ಬೆಂಗಳೂರು:
ಚನ್ನಪಟ್ಟಣದ ಹಾಲಿ ಶಾಸಕರಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಚನ್ನಪಟ್ಟಣ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಲಿದ್ದು, ಬಿಜೆಪಿ ಮತ್ತು ಜೆಡಿಎಸ್ ಈ ಕ್ಷೇತ್ರಕ್ಕಾಗಿ ತೀವ್ರ ಪೈಪೋಟಿ ನಡೆಸುವ ಸಾಧ್ಯತೆ ಇದೆ.
ಕುಮಾರಸ್ವಾಮಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅವರ ರಾಜೀನಾಮೆಯಿಂದ ತೆರವಾಗಲಿರುವ ಸ್ಥಾನಕ್ಕೆ ಆರು ತಿಂಗಳ ಒಳಗೆ ವಿಧಾನಸಭೆ ಉಪಚುನಾವಣೆ ನಡೆಯಲಿದೆ. ಒಕ್ಕಲಿಗ ಭದ್ರಕೋಟೆಯಲ್ಲಿ ಮೇಲುಗೈ ಸಾಧಿಸಲು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ದೇವೇಗೌಡರ ಕುಟುಂಬ ಮತ್ತೊಮ್ಮೆ ಸಿದ್ಧತೆ ನಡೆಸಿದೆ.
ಶಿವಕುಮಾರ್ ಅವರ ಕಿರಿಯ ಸಹೋದರ ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಲೋಕಸಬಾ ಕ್ಷೇತ್ರದಲ್ಲಿ ಸೋತ ನಂತರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ರಾಮನಗರ ಜಿಲ್ಲೆಯ ರಾಜಕೀಯ ವಲಯಗಳಲ್ಲಿ ಈಗಾಗಲೇ ಚರ್ಚೆಗಳು ಪ್ರಾರಂಭವಾಗಿವೆ. ಮಂಡ್ಯದಿಂದ ಗೆದ್ದಿರುವ ರಾಜ್ಯ ಜೆಡಿಎಸ್ ವರಿಷ್ಠ ಎಚ್‌ಡಿ ಕುಮಾರಸ್ವಾಮಿ ಚನ್ನಪಟ್ಟಣದಿಂದ ಹಾಲಿ ಶಾಸಕರಾಗಿದ್ದಾರೆ. ಇನ್ನು ಆರು ತಿಂಗಳೊಳಗೆ ಚನ್ನಪಟ್ಟಣಕ್ಕೆ ಉಪಚುನಾವಣೆ ನಡೆಯಲಿದೆ
ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದಿಂದ ಕಣಕ್ಕಿಳಿಸುತ್ತಾರೋ ಅಥವಾ ಮೈತ್ರಿಕೂಟದ ಪಾಲುದಾರ ಬಿಜೆಪಿಗೆ ಕ್ಷೇತ್ರವನ್ನು ತ್ಯಾಗ ಮಾಡುತ್ತಾರೋ ಕಾದು ನೋಡಬೇಕಿದೆ. 2023ರ ಚುನಾವಣೆಯಲ್ಲಿ ರಾಮನಗರದಲ್ಲಿ ನಿಖಿಲ್ ಸೋತಿದ್ದರು.
ಬಿಜೆಪಿಯಿಂದ ಮಾಜಿ ಶಾಸಕ ಹಾಗೂ ಎಂಎಲ್‌ಸಿ ಸಿಪಿ ಯೋಗೇಶ್ವರ್ ಆಕಾಂಕ್ಷಿಯಾಗಿದ್ದಾರೆ. ‘ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 80 ಸಾವಿರ ಮತಗಳನ್ನು ಗಳಿಸಿದ ಕಾಂಗ್ರೆಸ್ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ. ಕ್ಷೇತ್ರದಲ್ಲಿ ಅಸಾಧಾರಣ ನಾಯಕರಿಲ್ಲದಿದ್ದರೂ, ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಾಧನೆ ಅದ್ಭುತವಾಗಿದೆ. ಉಪಚುನಾವಣೆಯಲ್ಲಿ ನಾವು 20,000 ಕ್ಕೂ ಹೆಚ್ಚು ಮತಗಳನ್ನು ಗಳಿಸಬಹುದು ಮತ್ತು ಕಾಂಗ್ರೆಸ್ ಚನ್ನಪಟ್ಟಣ ಕ್ಷೇತ್ರವನ್ನು ಖಂಡಿತವಾಗಿಯೂ ವಶಪಡಿಸಿಕೊಳ್ಳಲಿದೆ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಎಚ್‌ಸಿ ಬಾಲಕೃಷ್ಣ ಹೇಳಿದ್ದಾರೆ.
ಶಿವಕುಮಾರ್ ನಿಷ್ಠಾವಂತ ಬೆಂಬಲಿಗ ಹಾಗೂ ರಾಮನಗರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ, ಜನರ ಸೇವೆ ಮಾಡಲು ಅಧಿಕಾರದಲ್ಲಿ ಇರಬೇಕಿಲ್ಲ ಎಂದು ನನಗೆ ವೈಯಕ್ತಿಕವಾಗಿ ಅನಿಸುತ್ತಿದೆ. ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ಉತ್ತಮ ಕೆಲಸ ಮಾಡುತ್ತಾರೆ ಎಂದು ಹುಸೇನ್ ಹೇಳಿದರು.