಟಿಪಿಸಿಆರ್ ಪರೀಕ್ಷೆಗೆ ಹೆಚ್ಚು ಮಹತ್ವ ನೀಡಲಾಗಿದೆ. ಇದು ಸರ್ಕಾರಿ ಹಾಗೂ ಖಾಸಗಿ ವಲಯದ ಆಸ್ಪತ್ರೆಗಳಲ್ಲಿಯೂ ಲಭ್ಯವಿದೆ. ಸರ್ಕಾರಿ ವ್ಯವಸ್ಥೆಯ ಆಸ್ಪತ್ರೆಗಳಲ್ಲಿ ಈ ವರದಿ ಬರಬೇಕಾದರೆ ಒಂದು ವಾರದಿಂದ ಹಿಡಿದು 15 ದಿನಗಳವರೆಗೂ ಸಮಯ ತೆಗೆದುಕೊಳ್ಳುತ್ತಿದೆ. ಕೆಲವರ ವರದಿ 20 ದಿನಗಳ ನಂತರ ಕೈ ತಲುಪಿರುವ ಉದಾಹರಣೆಗಳಿವೆ. ಇನ್ನೂ ವಿಚಿತ್ರವೆಂದರೆ, ಟೆಸ್ಟ್‍ಗೆ ಕೊಟ್ಟ ವ್ಯಕ್ತಿ ಮರಣಿಸಿದ ನಂತರ ಕೋವಿಡ್ ವರದಿ ಬಂದಿರುವ ಸಾಕಷ್ಟು ಪ್ರಸಂಗಗಳಿವೆ. ಪರೀಕ್ಷೆಯಲ್ಲಿ ಹೀಗೆ ವಿಳಂಬವಾಗುತ್ತಿರುವುದನ್ನು ತಡೆಗಟ್ಟಲು ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಬೇಕಿತ್ತು.
ಆರ್‍ಟಿಪಿಸಿಆರ್ ಪರೀಕ್ಷೆ ಕೋವಿಡ್ ನೆಗೆಟಿವ್ ಅಥವಾ ಪಾಸಿಟಿವ್ ಗುರುತಿಸಿ ಚಿಕಿತ್ಸೆ ನೀಡಲಷ್ಟೆ ಮುಖ್ಯವಾಗುತ್ತಿಲ್ಲ. ಇನ್ನೂ ಇದರ ಜೊತೆಗೆ ಇತರೆ ಕೆಲಸ ಕಾರ್ಯಗಳಿಗೂ ಈ ಪರೀಕ್ಷಾ ವರದಿ ಅತ್ಯಗತ್ಯವಾಗಿ ಬೇಕಾಗಿದೆ. ಮಹಿಳೆಯರು ಹೆರಿಗೆಗೆ ದಾಖಲಾಗಲು, ಶಸ್ತ್ರಚಿಕಿತ್ಸೆಗೆ ಒಳಪಡುವುದು ಸೇರಿದಂತೆ ಇನ್ನಿತರ ಚಿಕಿತ್ಸೆಯ ಮುನ್ನ 24 ಗಂಟೆಗಳ ಒಳಗೆ ಪಡೆದ ಆರ್‍ಟಿಪಿಸಿಆರ್ ಪರೀಕ್ಷೆ ಕಡ್ಡಾಯ ಎಂದು ಪರಿಗಣಿಸಲಾಗುತ್ತಿದೆ. ಆದರೆ ವಾರ ಕಳೆದರೂ ಪರೀಕ್ಷಾ ವರದಿಯೇ ಬಾರದಿರುವುದರಿಂದ ಇಂತಹ ತಪಾಸಣೆಗಳಿಗೆ ಮತ್ತು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾದವರು ಪರಿತಪಿಸುವಂತಾಗಿದೆ.

