ಕೋವಿಡ್ ಸಂಕಷ್ಟ : ಮುಂದೂಡುತ್ತಲೇ ಇವೆ ವಿವಾಹಗಳು!!

  ತುಮಕೂರು :

      ನಿಗದಿಯಾಗಿದ್ದ ಮದುವೆಗಳು ಮುಂದಕ್ಕೆ ಹೋಗುತ್ತಲೆ ಇವೆ. ಐದಾರು ತಿಂಗಳ ಹಿಂದೆಯೆ ಛತ್ರ ಬುಕ್ ಮಾಡಿದ್ದವರು ಪರಿತಪಿಸುತ್ತಿದ್ದಾರೆ. ಕೆಲವರು ಛತ್ರಗಳಿಗೆ ನೀಡಿದ್ದ ಮುಂಗಡ ಹಣವನ್ನು ವಾಪಸ್ ಪಡೆದಿದ್ದರೆ ಮತ್ತೆ ಕೆಲವರು ಲಾಕ್‍ಡೌನ್ ಮುಗಿಯಲಿ ನೋಡೋಣ ಎನ್ನುತ್ತಿದ್ದಾರೆ.…

      ಹೆಣ್ಣು ಹೆತ್ತವರ ಆತಂಕ, ಎಲ್ಲಿ ಸಂಬಂಧ ಕೈ ತಪ್ಪುವುದೋ ಎಂಬ ತಳಮಳ, ಗಂಡಿನ ಕಡೆಯವರ ಬಿಗುಮಾನ.. ಸಂಬಂಧಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬೇಕಾದ ಸಂದಿಗ್ಧತೆ..
ನಿಶ್ಚಿತಾರ್ಥ ಮಾಡಿಕೊಂಡಿದ್ದವರು, ಮದುವೆ ದಿನಾಂಕ ನಿಗದಿಪಡಿಸಿಕೊಂಡಿದ್ದವರು, ಲಗ್ನಪತ್ರಿಕೆ ಹಂಚಿದ್ದವರು, ಇನ್ನೇನು ವಿವಾಹದ ದಿನ ಹತ್ತಿರ ಬಂದೇಬಿಟ್ಟಿತು ಎಂದು ಎಲ್ಲ ಸಿದ್ದತೆಗಳಲ್ಲಿ ತೊಡಗಿಕೊಂಡಿದ್ದವರ ಸ್ಥಿತಿ ಹೇಳತೀರದು.

      ಊಟ ತಿಂಡಿ ರುಚಿಸುತ್ತಿಲ್ಲ, ಬೇರೆಲ್ಲೂ ಹೋಗಲಾಗುತ್ತಿಲ್ಲ, ಕಷ್ಟಗಳನ್ನು ಹೇಳಿಕೊಳ್ಳಲಾಗುತ್ತಿಲ್ಲ.. ಯಾವಾಗ ಮುಗಿಯುವುದಪ್ಪಾ ಈ ಲಾಕ್ ಡೌನ್ ಎಂದು ಕನವರಿಸುತ್ತಿದ್ದಾರೆ. ದೇವರೇ.. ಕೈ ಬಿಡಬೇಡಪ್ಪಾ ಎಂದು ಮನದಲ್ಲೇ ಬೇಡಿಕೊಳ್ಳುತ್ತಿದ್ದಾರೆ. ಲಾಕ್‍ಡೌನ್ ಸಂದರ್ಭದ ಈ ದಿನಗಳು ಒಬ್ಬೊಬ್ಬರಿಗೂ ಒಂದೊಂದು ರೀತಿಯ ಸಂಕಟಗಳನ್ನು ತಂದಿಟ್ಟಿದ್ದು ವಿವಾಹ ಕಾರ್ಯಗಳ ಮೇಲೂ ಕರೋನಾ ಕಾರ್ಮೋಡ ಗಂಭೀರ ಪರಿಣಾಮ ಬೀರಿದೆ.

