ಜಂಬೂಸವಾರಿ ಆರಂಭಕ್ಕೆ ಕ್ಷಣಗಣನೆ……!

ಬೆಂಗಳೂರು:

    ಐತಿಹಾಸಿಕ ಮೈಸೂರು ದಸರಾದ  ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕೆ ಮುನ್ನ ಮೈಸೂರು ಅರಮನೆ ಬಲರಾಮ ಗೇಟ್ ಬಳಿ ಸಿಎಂ ಸಿದ್ದರಾಮಯ್ಯ ನಂದಿಧ್ವಜ ಪೂಜೆ ನೆರವೇರಿಸಿದರು.

    ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ, ಸಚಿವರಾದ ಕೆ.ಹೆಚ್.ಮುನಿಯಪ್ಪ, ವೆಂಕಟೇಶ್, ಶಿವರಾಜ್ ತಂಗಡಗಿ, ಕೆ.ಎನ್.ರಾಜಣ್ಣ, ಭೈರತಿ ಸುರೇಶ್ ಹಾಗೂ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು.

    ಜಂಬೂ ಸವಾರಿಯಲ್ಲಿ ನಂದಿಗೆ ಅಗ್ರ ಪೂಜೆ ಸಲ್ಲಿಕೆಯಾಗುತ್ತದೆ. ಅದರಂತೆ ಇಂದು ಮಧ್ಯಾಹ್ನ 1.46ರಿಂದ 2.08ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿದರು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ ಎದುರು ಇರುವ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ಅವರು, ಜಂಬೂ ಸವಾರಿಗೆ ಅಧಿಕೃತ ಚಾಲನೆಯನ್ನು ನೀಡಿದರು. ಈ ವೇಳೆ ವೀರಗಾಸೆ ತಂಡದವರು ಭಾಗಿಯಾಗಿದ್ದರು. ದಶಕಗಳಿಂದ ಉಡಿಗಾಲ ಮಹದೇವಸ್ವಾಮಿ ನೇತೃತ್ವದ ಈ ತಂಡ ಭಾಗಿಯಾಗುತ್ತಲೇ ಬಂದಿದ್ದು, ದಸರೆಗೆ ಕಳೆಕಟ್ಟಿಕೊಟ್ಟಿದೆ.

     ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ವರ್ಷ ಮಳೆಯಿಲ್ಲದೆ ರಾಜ್ಯದ ಜನತೆ ಕಂಗಾಲಾಗಿದ್ದಾರೆ. ಬರಗಾಲ ತಾಂಡವವಾಡುತ್ತಿದೆ. ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಇನ್ನಾದರೂ ತಾಯಿ ಚಾಮುಂಡಿ ದೇವಿಯ ಅನುಗ್ರಹದಿಂದ ಮಳೆಯಾಗಲಿ ಎಂದು ನಾನು ಇಂದು ವಿಜಯ ದಶಮಿಯ ಶುಭ ಸಂದರ್ಭದಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು. 

    ಮೈಸೂರು ದಸರಾ ವಿಶ್ವವಿಖ್ಯಾತ ಉತ್ಸವ. ದಸರಾ ಎಂದರೆ ನಮಗೆ ನಾಡಹಬ್ಬ. ಜನರ ಹಬ್ಬವಿದು, ಈ ಹಬ್ಬವನ್ನು ಬಹಳ ಅದ್ದೂರಿಯಾಗಿ ಈ ಬಾರಿ ಆಚರಿಸಬೇಕೆಂದು ನಮ್ಮ ಸರ್ಕಾರ ಅಂದುಕೊಂಡಿತ್ತು. ಆದರೆ ರಾಜ್ಯದಲ್ಲಿ ಬರದ ಛಾಯೆಯಿಂದ ಅದ್ದೂರಿಯಾಗಿ ಆಚರಿಸದೆ ಸಂಪ್ರದಾಯಬದ್ಧವಾಗಿ ಆಚರಿಸಿದ್ದೇವೆ ಎಂದರು.

Recent Articles

spot_img

Related Stories

Share via
Copy link
Powered by Social Snap