ಶ್ರೀನಗರ:
ಸೆಪ್ಟೆಂಬರ್ 25 ರಂದು ನಡೆಯಲಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶ್ರೀನಗರ ಮತ್ತು ಕತ್ರಾದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಶ್ರೀನಗರದ ಶೇರ್-ಎ-ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ, ನಂತರ ಮಧ್ಯಾಹ್ನ 3:00 ಗಂಟೆಗೆ ಕತ್ರಾದಲ್ಲಿರುವ ಮಾತಾ ವೈಷ್ಣೋ ದೇವಿ ಕ್ಷೇತ್ರ ಮಂಡಳಿಯ ಕ್ರೀಡಾ ಸಂಕೀರ್ಣದಲ್ಲಿ ಮತ್ತೊಂದು ಉದ್ದೇಶಿಸಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ವಿಧಾನಸಭಾ ಚುನಾವಣೆಗಳಿಗಾಗಿ ಶ್ರೀನಗರ ಭಾಗದಲ್ಲಿ ನಡೆಯುತ್ತಿರುವಪ್ರಧಾನಿಯವರ ಮೊದಲ ಚುನಾವಣಾ ರ‍್ಯಾಲಿ ಇದಾಗಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 14 ರಂದು ಜಮ್ಮುವಿನ ದೋಡಾದಲ್ಲಿ ಬಿಜೆಪಿಯ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು-ಕಾಶ್ಮೀರ ಭೇಟಿಯು ‘ಗೇಮ್ ಚೇಂಜರ್’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಹೇಳಿದ್ದಾರೆ.
ಬುಧವಾರ ಶೇರ್-ಎ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂಗೆ ತೆರಳಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚುಗ್, ಜಮ್ಮು-ಕಾಶ್ಮೀರ ಜನರು ಪ್ರಧಾನಿಯನ್ನು ಪ್ರೀತಿಸುತ್ತಾರೆ. ಈ ಹಿಂದೆ ಅವರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದಾಗಲೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ವಾಗತಿಸಿರುವುದನ್ನು ನಾವು ನೋಡಿದ್ದೇವೆ. ಗುರುವಾರ ಪ್ರಧಾನಿ ಮೋದಿಯವರ ಭೇಟಿಯು ಕಣಿವೆ ಜನರಿಗೆ ಒಂದು ಮೈಲಿಗಲ್ಲು ಘಟನೆಯಾಗಿದೆ ಎಂದರು.
ಪ್ರಧಾನ ಮಂತ್ರಿ ಭದ್ರತೆಯ ಹೊಣೆ ಹೊತ್ತಿರುವ ವಿಶೇಷ ರಕ್ಷಣಾ ಗುಂಪಿನ (SPG) ಸಮನ್ವಯದಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಮುಂಚಿತವಾಗಿ ಶ್ರೀನಗರಕ್ಕೆ ಆಗಮಿಸಿರುವ ಎಸ್‌ಪಿಜಿ ತಂಡ, ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಅಧಿಕಾರಿಗಳೊಂದು ಸಮನ್ವಯ ಸಾಧಿಸುವ ಮೂಲಕ ಭದ್ರತೆಯ ಮೇಲ್ವಿಚಾರಣೆ ಮಾಡುತ್ತಿದೆ.