COVID-19: No more lockdown for marriages from now | Deccan Herald

      ವರ್ಷದಿಂದಲೆ ಸಂಬಂಧ ಕುದುರಿಸಿಕೊಂಡಿದ್ದವರು ಈ ಬೇಸಿಗೆಯ ದಿನಗಳಿಗೆ ಕಾದಿದ್ದರು. ದಿನಾಂಕಗಳನ್ನು ನಿಗದಿಪಡಿಸಿಕೊಂಡು ಛತ್ರಗಳನ್ನು ಹುಡುಕಿಕೊಂಡಿದ್ದರು. ಇನ್ನೇನು ಯುಗಾದಿ ಮುಗಿದು ವಿವಾಹ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂಬುವಷ್ಟರಲ್ಲಿ ಲಾಕ್‍ಡೌನ್ ಘೋಷಣೆಯಾಯಿತು. ಮಾರ್ಚ್ 24 ರಿಂದ ಈವರೆಗೆ ಅದೆಷ್ಟು ವಿವಾಹಗಳು ನಡೆದು ಹೋಗುತ್ತಿದ್ದವೋ… ನಿಶ್ಚಿತಾರ್ಥಗಳು ಕೈಗೂಡುತ್ತಿದ್ದವೋ ಲೆಕ್ಕಕ್ಕಿಲ್ಲ. ಆದರೆ ಎಲ್ಲವೂ ಸ್ತಬ್ದವಾಗಿವೆ. ಕೆಲವರು ಈ ಸಂಕಷ್ಟ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸರ್ಕಾರದ ನಿಬಂಧನೆಗಳ ಅನ್ವಯವೆ ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ.

       ವಿವಾಹಗಳೆಂದರೆ ಛತ್ರ ಬುಕ್ ಮಾಡುವುದು, ತಿಂಗಳಾನುಗಟ್ಟಲೆ ವ್ಯವಸ್ಥೆಗಳನ್ನು ಸಿದ್ಧಪಡಿಸಿಕೊಳ್ಳುವುದು, ನೆಂಟರಿಸ್ಟರು, ಬಂಧು ಬಳಗದವರಿಗೆ ಆಹ್ವಾನ ಪತ್ರಿಕೆ ಹಂಚುವುದು, ಅಡುಗೆಯವರನ್ನು ಗೊತ್ತುಪಡಿಸುವುದು, ಡೆಕೋರೇಷನ್ ಇತ್ಯಾದಿ… ಇತ್ಯಾದಿ ವ್ಯವಸ್ಥೆಗಳ ಸರಮಾಲೆಯೇ ಮುಂದುವರೆಯುತ್ತದೆ. ಅವರವರ ಅಂತಸ್ತಿಗೆ ತಕ್ಕಂತೆ ವಿವಾಹಗಳು ನೆರವೇರುತ್ತವೆ. ಲಕ್ಷ ಲಕ್ಷಗಟ್ಟಲೆ ಹಣ ಕೈ ಬಿಟ್ಟು ಹೋಗುತ್ತದೆ. ಹೆಣ್ಣು ಹೆತ್ತವರು ಒಂದು ವಿವಾಹ ಮಾಡಿ ಮುಗಿಸುವಷ್ಟರಲ್ಲಿ ಹೈರಾಣಾಗಿ ಹೋಗುತ್ತಾರೆ.

Section 9 Of the Hindu marriage act 1955 and the conjugal rights ...

