ಮಂಡ್ಯ
ಮಂಡ್ಯ ಜಿಲ್ಲೆಯ ನಾಗಮಂಗಲದ ಬದರಿಕೊಪ್ಪಲಿದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಎಫ್‌ಐಆರ್ ದಾಖಲಾಗಿದ್ದು, ಈವರೆಗೂ 52 ಮಂದಿಯನ್ನು ಬಂಧಿಸಲಾಗಿದೆ. ಸದ್ಯ ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಎಲ್ಲಾ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಿನ್ನೆ ಆರೋಪಿಗಳನ್ನು ಬಂಧಿಸಿದ್ದ ನಾಗಮಂಗಲ ಟೌನ್ ಠಾಣೆಯ ಪೊಲೀಸರು ಸಂಜೆ ಮಂಡ್ಯ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರು ಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 52 ಜನ ಆರೋಪಿಗಳಿಗೆ ಸೆಪ್ಟೆಂಬರ್ 12ರಿಂದ ಸೆಪ್ಟೆಂಬರ್ 25ನೇ ತಾರೀಕಿನವರೆಗೂ ನ್ಯಾಯಾಂಗ ಬಂಧನ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.
ಆರೋಪಿಗಳ ಪೋಷಕರು ನ್ಯಾಯಾಲಯದ ಬಳಿ ಜಮಾಯಿಸಿದ ಕಾರಣ ಪೊಲೀಸ್ ಬಿಗಿ ಬಂದೋಬಸ್ತ್ ಒದಲಾಗಿಸಲಾಗಿತ್ತು. ಕೋರ್ಟ್ ಆದೇಶ ಪ್ರಕಟವಾಗುತ್ತಿದ್ದಂತೆ ಪೊಲೀಸರ ಭದ್ರತೆಯಲ್ಲೇ ಆರೋಪಿಗಳನ್ನು ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.
ಮಂಡ್ಯದ ನಾಗಮಂಗಲ ಬದರಿಕೊಪ್ಪಲಿದಲ್ಲಿ ಸೆಪ್ಟೆಂಬರ್ 11 ಬುಧವಾರ ರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಯುವಕರ ಗುಂಪೊಂದು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದೆ. ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಬಂದ ವೇಳೆ ಈ ಘಟನೆ ನಡೆದಿದ್ದು, ಸ್ಥಳದಲ್ಲಿನ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ.
ಈ ವೇಳೆ ಹಿಂದೂ-ಮುಸ್ಲಿಂ ಯುವಕರ ನಡುವೆ ತಳ್ಳಾಟ ನೂಕಾಟ ನಡೆದಿದ್ದು ದೊಡ್ಡ ಗಲಭೆ ಎದ್ದಿದೆ. ಕೆಲವು ಕಿಡಿಗೇಡಿಗಳು ಲಾಂಗು, ತಲ್ವಾರ್‌ಗಳನ್ನು ಪ್ರದರ್ಶಿಸಿದ್ದಲ್ಲದೇ ರಸ್ತೆಯಲ್ಲೇ ಬರುತ್ತಿದ್ದ ವಾಹನಗಳ ಮೇಲೆ ದಾಳಿ ಮಾಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಪುಂಡರನ್ನು ಬಂಧಿಸಿ ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಾಗಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸೆಪ್ಟೆಂಬರ್ 14ರವರೆಗೆ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಹೇರಲಾಗಿದೆ.
ಇನ್ನು ಈ ಗಲಾಟೆ ವೇಳೆ ಕೆಲವು ಅಂಗಡಿ ಮುಂಗಟ್ಟುಗಳು ಸುಟ್ಟುಹೋಗಿದ್ದು, ತನಿಖೆಯ ಭಾಗವಾಗಿ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಟ್ಟುಹೋದ ಅಂಗಡಿ ಮುಂಗಟ್ಟುಗಳನ್ನು ತಜ್ಞರು ಪರಿಶೀಲಿಸಿದ್ದು, ತನಿಖೆಗೆ ಅಗತ್ಯವಿರುವ ವಸ್ತುಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಇನ್ನು ಬೂದಿ ಮುಚ್ಚಿದ ಕೆಂಡದಂತಿರುವ ನಾಗಮಂಗಲದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಪಥಸಂಚಲನ ನಡೆಸಿದ್ದಾರೆ. ಮಂಡ್ಯ ದಕ್ಷಿಣ ವಲಯ ಐಜಿಪಿ ನೇತೃತ್ವದಲ್ಲಿ ಚನ್ನಕೇಶವ ದೇವಾಲಯ, ಪಾಂಡವಪುರ-ಬೆಳ್ಳೂರು ರಸ್ತೆ, ಮಂಡ್ಯ ವೃತ್ತ ಸೇರಿದಂತೆ ಹಲವು ಬಡಾವಣೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ದಾರೆ.