ಬೆಂಗಳೂರು:
ತಿರುಪತಿಯಲ್ಲಿ ಕರ್ನಾಟಕ ರಾಜ್ಯ ಛತ್ರದಲ್ಲಿ ನೂತನವಾಗಿ ‘ಐಹೊಳೆ’ ಹೆಸರಿನ 132 ಕೊಠಡಿಗಳ ನೂತನ ಬ್ಲಾಕ್ ನಿರ್ಮಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕರ್ನಾಟಕ ಸರ್ಕಾರವು ತಿರುಪತಿಯಲ್ಲಿ ಯಾತ್ರಾರ್ಥಿಗಳಿಗೆ ಸುಮಾರು ₹200 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಮೂರು ವಸತಿ ಸಂಕೀರ್ಣಗಳು, ಒಂದು ಸುಸಜ್ಜಿತ ಕಲ್ಯಾಣ ಮಂಟಪ ಹಾಗೂ ಹಾಲಿ ಇದ್ದ ಪ್ರವಾಸಿ ಸೌಧವನ್ನು ಉನ್ನತೀಕರಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ, ಇದರಲ್ಲಿ ಮೊದಲ ಹಂತದಲ್ಲಿ 132 ಹವಾನಿಯಂತ್ರಣ ರಹಿತ ಕೊಠಡಿಗಳನ್ನು ಹೊಂದಿರುವ ಐಹೊಳೆ ಬ್ಲಾಕ್ ಲೋಕಾರ್ಪಣೆಗೊಳಿಸಲಾಗಿದೆ.
ಉಳಿದಂತೆ ನೂತನವಾಗಿ ತಿರುಮಲದಲ್ಲಿ ನಿರ್ಮಿಸಲಾಗಿರುವ ವಸತಿ ಸಂಕೀರ್ಣಗಳ ಪೈಕಿ ಅತೀ ಗಣ್ಯ ವ್ಯಕ್ತಿಗಳು ಹಾಗೂ ಗಣ್ಯ ವ್ಯಕ್ತಿಗಳು ತಂಗಲು ನಿರ್ಮಿಸಿರುವ ಶ್ರೀ ಕೃಷ್ಣದೇವರಾಯ ಬ್ಲಾಕ್ ನಲ್ಲಿನ 36 ಹವಾ ನಿಯಂತ್ರಿತ ಸೂಟ್‌ಗಳನ್ನು ಹಾಗೂ 1000 ಆಸನಗಳ ಸಾಮರ್ಥ್ಯವುಳ್ಳ ತಿರುಮಲದಲ್ಲಿಯೇ ಬೃಹತ್ ಹಾಗೂ ನವೀನ ಮಾದರಿಯ ಸುಸಜ್ಜಿತ ಕಲ್ಯಾಣ ಮಂಟಪವಾದ ಶ್ರೀ ಕೃಷ್ಣ ಒಡೆಯರ್ ಬ್ಲಾಕ್ ಕಟ್ಟಡಗಳ ಕಾಮಗಾರಿ ಮುಕ್ತಾಯಗೊಂಡಿದ್ದು, ಅಂತಿಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತಿದ್ದು, ಈ ವರ್ಷದ ಮಾರ್ಚ್ ಮಾಹೆಯಲ್ಲಿ ಸದರಿ ಕಟ್ಟಡಗಳನ್ನು ಉದ್ಘಾಟಣೆಗೊಳಿಸಿ ಯಾತ್ರಾರ್ಥಿಗಳಿಗೆ ಹಂಚಿಕೆ ಮಾಡಲಾಗುವುದು.
ಧಾರ್ಮಿಕ ದತ್ತಿ ಇಲಾಖೆಯ ಕರ್ನಾಟಕ ದೇವಾಲಯಗಳ ವಸತಿ ಕಾಯ್ದಿರಿಸುವಿಕೆಯ ವೆಬ್‌ಸೈಟ್ https://karnatakatemplesaccommodation.com/e/temples/karnataka-pravasi-saudha-tirumala ಮೂಲಕ ಶೇ. 60ರಷ್ಟು ಹಾಗೂ ಶೇ. 40ರಷ್ಟು ಕೊಠಡಿಗಳನ್ನು ಆಫ್‌ಲೈನ್ ಮೂಲಕ ಹಂಚಿಕೆ ಮಾಡಲಾಗುತ್ತಿದೆ.