      ಜ್ವರ, ಕೆಮ್ಮು ಸೇರಿದಂತೆ ವಿವಿಧ ರೀತಿಯ ಲಕ್ಷಣಗಳು ಇದ್ದಲ್ಲಿ ಅಂತಹವರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಗಳಿಗೆ ರವಾನಿಸಲಾಗುತ್ತದೆ. ಮಾದರಿಗಳನ್ನು ಪರೀಕ್ಷಿಸುವ ಪ್ರಯೋಗಾಲಯಗಳು ಐಸಿಎಂಆರ್ ಪೋರ್ಟಲ್‍ನಲ್ಲಿ ವಿವರವನ್ನು ನಮೂದಿಸಿ ವರದಿಯನ್ನು ನಿಗದಿತ ಚಿಕಿತ್ಸಾಲಯಗಳಿಗೆ ಹಾಗೂ ವ್ಯಕ್ತಿಗಳಿಗೆ ಕಳುಹಿಸುತ್ತದೆ. ಸರ್ಕಾರದ ಆದೇಶದ ಪ್ರಕಾರ ಆರ್‍ಟಿಪಿಸಿಆರ್ ಪರೀಕ್ಷೆ ಆದಲ್ಲಿ ಈ ಪ್ರಕ್ರಿಯೆ 24 ಗಂಟೆಯಿಂದ 72 ಗಂಟೆಯೊಳಗೆ ಪೂರ್ಣಗೊಳ್ಳಬೇಕು. ಆದರೆ ಈ ಅವಧಿಯೊಳಗೆ ವರದಿ ಬಾರದೆ ಇರುವುದು ಇಡೀ ಆರೋಗ್ಯ ವ್ಯವಸ್ಥೆಯ ಏರುಪೇರಿಗೆ ಕಾರಣವಾಗಿದೆ. ಪರೀಕ್ಷೆ ಮಾಡಿಸಿಕೊಂಡವರು ಹಲವರ ಸಂಪರ್ಕಕ್ಕೆ ಒಳಗಾಗುತ್ತಲೇ ಇದ್ದಾರೆ.
ಕೋವಿಡ್ ವರದಿ ವಿಳಂಬವಾಗುತ್ತಿರುವುದರಿಂದ ಎದುರಾಗಿರುವ ಅತ್ಯಂತ ಘೋರ ಹಾಗೂ ಆತಂಕಕಾರಿ ಸಂಗತಿ ಎಂದರೆ ಟೆಸ್ಟ್‍ಗೆ ಒಳಪಟ್ಟಿರುವ ವ್ಯಕ್ತಿಗಳು ವರದಿ ಬರುವ ತನಕ ರಾಜಾರೋಷವಾಗಿ ಓಡಾಡುತ್ತಿರುವುದು. ತನಗೆ ಲಕ್ಷಣಗಳಿವೆ ಅಥವಾ ಯಾವುದಾದರೂ ಕಾಯಿಲೆ ಸೂಚನೆಗಳಿವೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರವೇ ಗುರುತಿಸಿರುವ ಕೇಂದ್ರಗಳಿಗೆ ಹೋದರೆ ಕನಿಷ್ಠ ಒಂದು ವಾರದ ತನಕ ವರದಿ ಸಿಗಲಾರದು. ಈ ಅವಧಿಯಲ್ಲಿ ಪರೀಕ್ಷೆಗೆ ಒಳಗಾಗಿರುವಾತ ಬೇಕಾದಲ್ಲಿ ಓಡಾಡಿಕೊಂಡು ಇರುತ್ತಾನೆ. ಆ ವೇಳೆಗಾಗಲೇ ಆತನಲ್ಲಿ ಕೋವಿಡ್ ಸೋಂಕು ದೃಢಪಟ್ಟಿರಬಹುದು. ಆದರೆ ವರದಿ ಖಚಿತವಾಗುವ ತನಕ ಯಾರಿಗೂ ತಿಳಿಯದು. ವರದಿ ಬಂದ ನಂತರವಷ್ಟೇ ಎಲ್ಲರೂ ಗಾಬರಿಯಾಗುವುದು, ಆಡಳಿತ ಚುರುಕಾಗುವುದು. ಅಲ್ಲಿಯತನಕ ತನ್ನ ಮನೆ, ಬಂಧು ಬಳಗ, ಸ್ನೇಹಿತರೊಂದಿಗೆ ಲೀಲಾಜಾಲವಾಗಿ ಓಡಾಡಿಕೊಂಡಿದ್ದವರು ತನ್ನ ಸುತ್ತಮುತ್ತ ಇರುವ ಎಲ್ಲರಿಗೂ ಅಂಟಿಸಿರುವ ಅಪಾಯಗಳಿವೆ. ಕೋವಿಡ್ ಎರಡನೇ ಅಲೆ ಬೃಹದಾಕಾರವಾಗಿ ವ್ಯಾಪಿಸುತ್ತಿರುವುದು ಇದರಿಂದಲೇ ಎಂಬುದು ಖಚಿತವಾಗಿದ್ದರೂ ಈ ವಿಳಂಬ ತಡೆಗಟ್ಟಲು ಅಥವಾ ಪರ್ಯಾಯ ಮಾರ್ಗ ಕಂಡುಕೊಳ್ಳಲು ಸರ್ಕಾರ ಪ್ರಯತ್ನಗಳನ್ನು ಮಾಡದೆ ಇರುವುದು.