      ಈಗ ನಡೆಯುತ್ತಿರುವ ಅದ್ಧೂರಿ, ಆಡಂಬರದ ವಿವಾಹಗಳು ಕಾಲಾನುಕ್ರಮೇಣ ಮನುಷ್ಯನೆ ಮಾಡಿಕೊಂಡಿರುವ ಆಚರಣೆಗಳು. ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಾ ಬಂದಿದ್ದ ವಿವಾಹಗಳಿಗೂ ಈಗ ನಡೆಯುವ ವಿವಾಹಗಳಿಗೂ ಸಾಕಷ್ಟು ವ್ಯತ್ಯಾಸಗಳಿದ್ದವು. ಊರಿನವರೆಲ್ಲ ಸೇರಿ ಮನೆಯ ಮುಂಭಾಗವೆಲ್ಲ ಚಪ್ಪರ ಹಾಕಿ, ಸೀರಿಯಲ್ ಸೆಟ್ ಬಿಡಿಸಿ, ಧ್ವನಿವರ್ಧಕ ಕೇಳಿಸಿ ಬಾಂಧವ್ಯ ಬೆಸೆಯುವಂತೆ ಮಾಡುತ್ತಿದ್ದ ಆ ಮದುವೆಗಳು ಈಗ ಕಣ್ಮರೆಯಾಗಿವೆ. ಹಳ್ಳಿಗಳಲ್ಲಿ ಈಗ ವಿವಾಹಗಳೇ ನಡೆಯುತ್ತಿಲ್ಲ, ಅಷ್ಟರ ಮಟ್ಟಿಗೆ ಅವರೂ ನಾಗರೀಕರಾಗಿಬಿಟ್ಟಿದ್ದಾರೆ. ಮನೆಯ ಮುಂದೆ ವಿವಾಹವಾಗಲು ಇಷ್ಟಪಡುತ್ತಿಲ್ಲ, ಎಲ್ಲರೂ ಛತ್ರ ಅಥವಾ ಸಮುದಾಯ ಭವನಗಳ ಮೊರೆ ಹೋಗಿದ್ದಾರೆ. ಇದರ ಪರಿಣಾಮವಾಗಿ ಹಿಂದಿನಿಂದ ನಡೆದುಕೊಂಡು ಬಂದಿದ್ದ ಕೆಲವು ಸಂಪ್ರದಾಯಗಳೆ ಮಾಯವಾಗಿವೆ. ಮದುವೆ ಸಂಪ್ರದಾಯಗಳು ಹೇಳ ಹೆಸರಿಲ್ಲದಂತೆ ನಶಿಸಿ ಹೋಗಿವೆ.

      ಲಾಕ್‍ಡೌನ್ ಸಂಕಷ್ಟ ಪರಿಸ್ಥಿತಿಯು ಇದೀಗ ಹಳೆಯ ಗತವೈಭವವನ್ನು ನೆನಪಿಸಿದೆ. ನಗರ ಪ್ರದೇಶಗಳಲ್ಲಿ ವಿವಾಹಗಳನ್ನು ಮುಂದೂಡುತ್ತಿದ್ದರೆ, ಹಳ್ಳಿಗಳಲ್ಲಿ ತಮ್ಮ ಹಿಂದಿನ ಸಂಸ್ಕøತಿಗೆ ಮೊರೆ ಹೋಗುತ್ತಿದ್ದಾರೆ. ಅಲ್ಲಿ ಈಗ ಆಡಂಬರದ ವೈಭವಗಳು ಕಾಣುತ್ತಿಲ್ಲ. ದೇವಸ್ಥಾನದ ಮುಂದೆ ಹಾಗೂ ಅವರವರ ಮನೆಗಳ ಮುಂದೆ ಚಪ್ಪರ ಹಾಕಿ ಸರಳವಾಗಿ ವಿವಾಹ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ನೆಂಟರಿಷ್ಟರು ಮತ್ತು ಬಂಧುಗಳನ್ನು ಮಾತ್ರವೇ ಆಹ್ವಾನಿಸುತ್ತಿದ್ದಾರೆ. ಹೆಚ್ಚು ಜನ ಸೇರಿದರೆ ಪೊಲೀಸರು ಬಂದು ಕ್ರಮ ಕೈಗೊಳ್ಳಬಹುದು ಎಂಬ ಆತಂಕ ಅವರಿಗೂ ಇದೆ. ಆದರೆ ಮದುವೆಗಳನ್ನು ಎಷ್ಟು ದಿನ ಮುಂದೂಡುವುದು ಎಂಬ ಆತಂಕದಲ್ಲಿ ಸರಳವಾಗಿಯೇ ಆಚರಣೆಗಳನ್ನು ಮುಗಿಸುತ್ತಿದ್ದಾರೆ.

