ಕಲ್ಲಿನ ಡಿಮ್ಮಿ ಸಾಗಾಟದಿಂದ ಹಾಳಾದ ರಸ್ತೆಗಳು

ಮಿಡಿಗೇಶಿ:

x

ಆಂಧ್ರ ರಾಜ್ಯದ ಮಡಕಶಿರಾ ತಾಲ್ಲೂಕಿನ ಗುಟ್ಟಗೂರಿಕೆ ಗ್ರಾಮದ ಬದ್ದಿಬೆಟ್ಟದಲ್ಲಿ ನಾಲ್ಕಾರು ಜನರ ಹೆಸರಿನಲ್ಲಿ ಕಲ್ಲಿನ ಗಣಿಗಾರಿಕೆ ನಡೆಯುತ್ತಿದೆ. ಗೊಟ್ಟಗೂರಿಕೆ, ಗುಡ್ಡಗೂರಿಕೆ ಗ್ರಾಮಸ್ಥರ ವಿರೋಧದ ನಡುವೆಯು ಆಂಧ್ರ ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡಿರುವುದು ಗ್ರಾಮಸ್ಥರ ಹಿತಕ್ಕೆ ವಿರುದ್ಧವಾಗಿದೆ.

ಈ ಬಗ್ಗೆ ಹಲವರು ಪ್ರತಿಭಟನೆ ಹಾಗೂ ನ್ಯಾಯಾಲಯಗಳಲ್ಲಿ ಹೋರಾಟ ಮಾಡುತ್ತಿರುವುದು ಗುಟ್ಟಾಗೇನು ಉಳಿದಿಲ್ಲ. ಈ ಬೆಟ್ಟವು ಅರ್ಧ ಕರ್ನಾಟಕ ರಾಜ್ಯಕ್ಕೆ ಇನ್ನುಳಿದ ಅರ್ಧ ಆಂಧ್ರ ರಾಜ್ಯಕ್ಕೆ ಸೇರಿದೆ. ಈ ಬಗ್ಗೆ ರೆವಿನ್ಯೂ ದಾಖಲೆಗಳಲ್ಲಿ ದೃಢಪಟ್ಟಿರುತ್ತದೆ. ಈ ಬಗ್ಗೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿ ಮಟ್ಟದ ನಾಡಕಛೇರಿಯ ಉಪ ತಹಸೀಲ್ದಾರ್, ಕಂದಾಯಾಧಿಕಾರಿ, ಗ್ರಾಮ ಲೆಕ್ಕಿಗರು ತಾಲ್ಲೂಕಿನ ದಂಡಾಧಿಕಾರಿಗಳ, ಉಪ ವಿಭಾಗಾಧಿಕಾರಿಗಳ ಆದೇಶದ ಮೇರೆಗೆ ಸ್ಥಳ ಪರಿಶೀಲನೆ ಮಾಡಿ, ಎ.ಸಿ. ರವರಿಗೆ ಫೋಟೋ ಸಮೇತ ವರದಿ ನೀಡಲಾಗಿದೆ.

ಆದರೆ ಉಪವಿಭಾಗಾಧಿಕಾರಿಗಳು ಕೈಗೊಂಡಿರುವ ಮುಂದಿನ ಕ್ರಮದ ಬಗ್ಗೆ ಮಾತ್ರ ನಿಗೂಢವಾಗಿದೆ. ಉಪ ತಹಸೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳು ಸೇರಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಗಾ.ಪಂ. ನಿಂದ ಮುಖ್ಯಮಂತ್ರಿವರೆಗಿನ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಮೈಮರೆತು ಕೈಕಟ್ಟಿಕೊಂಡು ಕುಳಿತುಕೊಂಡಿದ್ದೇ ಆದಲ್ಲಿ ಮುಂದೆ ಆಗಬಹುದಾದಂತಹ ತೊಂದರೆಗಳಿಗೆ ಸದರಿಯವರೆ ನೇರ ಹೊಣೆಗಾರರಾಗುತ್ತಾರೆಂಬುದು ಪ್ರಜ್ಞಾವಂತ ನಾಗರಿಕರ ನೇರ ಎಚ್ಚರಿಕೆಯಾಗಿರುತ್ತದೆ.


ಕರ್ನಾಟಕದ ಕೆಲ ರೈತಾಪಿ ವರ್ಗದವರ ತಪ್ಪುಗಳೂ ಬಹಳಷ್ಟಿವೆ. ಸದರಿ ಕಲ್ಲು ಗಣಿಗಾರಿಕೆಯಿಂದ ಬೃಹದಾಕಾರದ ಕಲ್ಲಿನ ಡಿಮ್ಮಿಗಳನ್ನು ತುಂಬಿಕೊಂಡು ಹೊತ್ತೊಯ್ಯುತ್ತಿರುವ ಲಾರಿಗಳಿಗೆ ತಮ್ಮ ತಮ್ಮ ಜಮೀನುಗಳಲ್ಲಿ ಓಡಾಡಲು ಒಂದು ಎಕರೆಗೆ ಇಂತಿಷ್ಟು ಹಣ ಪಡೆದು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಒಂದು ಎಕರೆಗೆ ತಲಾ ಹತ್ತು ಸಾವಿರ ರೂ.ಗಳನ್ನು ವರ್ಷವೊಂದಕ್ಕೆ ಪಡೆಯುತ್ತಿದ್ದಾರೆ.