      ಕೋವಿಡ್ ಪರೀಕ್ಷಾ ವರದಿ ಸರ್ಕಾರಿ ವ್ಯವಸ್ಥೆಯ ಆಸ್ಪತ್ರೆಗಳಲ್ಲಿ ವಿಳಂಬವಾಗುತ್ತಿರುವುದರಿಂದಲೇ ಸಾರ್ವಜನಿಕರು ಖಾಸಗಿ ಆಶ್ಪತ್ರೆಗಳ ಲ್ಯಾಬ್‍ಗಳಿಗೆ ಮುಗಿಬಿದ್ದಿರುವುದು. ಅಲ್ಲಿ 24 ಗಂಟೆಗಳ ಒಳಗೆ ವರದಿ ಲಭ್ಯವಾಗುತ್ತಿದೆ. ಆದರೆ ದುಬಾರಿ ದರ ನೀಡಿ ಪರೀಕ್ಷಾ ವರದಿ ತರಬೇಕು. ಜನರಲ್ಲಿ ಈಗಾಗಲೇ ಗಾಬರಿ ಮೂಡಿಸಿರುವ ಈ ವೈರಾಣುವಿನಿಂದ ಪಾರಾಗಲು ಜನತೆ ಹಣ ನೀಡಲು ಸಿದ್ಧರಿದ್ದಾರೆ. ಆದರೆ ಬೇಗನೆ ವರದಿ ಸಿಗಬೇಕಷ್ಟೆ. ಸಿಲಿಕಾನ್ ಸಿಟಿ ಬೆಂಗಳೂರಿನಂತೆಯೇ ಕೋವಿಡ್ ಪ್ರಕರಣಗಳು ತುಮಕೂರು ಮತ್ತು ಈ ಜಿಲ್ಲೆಯಲ್ಲಿ ಅತ್ಯಧಿಕವಾಗಿ ಹೆಚ್ಚಳವಾಗುತ್ತಿದ್ದು, ವರದಿಗಾಗಿಯೇ ಜನ ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಂತೂ ಸತ್ಯ.

ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಪ್ರತಿದಿನ ಜನರು ತಪಾಸಣೆಗಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು, ತುಮಕೂರು ನಗರ ಮಾತ್ರವಲ್ಲದೆ, ಇತರೆ ತಾಲ್ಲೂಕುಗಳಿಂದಲೂ ರಾತ್ರಿಯವರೆಗೂ ಬಂದು ಕಾಯುತ್ತಿರುವುದು ಅವರ ಪೋಷಕರ ಆತಂಕ, ಸಮರ್ಪಕ ಮಾಹಿತಿ ಪಡೆಯಲಾಗದೆ ಏನು ಮಾಡಬೇಕು ಎಂಬ ದುಗುಡ ಇವೆಲ್ಲವೂ ಎದ್ದು ಕಾಣುತ್ತದೆ. ದಿನೆ ದಿನೆ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕ ಮಾಹಿತಿ ಹಾಗೂ ಆರೋಗ್ಯ ಸೌಲಭ್ಯಗಳ ಕಡೆಗೆ ಆಡಳಿತ-ಸರ್ಕಾರ ಹೆಚ್ಚು ಗಮನಿಸಬೇಕಾದ ಅಗತ್ಯವಿದೆ.