Age of marriage for men could soon be reduced to 18

      ಸರ್ಕಾರಿ ನಿಬಂಧನೆಗಳ ಪ್ರಕಾರ ಒಂದು ವಿವಾಹ ನೆರವೇರಿಸಲು ಆಡಳಿತದ ಅನುಮತಿ ಪಡೆಯಬೇಕು. ಅಲ್ಲಿ 50 ಮಂದಿ ಮಾತ್ರ ಇರಬೇಕು. ಇದು ತುಂಬಾ ಕಷ್ಟಕರ. ಗ್ರಾಮೀಣ ಪ್ರದೇಶದಲ್ಲಿ ಹೇಗೋ ನಡೆದು ಹೋಗುತ್ತದೆ. ಅಂಕಿಸಂಖ್ಯೆಯಲ್ಲಿ ಏರುಪೇರಾದರೂ ಅಲ್ಲಿ ಗಮನಿಸುವವರು ಕಡಿಮೆಯೇ. ಆದರೆ ನಗರ ಪ್ರದೇಶಗಳಲ್ಲಿ ಈ ನಿಬಂಧನೆ ಪಾಲಿಸುವುದು ಕಠಿಣ. ಇಲ್ಲಿ ಛತ್ರಗಳನ್ನು ಬುಕ್ ಮಾಡಿಕೊಂಡು 50 ಜನರನ್ನು ಸೇರಿಸಿ ವಿವಾಹ ಮಾಡಲು ಹೇಗೆ ಸಾಧ್ಯ? . ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಕೆಲವರು ಸರಳವಾಗಿಯೇ ವಿವಾಹಗಳನ್ನು ನೆರವೇರಿಸಿಕೊಂಡಿದ್ದಾರೆ. ಎರಡೂ ಕಡೆ ಸಂಬಂಧಿಕರು ಒಪ್ಪಿದಾಗ ಈ ಸರಳ ವಿವಾಹಗಳು ನಡೆಯುತ್ತವೆ. ಒಪ್ಪಿಗೆ ಪಡೆಯುವುದೇ ಈಗ ಎದುರಾಗಿರುವ ಆತಂಕದ ಸ್ಥಿತಿ. ಬೇಗ ಮದುವೆ ಮಾಡಿಕೊಡಿ ಎಂದು ಗಂಡಿನ ಕಡೆಯವರು ಕೇಳುತ್ತಿರುವುದು, ವಿವಾಹ ಅದ್ದೂರಿಯಾಗಿಯೇ ಇರಬೇಕು ಎಂದು ಅಪೇಕ್ಷಿಸುವುದು.. 50 ಜನರನ್ನು ಮಾತ್ರವೇ ಸೇರಿಸಬೇಕು ಎಂಬ ನಿಬಂಧನೆ ಗೊತ್ತಿದ್ದೂ ಗೊತ್ತಿಲ್ಲದಂತೆ ಇರುವುದು.. ಕರೋನಾದೊಳಗಿನ ಕರಾಳತೆಯಾಗಿದೆ ಕೆಲವರ ಬದುಕು.

