ಹುಬ್ಬಳ್ಳಿ:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಗುರುವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಕ್ಕೆ ಜಗದೀಶ ಶೆಟ್ಟರ್ ಸದ್ಯದಲ್ಲಿಯೇ ಪಶ್ಚಾತ್ತಾಪದ ಹೇಳಿಕೆ ನೀಡಲಿದ್ದಾರೆ. ಇನ್ನೊಂದು ತಿಂಗಳು ಕಾದುನೋಡಿ. ಅವರಿಂದ ಪಶ್ಚಾತ್ತಾಪದ ಹೇಳಿಕೆ ಬರಲಿದೆ ಎಂದು ತಿಳಿಸಿದರು.
ಇದೋ ಮಹದಾಯಿ ನೀರು ತಂದೆ ಬಿಟ್ಟೆವು ಎನ್ನುವ ರೀತಿಯಲ್ಲಿ ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಮಾಡಿದ್ದರು. ರಸ್ತೆಯುದ್ದಕ್ಕೂ ಫ್ಲೆಕ್ಸ್ ಗಳನ್ನು ಹಾಕಿ ಶುಭ ಕೋರಿದ್ದರು. ಯಾಕೆ ಆಗಲಿಲ್ಲ ಎಂದು ಅವರನ್ನು ನೀವು ಗಟ್ಟಿಯಾಗಿ ಪ್ರಶ್ನಿಸಬೇಕು. ಯಾಕೆ ಇನ್ನೂ ಮಹದಾಯಿ ತೊಡಕುಗಳ ನಿವಾರಣೆ ಮಾಡುತ್ತಿಲ್ಲ..? ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದರೆ ಅವರಿಗೂ ಒಂದು ಗೌರವ. ಆದರೆ ಈ ಬಗ್ಗೆ ಜೋಶಿಯವರು ಚಕಾರ ಎತ್ತುತ್ತಿಲ್ಲ ಎಂದು ಹೇಳಿದರು.
ಶಾಸಕರಾದ ಶಿವರಾಮ ಹೆಬ್ಬಾರ್ ಹಾಗೂ ಸೋಮಶೇಖರ ಕಾಂಗ್ರೆಸ್ ಗೆ ಸೇರ್ಪಡೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯಲ್ಲಿನ ವೈಫಲ್ಯತೆಗೆ ಬೇಸತ್ತು ಒಬ್ಬರು, ಇಬ್ಬರಲ್ಲ ಹಲವರು ಕಾಂಗ್ರೆಸ್ ಗೆ ಬರಲು ಮುಂದಾಗಿದ್ದಾರೆಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