ಸಚಿವರು ಹೇಳಿದರೂ ಕಾರ್ಯಗತವಿಲ್ಲ :

      ಅಲ್ಲಲ್ಲಿ ಸಭೆ ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸೋಂಕಿತರ ಪರೀಕ್ಷಾ ವರದಿ 24 ಗಂಟೆಗಳ ಒಳಗೆ ತಲುಪಬೇಕು. ಅಂತಹ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು ಎಂದು ಹೇಳುತ್ತಲೇ ಇದ್ದಾರೆ. ಆದರೆ ಸಚಿವರ ಈ ಹೇಳಿಕೆಗಳು ಸಭೆಗಳಿಗೆ ಮತ್ತು ಮಾಧ್ಯಮಗಳ ವರದಿಗೆ ಸೀಮಿತವಾಗುತ್ತಿವೆ. ಮುಂದುವರಿದು ಈ ಸಮಸ್ಯೆ ನಿವಾರಣೆಗೆ ಏನು ಮಾಡಬೇಕು ಎಂಬುದರತ್ತ ಯಾರೂ ಗಮನ ಹರಿಸುತ್ತಿಲ್ಲ. ಪರಿಣಾಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಂಡವರು ಆತಂಕಕ್ಕೆ ಒಳಗಾಗಿ ಅಥವಾ ರೋಗ ಉಲ್ಬಣವಾಗಿ ಜಿಲ್ಲಾ ಮಟ್ಟದ ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳನ್ನು ಎಡತಾಕುತ್ತಿದ್ದಾರೆ. ಇದು ಜಿಲ್ಲೆಯ ಸಮಸ್ಯೆಯಲ್ಲ. ಇಡೀ ರಾಜ್ಯದ ಸಮಸ್ಯೆ.

 ನಾಮಕಾವಸ್ಥೆ ಹೋಂ ಐಸೋಲೇಷನ್ :

