ಹೊಸದಿಲ್ಲಿ:
ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು, ಈ ವಿಚಾರವಾಗಿ ಸುಪ್ರೀಂ ಕೋರ್ಟ್ ದಿಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನ ತರಾಟೆಗೆ ತೆಗೆದುಕೊಂಡಿದೆ. ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧದ ಆದೇಶವನ್ನು ಏಕೆ ಕಟ್ಟುನಿಟ್ಟಾಗಿ ಅನುಸರಿಸಿದಲ್ಲ? ಎಂದು ಪ್ರಶ್ನಿಸಿದೆ. ಇದಲ್ಲದೆ ರಾಜಧಾನಿಯಲ್ಲಿ ಪಟಾಕಿ ನಿಷೇಧ ಆದೇಶವನ್ನು ಉಲ್ಲಂಘಿಸಿದ ಬಗ್ಗೆ ಎಎಪಿ ಸರ್ಕಾರ ಮತ್ತು ದಿಲ್ಲಿ ಪೊಲೀಸರಿಂದ ಪ್ರತಿಕ್ರಿಯೆ ಕೇಳಿದೆ.
ಭವಿಷ್ಯದಲ್ಲಿ ಇಂತಹ ವೈಫಲ್ಯವನ್ನು ತಡೆಗಟ್ಟಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎನ್ನುವುದನ್ನೂ ವಿವರಿಸುವಂತೆ ನ್ಯಾಯಾಲಯ ಸೂಚಿಸಿದೆ.
“ದಿಲ್ಲಿಯಲ್ಲಿ ಪಟಾಕಿ ನಿಷೇಧದ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಅಂಗಡಿಗೆ ಸೀಲ್ ಹಾಕುವಂತಹ ಕೆಲವು ಕಠಿಣ ಕ್ರಮಗಳನನು ಕೈಗೊಳ್ಳುವ ಅಗತ್ಯವಿದೆ” ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಹೇಳಿದೆ. “ಮುಂದಿನ ವರ್ಷದ ದೀಪಾವಳಿಯ ಸಮಯದಲ್ಲಿ ಪಟಾಕಿ ನಿಷೇಧಿಸಿ ನ್ಯಾಯಾಲಯ ಹೊರಡಿಸುವ ಆದೇಶವನ್ನು ಉಲ್ಲಂಘಿಸದಂತೆ ನಾವು ಏನಾದರೂ ಮಾಡಬೇಕಾಗಿದೆ” ಎಂದು ತಿಳಿಸಿದೆ. ಹಬ್ಬದ ಸಮಯಕ್ಕೆ ಸೀಮಿತಗೊಳಿಸದೆ ದಿಲ್ಲಿಯಲ್ಲಿ ಪಟಾಕಿಗಳ ಮೇಲೆ ನಿರಂತರ ನಿಷೇಧವನ್ನು ಪರಿಗಣಿಸುವಂತೆ ನ್ಯಾಯಾಲಯವು ಸೂಚಿಸಿದೆ. ವಿಜ್ಞಾನ ಮತ್ತು ಪರಿಸರ ಕೇಂದ್ರದ ವರದಿಯ ಪ್ರಕಾರ ದೀಪಾವಳಿಯ ಸಮಯದಲ್ಲಿ ಕೃಷಿಕರು ಬೆಳೆ ಅವಶೇಷ ಸುಡುವ ಪ್ರಮಾಣ ಹೆಚ್ಚಾಗಿದ್ದು, ಅದು ಹೇಗೆ ಎಂಬುದನ್ನು ವಿವರಿಸಲು ನ್ಯಾಯಾಲಯವು ಪಂಜಾಬ್ ಮತ್ತು ಹರಿಯಾಣವನ್ನು ಸರ್ಕಾರವನ್ನು ಕೋರಿದೆ.
ಒಂದು ವಾರದಲ್ಲಿ ಎಲ್ಲ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ನ. 14ಕ್ಕೆ ಮುಂದೂಡಿತು. ದೀಪಾವಳಿಯ ಸಮಯದಲ್ಲಿ ಪಟಾಕಿ ನಿಷೇಧವನ್ನು ಬಹಿರಂಗವಾಗಿ ಉಲ್ಲಂಘಿಸಿದ ನಂತರ ದಿಲ್ಲಿಯಲ್ಲಿ ದಟ್ಟವಾದ ಬೂದು ಬಣ್ಣದ ಹೊಗೆಯ ಪದರವನ್ನು ಕಂಡು ಬಂದಿತ್ತು. ಅಲ್ಲದೆ ಅನೇಕ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವು ತೀವ್ರ ಪ್ರಮಾಣದಲ್ಲಿ ಕುಸಿದಿದೆ.
ನ.1ರಂದು ರಾಜಧಾನಿಯಾದ್ಯಂತ ದೀಪಾವಳಿಯನ್ನು ಆಚರಿಸಿದ ಒಂದು ದಿನದ ನಂತರ ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕವು ‘ತೀವ್ರ’ ಮಟ್ಟಕ್ಕೆ ಕುಸಿದಿದೆ ಎಂದು ಸಫರ್ ತಿಳಿಸಿದೆ. ಅನೇಕ ಪ್ರದೇಶಗಳಲ್ಲಿ ಮಾರಣಾಂತಿಕ ಕಣಗಳ ಮಟ್ಟವು ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷತಾ ಮಿತಿಗಿಂತ ಏಳು ಪಟ್ಟು ಹೆಚ್ಚಾಗಿದೆ. ದಿಲ್ಲಿಯಲ್ಲಿ ವಾಯುಮಾಲಿನ್ಯದ ಬಿಕ್ಕಟ್ಟು ಪ್ರತಿ ವರ್ಷ ಅಕ್ಟೋಬರ್ ನಂತರ ತೀವ್ರಗೊಳ್ಳುತ್ತದೆ . ನೆರೆಯ ರಾಜ್ಯಗಳಲ್ಲಿ ಬೆಳೆ ಅವಶೇಷಗಳನ್ನು ಸುಡುವುದು, ತಂಪಾದ ಹವಾಮಾನ ಇತ್ಯಾದಿ ಇದಕ್ಕೆ ಪ್ರಮುಖ ಕಾರಣ. ಆ ಹೊಗೆ ದಿಲ್ಲಿಗೂ ಆವರಿಸಿ ಮಾಲಿನ್ಯದ ಉಲ್ಬಣಕ್ಕೆ ಕಾರಣವಾಗುತ್ತದೆ.