ಇಲ್ಲಿ ತನಕ ತಲಾ ಎಪ್ಪತ್ತರಿಂದ ಎಂಭತ್ತು ಸಾವಿರ ರೂ.ವರೆಗೆ ಪಡೆದಿರುತ್ತಾರೆಂಬ ಆರೋಪವಿದೆ. ಹಣ ಪಡೆದ ರೈತರÀ ಜಮೀನಿನಲ್ಲಿ ಲಾರಿಗಳು ಓಡಾಡುತ್ತಿದ್ದು, ಡಿ. 03 ರಂದು ಬೆಳಗಿನ ಜಾವ 3 ರಿಂದ 4 ಗಂಟೆಯ ಸಮಯದಲ್ಲಿ ವೀರ ಚಿನ್ನೇನಹಳ್ಳಿಯಿಂದ ಹೊಸಹಳ್ಳಿ ಗ್ರಾಮಕ್ಕೆ ಹಾದು ಹೋಗುವ ದಾರಿಯಲ್ಲಿ ಕಲ್ಲಿನ ಡಿಮ್ಮಿ ತುಂಬಿದ ಲಾರಿಯೊಂದು ಪಲ್ಟಿ ಹೊಡೆದಿದೆ.

ಕಲ್ಲಿನ ಡಿಮ್ಮಿಯು ಸಿದ್ದಮ್ಮ ಪುಟ್ಟಲಿಂಗಪ್ಪನವರ ಜಮೀನಿನಲ್ಲಿ ಬಿದ್ದಿದ್ದು ಲಾರಿಯನ್ನು ದಿಢೀರನೆ ಮೇಲಕ್ಕೆ ಎತ್ತಿರುತ್ತಾರೆ. ಈ ಬಗ್ಗೆ ಎಲ್ಲೆಡೆ ಫೋಟೋಗಳು ವೈರಲ್ ಆಗಿರುತ್ತದೆ.

ಸದರಿ ಕಲ್ಲಿನ ಡಿಮ್ಮಿಗಳನ್ನು ಈ ಮೊದಲು ಕತ್ತಿರಾಜನಹಳ್ಳಿ ಗ್ರಾಮಸ್ಥರು ಒಮ್ಮತದಿಂದ ತಡೆದಿದ್ದಾರೆ. ಇದೀಗ ಬ್ರಹ್ಮದೇವರಹಳ್ಳಿ ಗ್ರಾಮದ ರೈತರುಗಳಾದ ದೇವರಾಜು, ಕರೇತಿಮ್ಮಪ್ಪ, ಗಂಗಣ್ಣನ ಎರಡು ಕಡೆ ಜಮೀನು, ಶಿವಣ್ಣ ಮುಂತಾದವರ ಜಮೀನುಗಳಲ್ಲಿ ಹೊಸದಾಗಿ ದಾರಿ ಸೃಷ್ಟಿಸಿ ಕಲ್ಲಿನ ಡಿಮ್ಮಿಗಳನ್ನು ಸಾಗಿಸಲಾಗುತ್ತಿದೆ.

ಇದನ್ನು ಚಿನ್ನೇನಹಳ್ಳಿ ಗ್ರಾ.ಪಂ. ಸದಸ್ಯರುಗಳಾದ ರಘುಪತಿ, ಸತೀಶ್ ಹಾಗೂ ಗ್ರಾಮಸ್ಥರು ವಿರೋಧಿಸುತ್ತಿದ್ದಾರೆ. ಆದರೆ ಸಂಬಂಧಿಸಿದ ಇಲಾಖೆಯವರೆ ನೀಲಿಹಳ್ಳಿಯಿಂದ ವೀರಚಿನ್ನೇನಹಳ್ಳಿ ನಡುವಿನ ರಾಜ್ಯ ಹೆದ್ದಾರಿ ರಸ್ತೆ ಕಣಿವೆ ಬಾಗಿಲಿನ ಎತ್ತರದ ಪ್ರದೇಶದಲ್ಲಿ ಲಾರಿಗಳನ್ನು ತಡೆದು, ತಮಗೆ ಸಿಗಬಹುದಾದ ಕಪ್ಪದ ಹಣವನ್ನು ಪಡೆದುಕೊಂಡು ಹೋಗುತ್ತಿರುವುದನ್ನು ದಾರಿಹೋಕರು ಕಣ್ಣಾರೆ ಕಾಣುತ್ತಿದ್ದಾರೆ.

ಈಗ ಈ ಕುರಿತು ಮೇಲ್ಕಂಡ ಇಲಾಖೆಗಳ ಮುಂದಿನ ಕ್ರಮವಾದರೂ ಏನು? ಕ್ರಮ ತೆಗೆದುಕೊಳ್ಳದೇ ಇದ್ದಪಕ್ಷದಲ್ಲಿ ಈ ಭಾಗದ ವೀರಚಿನ್ನೇನಹಳ್ಳಿ, ಹೊಸಹಳ್ಳಿ, ಬ್ರಹ್ಮದೇವರಹಳ್ಳಿ, ಕತ್ತಿರಾಜನಹಳ್ಳಿ ಗ್ರಾಮಸ್ಥರು ರಸ್ತೆ ತಡೆ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಈಗಾಗಲೆ ಭಾರಿ ತೂಕದ ಕಲ್ಲಿನ ಡಿಮ್ಮಿ ಸಾಗಾಟದಲ್ಲಿ ಶನಿವಾರ ರಾತ್ರಿ ಬ್ರಹ್ಮದೇವರ ಹಳ್ಳಿ-ಹೊಸಹಳ್ಳಿ ರಸ್ತೆ ತಿರುವಿನ ಸೇತುವೆಯ ಸ್ಲ್ಯಾಬ್ ಮುರಿದಿದ್ದು, ಮುಂದೇನಾಗುವುದು ಎಂದು ಕಾದು ನೋಡಬೇಕಾಗಿದೆ.

Recent Articles

spot_img

Related Stories

Share via
Copy link