      ರೋಗ ಲಕ್ಷಣಗಳು ಗೋಚರಿಸಿದ ಕೂಡಲೇ ತಪಾಸಣೆಗೆ ಒಳಗಾಗಬೇಕು. ವರದಿ ಬರುವುದು ತಡವಾಗಲಿದೆ ಎಂಬುದು ಗೊತ್ತಾದ ಕೂಡಲೇ ಹೋಂ ಐಸೋಲೇಷನ್‍ಗೆ ಒಳಗಾಗಬೇಕು. ಇದರಿಂದ ಇತರರ ಸಂಪರ್ಕ ತಪ್ಪಿ ಸೋಂಕು ಹರಡುವುದು ಕಡಿಮೆಯಾಗುತ್ತದೆ. ಆದರೆ ವರದಿ ಬರುವವರೆಗೂ ಕಾಯುವವರೆ ಹೆಚ್ಚು. ವರದಿ ಬಂದ ನಂತರವೂ ಕೆಲವರು ಐಸೋಲೇಷನ್‍ಗೆ ಒಳಗಾಗುತ್ತಾರೆ. ಹೀಗೆ ಮನೆಯಲ್ಲಿಯೇ ಹೋಂ ಕ್ವಾರಂಟೈನ್‍ಗೆ ಒಳಗಾಗಿರುವವರಲ್ಲಿ ಅರ್ಧದಷ್ಟು ಜನ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ತಿಳಿದೋ… ತಿಳಿಯದೆಯೋ ಮನೆಯವರಿಗೆ ಅಂಟಿಸುತ್ತಿದ್ದಾರೆ. ಇತರರಿಗೂ ಸೋಂಕು ಹರಡಲು ಕಾರಣವಾಗುತ್ತಿದ್ದಾರೆ. ಕೆಲವರಷ್ಟೆ ಬಿಗಿ ನಿಯಮಗಳನ್ನು ಪಾಲಿಸುತ್ತಿದ್ದು, ಉಳಿದವರು ನಾಮಕಾವಸ್ಥೆ ಕ್ವಾರಂಟೈನ್‍ಗೆ ಒಳಗಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಎರಡನೇ ಅಲೆ ಆರಂಭದಲ್ಲಿಯೇ ಕೋವಿಡ್ ಕೇರ್ ಸೆಂಟರ್‍ಗಳನ್ನು ಪ್ರಾರಂಭಿಸಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಕಳೆದ ಬಾರಿಯೇ ಕ್ಯಾತ್ಸಂದ್ರ ಸೇರಿದಂತೆ ತಾಲ್ಲೂಕುವಾರು ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲಾಗಿತ್ತು. ಅಂತಹ ಕೇಂದ್ರಗಳನ್ನೇ ಈಗಲೂ ಆರಂಭದಲ್ಲೇ ಮುಂದುವರೆಸಿದ್ದರೆ ಸಾಕಾಗಿತ್ತು. ಆದರೆ ಪ್ರಕರಣಗಳು ನಾಲ್ಕೈದು ಪಟ್ಟು ದ್ವಿಗುಣಗೊಳ್ಳುತ್ತಿರುವ ಅತ್ಯಂತ ಸೂಕ್ಷ್ಮ ಕಾಲದಲ್ಲಿ ಕೇರ್ ಸೆಂಟರ್‍ಗಳನ್ನು ತೆರೆಯಲಾಗಿದೆ.

 ಸಾವಿನ ವರದಿಗಳೂ ವಿಳಂಬ :

      ಪ್ರತಿನಿತ್ಯ ತುಮಕೂರು ನಗರ ಹಾಗೂ ತಾಲ್ಲೂಕುಗಳ ವಿವಿಧ ಪ್ರದೇಶಗಳಲ್ಲಿ ಸಾವಿನ ಪ್ರಕರಣಗಳು ಕಂಡುಬರುತ್ತಲೇ ಇವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡುವ ದೈನಂದಿನ ವರದಿಯಲ್ಲಿ ಆ ಸಾವುಗಳ ಉಲ್ಲೇಖವೇ ಇರುವುದಿಲ್ಲ. ಸಾವನ್ನು ತಿಳಿದವರು, ಕಣ್ಣಾರೆ ಕಂಡವರು ಮಾಧ್ಯಮಗಳ ವರದಿ ನೋಡಿ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಕೆಲವೊಮ್ಮೆ ಮೂರ್ನಾಲ್ಕು ದಿನಗಳ ಹಿಂದೆ ಮರಣಿಸಿರುವ ವರದಿಗಳು ತಡವಾಗಿ ವರದಿಯಾಗುತ್ತಿವೆ. ಇದು ಯಾರ ವೈಫಲ್ಯ..? ಹೀಗೆ ತಡವಾಗುತ್ತಾ ಹೋದರೆ ಸಾರ್ವಜನಿಕರಲ್ಲಿ ಇರುವ ಗೊಂದಲ ಮತ್ತಷ್ಟು ಉಲ್ಬಣಗೊಳ್ಳುವುದಿಲ್ಲವೆ..? ನಿತ್ಯ ಸಂಭವಿಸುವ ಸಾವಿನ ಪ್ರಕರಣಗಳನ್ನು ಮರೆಮಾಚಲಾಗುತ್ತಿದೆಯೇ ಅಥವಾ ತಡವಾಗಿ ವರದಿ ಕೊಡಲಾಗುತ್ತಿದೆಯೇ ಎಂಬ ಗೊಂದಲಗಳು ಸಾರ್ವಜನಿಕ ವಲಯದಲ್ಲಿ ಹಾಗೆಯೇ ಉಳಿದು ಬಿಟ್ಟಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link