ಬೆಂಗಳೂರು :
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ಪರಿಸರ ನಡಿಗೆಗೆ ವಿಧಾನಸೌಧದ ಪೂರ್ವದ್ವಾರದ ಭವ್ಯ ಮೆಟ್ಟಿಲುಗಳ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮುದ್ದು ಮಕ್ಕಳೊಂದಿಗೆ ವೇದಿಕೆ ಹಂಚಿಕೊಂಡು ಚಾಲನೆ ನೀಡಿದರು.
ಪರಿಸರ ನಮ್ಮ ಮನೆ. ಅದನ್ನು ರಕ್ಷಣೆ ಮಾಡಬೇಕಾದುದು ನಮ್ಮ ಆದ್ಯ ಕರ್ತವ್ಯ. ಪರಿಸರ ಸಂರಕ್ಷಣೆ ಎಂದರೆ ದೇಶದ ರಕ್ಷಣೆಯಂತೆ. ಹಸಿರೇ ಉಸಿರು ಎಂದು ತಿಳಿದು ಮಾರಕ ಪ್ಲಾಸ್ಟಿಕ್ ನಿರ್ಮೂಲನೆ ಮಾಡಬೇಕಾದುದು ನಮ್ಮ- ನಿಮ್ಮೆಲ್ಲರ ಜವಾಬ್ದಾರಿ. ಅದಕ್ಕಾಗಿ ಈಗಾಗಲೇ ಶಾಲೆಗಳಲ್ಲಿ ಕಡ್ಡಾಯವಾಗಿ 25 ವಿದ್ಯಾರ್ಥಿಗಳನ್ನು ಒಳಗೊಂಡಂತೆ ಹವಾಮಾನ ಕ್ರಿಯಾ ಬಳಗ ಮತ್ತು ಪರಿಸರ ಸಂಘಗಳನ್ನು ರಚಿಸಲು ಆದೇಶ ನೀಡಿದ್ದೇನೆ ಎಂದರು.
ಒಂದೊಂದು ಶಾಲೆ ಒಂದೊಂದು ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು, ಒಬ್ಬೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡ ನೆಟ್ಟು ಪೋಷಿಸಬೇಕು. ಹವಾಮಾನ, ಇಲ್ಲಿನ ಹಸಿರು ಪರಿಸರ ಬೆಂಗಳೂರಿನ ಆಸ್ತಿ. ಈ ಗಾರ್ಡನ್ ಸಿಟಿಯ ಹೆಸರನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗೊಣ; ಹಸಿರ ಹಾದಿಯಲ್ಲಿ ನಡೆಯೋಣ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ ಎಂ ನರೇಂದ್ರಸ್ವಾಮಿ, ಎಂಎಲ್ಸಿ ಸುಧಾಮದಾಸ್ ಮತ್ತಿತರರು ಭಾಗವಹಿಸಿದ್ದರು.
