ಮುಂಡಗೋಡ :
45 ದಿನಗಳ ಭೇಟಿಗಾಗಿ ಶುಕ್ರವಾರ ಮುಂಡಗೋಡ ನಗರಕ್ಕೆ ಬಂದ ಟಿಬೆಟಿಯನ್ನರ ಧರ್ಮ ಗುರು ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ 14 ನೇಯ ದಲಾಯಿ ಲಾಮಾ ಅವರಿಗೆ ಜಿಲ್ಲಾಡಳಿತ, ಬೌದ್ಧ ಬಿಕ್ಕುಗಳು ಮತ್ತು ಟಿಬೆಟಿಯನ್ನರು ಅದ್ಧೂರಿಯಾಗಿ
ಸ್ವಾಗತ ನೀಡಿದರು.
ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ರಾಜ್ಯ ಹೆದ್ದಾರಿ 69 ರ ಮೂಲಕ ರಸ್ತೆಮಾರ್ಗವಾಗಿ ಬಿಗಿ ಭದ್ರತೆ ಯಲ್ಲಿ ಬಂದ ದಲಾ ಯಿ ಲಾಮಾ ಅವರ ವಿಶೇಷ ವಾಹನಕ್ಕೆ ಝೆಡ್ + ಶ್ರೇಣಿಯ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಮುಂಡಗೋಡ ನಗರದ ರಸ್ತೆಗಳ ಇಕ್ಕೆಲಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ದಲಾಯಿ ಲಾಮಾ ನೋಡುತ್ತಲೇ ಕೈಬೀಸಿದರು, ಇದೇವೇಳೆ ಪ್ರತಿಯಾಗಿ ದಲಾಯಿ ಲಾಮಾ ಕೂಡ ಸಾರ್ವಜನಿಕರತ್ತ ಕೃತಜ್ಞತಾ ಪೂರ್ವಕವಾಗಿ ನಮಸ್ಕರಿಸಿದರು.
ಮುಂಜಾನೆ 11.30 ಸುಮಾರಿಗೆ ಕ್ಯಾಂಪ್ ನಂಬರ್ 6 ರ ಗುಮಾಂಗ್ ಮೊನೆಸ್ಟ್ರಿಯ ಡ್ರಿಪೋಂಗ್ ಹಾಲ್ ಗೆ ಬಂದಿಳಿದ ದಲಾಯಿ ಲಾಮಾ ಅವರಿಗೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಕೆ ಲಕ್ಷ್ಮಿಪ್ರಿಯಾ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ದಿಲೀಪ್ ಶಸಿ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು. ಈ ವೇಳೆ ಎಸ್ಪಿ ದೀಪನ್ ಎಂ ಎನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ,ಎಸಿ ಕಾವ್ಯಾ ರಾಣಿ, ಡಿಎಸ್ಪಿ ಗೀತಾ ಪಾಟೀಲ್ ,ತಹಶೀಲ್ದಾರ್ ಶಂಕರ್ ಗೌಡಿ, ತಾಲೂಕ ಪಂಚಾಯತ್ ಇಓ ಟಿ ವಾಯ್ ದಾಸನಕೊಪ್ಪ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಎಸ್ಪಿ ದೀಪನ್ ಎಂ ಎನ್ ಮಾರ್ಗದರ್ಶನದಲ್ಲಿ ಡಿಎಸ್ಪಿ ಗೀತಾ ಪಾಟೀಲ್, ಸಿಪಿಐ ರಂಗನಾಥ್ ನೀಲಮ್ಮನವರ ನೇತೃತ್ವದಲ್ಲಿ ಯಾವುದೇ ರೀತಿಯ ಭದ್ರತಾ ಲೋಪ ವಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಗುಮಾಂಗ್ ಮೊನೆಸ್ಟ್ರಿಯ ಡ್ರಿಪೋಂಗ್ ಹಾಲ್ ನಲ್ಲಿ ಉಪಸ್ಥಿತರಿದ್ದ ತಮ್ಮ ನೂರಾರು ಬೌದ್ಧ ಅನುಯಾಯಿಗಳನ್ನು ಕುರಿತು ಮಾತನಾಡಿದ ದಲಾಯಿ ಲಾಮಾ ಅವರು ಬೌದ್ಧ ಧರ್ಮ ವಿಶ್ವದೆಲ್ಲೆಡೆ ಪಸರಿಸುತ್ತಿದೆ, ವಿಜ್ಞಾನದಲ್ಲಿ ಧರ್ಮವನ್ನು ಕಾಣುತ್ತಿದ್ದೇವೆ. ಚೀನಾದಲ್ಲಿ ಕೂಡ ಬೌದ್ಧ ಧರ್ಮ ವ್ಯಾಪಕವಾಗುತ್ತಿದೆ, ತನಗೀಗ 90ವರ್ಷ ಒಟ್ಟಾರೆ 130 ವರ್ಷಗಳ ಕಾಲ ನಾನು ಬದುಕಿರುತ್ತೇನೆ ಎಂದು ಆಶೀರ್ವಚನ ನೀಡಿದರು.