      ಅದ್ಧೂರಿ, ಆಡಂಬರದ ವಿವಾಹಗಳಿಗೆ ಸಿದ್ಧತೆ ಮಾಡಿಕೊಂಡಿದ್ದವರೂ ಸಹ ಅನಿವಾರ್ಯ ಎಂಬಂತೆ ಸರ್ಕಾರದ ನಿಬಂಧನೆಗಳನ್ನು ಪಾಲಿಸಿ ವಿವಾಹದ ಶಾಸ್ತ್ರ ಮುಗಿಸಿದ್ದಾರೆ. ಇನ್ನು ಕೆಲವು ಕಡೆ ಅದೇ ವೈಭೋಗ ಮಾಡಲು ಹೋಗಿ ಕಾನೂನಿನ ಕೈಗೆ ಸಿಲುಕಿಕೊಂಡಿದ್ದಾರೆ. ಅದೆಷ್ಟೋ ಜನರ ಮೇಲೆ ಪ್ರಕರಣಗಳು ದಾಖಲಾಗಿರುವುದನ್ನು ಅದ್ದೂರಿ ವಿವಾಹಗಳಿಗೆ ಅಪೇಕ್ಷಿಸುವವರು ಗಮನಿಸಬೇಕು.
ಅದೇನೇ ಇರಲಿ.. ಈ ಲಾಕ್‍ಡೌನ್ ಹಲವರಿಗೆ ಹಲವು ರೀತಿಯ ಅನುಭವಗಳನ್ನು ಕಂಡುಕೊಳ್ಳುವಂತೆ ಮಾಡಿದೆ. ಇರುವವರು, ಇಲ್ಲದವರು ಯಾರಿಗೂ ಭೇದ ಭಾವ ಮಾಡದಂತೆ ಸರಳ ಆಚರಣೆಗಳಿಗೆ ಆಸ್ಪದ ನೀಡಿದೆ. ತುಂಬಾ ಅದ್ಧೂರಿ ವಿವಾಹಗಳನ್ನು ಮಾಡಲಾಗದೆ ಪರಿತಪಿಸುತ್ತಿದ್ದ ಕೆಲವರಿಗೆ ಈ ದಿನಗಳು ಆಶಾದಾಯಕವಾಗಿ ಪರಿಣಮಿಸಿದೆ. ಇಂತಹವರೆಲ್ಲ ತುಂಬ ಖುಷಿಯಿಂದಲೆ ಕಾರ್ಯಗಳನ್ನು ನೆರವೇರಿಸಿದ್ದಾರೆ. ಕನಿಷ್ಠ 5 ರಿಂದ 10 ಲಕ್ಷ ರೂ.ಗಳವರೆಗೂ ಖರ್ಚು ಮಾಡಬೇಕಾಗಿದ್ದವರು ಕೇವಲ ಸಾವಿರಾರು ರೂಪಾಯಿಗಳಲ್ಲಿ ಮದುವೆ ಶಾಸ್ತ್ರ ಮುಗಿಸಿಕೊಂಡಿದ್ದಾರೆ. ಎಲ್ಲರಿಗೂ ಹೇಳಲಿಲ್ಲ ಎಂಬ ಆರೋಪ ಇವರಿಗಿಲ್ಲ. ಅದ್ಧೂರಿ ವಿವಾಹ ಮಾಡಿಕೊಡಲಿಲ್ಲ ಎಂಬ ಕೀಳು ಭಾವನೆಯೂ ವ್ಯಕ್ತವಾಗಲು ಸಾಧ್ಯವಿಲ್ಲ. ಅಂತೂ ಕೆಲವರು ತಮ್ಮಿಷ್ಟಕ್ಕೆ ತಕ್ಕಂತೆ ವಿವಾಹಗಳನ್ನು ಮುಗಿಸಿಕೊಂಡಿದ್ದಾರೆ. ಇನ್ನು ಕೆಲವರು ಲಾಕ್‍ಡೌನ್ ಮುಗಿಯಲಿ ಎಂದು ಕಾಯುತ್ತಲೆ ಇದ್ದಾರೆ. ಲಾಕ್ ಡೌನ್ ಮಾರ್ಗಸೂಚಿ ಮಾತ್ರ ಮುಂದುವರಿಯುತ್ತಲೇ ಇದೆ.

 ಸಾ.ಚಿ. ರಾಜಕುಮಾರ

Recent Articles

spot_img

Related Stories

Share via
Copy link
Powered by Social Snap