ಬೆಂಗಳೂರು:
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಜೆಡಿಎಸ್ ಒಂದೇ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಎನ್ ಡಿಎ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿರುವ ಮೂರು ಜೆಡಿಎಸ್ ಅಭ್ಯರ್ಥಿಗಳು ಚುನಾವಾಣೆಯಲ್ಲಿ ಪರಾಭವಗೊಳ್ಳಲಿದ್ದಾರೆ ಎಂದು ಡಿಸಿಎಂ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಸಿಎನ್ ಮಂಜುನಾಥ್ ಅವರನ್ನೂ ಸಹ ಸೋಲಿಸಲಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡ್ಯ, ಹಾಸನ, ಕೋಲಾರ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವೇ ಗೆಲ್ಲಲಿದೆ ಎಂದೂ ಡಿಸಿಎಂ ಇದೇ ವೇಳೆ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದ ತಜ್ಞರು ಈಗ ತಮ್ಮ ಭವಿಷ್ಯ ನುಡಿಯಲು ಹಿಂಜರಿಯುತ್ತಿದ್ದಾರೆ ಎಂದು ಡಿಸಿಎಂ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿಯಾದ ಡಿಸಿಎಂ, “ರಾಜ್ಯದಲ್ಲಿ ಪರಿಸ್ಥಿತಿಗಳು ಹೇಗೆ ರೂಪುಗೊಳ್ಳುತ್ತಿವೆ ಎಂಬುದರ ಕುರಿತು ನಾನು ಪಕ್ಷದ ಅಧ್ಯಕ್ಷರಿಗೆ ವರದಿಯನ್ನು ನೀಡಿದ್ದೇನೆ. ರಾಹುಲ್ ಗಾಂಧಿ ಅವರ ಕರ್ನಾಟಕ ಭೇಟಿಗಳ ಬಗ್ಗೆಯೂ ನಾವು ಚರ್ಚಿಸಿರುವುದಾಗಿ ಮಾಹಿತಿ ನೀಡಿದರು.
ಖರ್ಗೆ ಅವರು ಏಪ್ರಿಲ್ 12 ರಂದು ಕಲಬುರಗಿಗೆ ಭೇಟಿ ನೀಡಿ, ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಕಲಬುರಗಿ ಕ್ಷೇತ್ರದಿಂದ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಮಾಡುವುದಿಲ್ಲ.
“ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ದಿಂಗಾಲೇಶ್ವರ ಸ್ವಾಮೀಜಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಮೊದಲೇ ನಿರ್ಧಾರ ತೆಗೆದುಕೊಂಡು ನಮ್ಮನ್ನು ಸಂಪರ್ಕಿಸಿದ್ದರೆ, ಅದು ಬೇರೆಯಾಗಬಹುದಿತ್ತು. ಇದೀಗ ಪಕ್ಷದ ಯುವ ಅಭ್ಯರ್ಥಿ ಪ್ರಚಾರ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ’ ಎಂದು ಹೇಳಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.