ನವದೆಹಲಿ:
ವಿವಾದಿತ ನೀಟ್-ಯುಜಿ 2024 ಪರೀಕ್ಷೆ ರದ್ದುಗೊಳಿಸುವುದು ಸರಿಯಾದ ನಿರ್ಧಾರವಲ್ಲ. ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆದ ಲಕ್ಷಾಂತರ ಪ್ರಾಮಾಣಿಕ ಅಭ್ಯರ್ಥಿಗಳಿಗೆ “ಗಂಭೀರ ಅಪಾಯವನ್ನುಂಟುಮಾಡುತ್ತದೆ” ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಿಳಿಸಿದೆ. ಪರೀಕ್ಷೆ ರದ್ದು ಕೋರಿ ಅಭ್ಯರ್ಥಿಗಳು, ಕೋಚಿಂಗ್ ಸಂಸ್ಥೆಗಳು ಮತ್ತು NEET-UG ಆಕಾಂಕ್ಷಿಗಳ ಪೋಷಕರು ಸಲ್ಲಿಸಿದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು, ಆಪಾದಿತ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸರ್ಕಾರ ಸಿಬಿಐಗೆ ಸೂಚಿಸಿದೆ ಎಂದು ಹೇಳಿದೆ.
“ಅದೇ ಸಮಯದಲ್ಲಿ, ಪ್ಯಾನ್-ಇಂಡಿಯಾ ಪರೀಕ್ಷೆಯಲ್ಲಿ ಯಾವುದೇ ದೊಡ್ಡ ಪ್ರಮಾಣದ ಗೌಪ್ಯತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳ ಲಭ್ಯವಿಲ್ಲ. ಹೀಗಾಗಿ ಸಂಪೂರ್ಣ ಪರೀಕ್ಷೆಯನ್ನು ಮತ್ತು ಈಗಾಗಲೇ ಘೋಷಿಸಲಾದ ಫಲಿತಾಂಶವನ್ನು ರದ್ದುಗೊಳಿಸುವುದು ತರ್ಕಬದ್ಧವಲ್ಲ” ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದರಿಂದ ಪರೀಕ್ಷೆಯಲ್ಲಿ, ಯಾವುದೇ ಅನ್ಯಾಯದ ವಿಧಾನಗಳನ್ನು ಅಳವಡಿಸಿಕೊಳ್ಳದೆ ನ್ಯಾಯಯುತವಾಗಿ ಪರೀಕ್ಷೆ ಬರೆದ ಹೆಚ್ಚಿನ ಸಂಖ್ಯೆಯ ಪ್ರಾಮಾಣಿಕ ವಿದ್ಯಾರ್ಥಿಗಳ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆ ಎಂದು ಕೇಂದ್ರ ಹೇಳಿದೆ.
ಮೇ 5 ರಂದು ನಡೆದ ನೀಟ್ – ಯುಜಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಹಲವು ಅಭ್ಯರ್ಥಿಗಳು, ಪೋಷಕರು ಹೊಸದಾಗಿ ಪರೀಕ್ಷೆ ನಡೆಸುವಂತೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದುು, ಜುಲೈ 8 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಇತರ ಅಕ್ರಮಗಳನ್ನು ಖಂಡಿಸಿ ದೇಶದ ಹಲವಾರು ನಗರಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ರಾಜಕೀಯ ಪಕ್ಷಗಳ ನಡುವೆ ಜಟಾಪಟಿಗೂ ಕಾರಣವಾಗಿದೆ.