ಮಾ. 13 ರಿಂದ ದಾವಣಗೆರೆ ದುರ್ಗಾಂಬಿಕ ದೇವಿ ಜಾತ್ರೆ, ಪ್ರಾಣಿ ಬಲಿ ನಿಷೇಧ

ದಾವಣಗೆರೆ:

 ದೇವರ ಕೃಪೆಗೆ ಪಾತ್ರರಾಗುವ ನಾವು ಯಾವುದೇ ರೀತಿಯ ಪ್ರಾಣಿ ಹಿಂಸೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ನಗರ ದೇವತೆ ಶ್ರೀ ದುರ್ಗಾಂಬಿಕ ಜಾತ್ರಾ ಪ್ರಯುಕ್ತ ನಡೆದ ಸಭೆಯಲ್ಲಿ ಭಾಗವಹಿಸಿದ್ದ ದೇವಸ್ಥಾನದ ಧರ್ಮದರ್ಶಿಗಳು, ಟ್ರಸ್ಟ್ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಾರ್ಚ್ 13 ರಿಂದ 16 ರ ವರಗೆ ನಡೆಯುವ ಜಾತ್ರೆಯಲ್ಲಿ ಯಾವುದೇ ಪ್ರಾಣಿ ಬಲಿ ಆಗಬಾರದು.

ಪ್ರಾಣಿ ಹಿಂಸೆ ಮಹಾಪಾಪ ಎಂದು ನಂಬಿಕೊಂಡು ಬಂದಿರುವವರು ನಾವು, ದೇವರು ಭಕ್ತಿಯನ್ನು ಬಯಸುತ್ತಾನೆಯೇ ಹೊರತು ಹಿಂಸೆಯನ್ನಲ್ಲ, ನಮ್ಮ ಕಾನೂನು ಕೂಡ ಅದನ್ನೇ ಹೇಳುತ್ತದೆ, ಹಾಗಾಗಿ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ಯಾವುದೇ ರೀತಿಯ ಪ್ರಾಣಿಹಿಂಸೆ ಮಾಡದೆ ಕೇವಲ ಸಿರೆಂಜ್ ಮೂಲಕ ಕೋಣದ ರಕ್ತವನ್ನು ತೆಗೆದು ತಾಯಿಗೆ ಅರ್ಪಿಸಿ ಜಾತ್ರೆ ಆಚರಿಸೋಣವೆಂದರು.

ಇದರೊಂದಿಗೆ ನಿಷೇಧಕ್ಕೆ ಒಳಗಾಗಿರುವ ಬೆತ್ತಲೆ ದೇಹದ ಮೇಲಿನ ಬೇವಿನುಡಿಗೆ, ಮುತ್ತು ಕಟ್ಟುವುದು ಮುಂತಾದ ಕಾನೂನು ಪ್ರಕಾರ ನಿಷೇಧಕ್ಕೊಳಗಾಗಿರುವ ಆಚರಣೆಗಳನ್ನು ಮಾಡದೆ ಕೈಯಲ್ಲಿ ಬೇವಿನ ಎಸಳನ್ನು ಹಿಡಿದು ಹರಕೆ ತೀರಿಸೋಣ.

ಒಂದು ವೇಳೆ ದೂರುಗಳು ಬಂದರೆ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಹಾಗೂ ದೇವಸ್ಥಾನದ ಕಮಿಟಿಯವರ ವಿರುದ್ದ ಕ್ರಮ ಕೈಗೊಳ್ಳಲಾಗುವುದೆಂದರು.

ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಜಾತ್ರಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಎಲ್ಲಾ ಇಲಾಖೆಗಳು ಈ ಹಿಂದಿನ ವರ್ಷಗಳಲ್ಲಿ ನಿರ್ವಹಿಸಿರುವಂತೆ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕು, ದೇವಸ್ಥಾನದ ಆವರಣದಲ್ಲಿ ನಡೆಯುವ ಉರುಳು ಸೇವೆ, ಧೀಡ್ ನಮಸ್ಕಾರಗಳಿಗೆ ಅನುವಾಗುವಂತೆ ಪಾಲಿಕೆ ವತಿಯಿಂದ ಮರಳಿನ ವ್ಯವಸ್ಥೆ ಮಾಡಬೇಕು,

ಒಂದು ವಾರ ಪೂರ್ತಿ ಸರಾಗ ನೀರು ಸರಬರಾಜು ಆಗಬೇಕು, ನಗರದ 45 ವಾರ್ಡ್‍ಗಳಲ್ಲಿಯೂ ಸ್ವಚ್ಚತೆ ಇರುವಂತೆ ನೋಡಿಕೊಳ್ಳಬೇಕು, ಜಾತ್ರೆಯನ್ನು ಒಂದು ರೀತಿ ದಾವಣಗೆರೆ ಹಬ್ಬ ಎಂಬಂತೆ ಆಚರಿಸಲು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿಕೊಡಬೇಕೆಂದರು.

ಪ್ಲಾಸ್ಟಿಕ್ ಬ್ಯಾನರ್ ಮತ್ತು ಪೋಸ್ಟರ್‍ಗಳನ್ನು ಅಳವಡಿಸುವುದನ್ನು ನಿಷೇಧ ಮಾಡಲಾಗಿದ್ದು, ಪ್ಲಾಸ್ಟಿಕ್ ಬ್ಯಾನರ್ ಅಳವಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಜಾತ್ರೆಯು ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯ. ಹಾಗಾಗಿ ಮುಂಜಾಗ್ರತೆ ಕ್ರಮ ವಹಿಸಿಕೊಂಡು ಅಲ್ಲಲ್ಲಿ ಕಸದ ಬುಟ್ಟಿಗಳು ಇಟ್ಟು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಭಕ್ತಾದಿಗಳಿಗೆ ಮಾಹಿತಿ ಒದಗಿಸಲು ನಾಮಫಲಕಗಳನ್ನು ಅಳವಡಿಸಬೇಕು.

ಕಾನೂನಿನಲ್ಲಿ ಪ್ರಾಣಿಬಲಿಯನ್ನು ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ ಆಚರಣೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಲ್ಲಾದರೂ ಪ್ರಾಣಿ ಬಲಿ ನೀಡುವ ವರದಿಗಳು ಬಂದಲ್ಲಿ ಸಾಕ್ಷಿಗಳು ದೊರೆತರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ನಗರದಾದ್ಯಂತ ಸಿಸಿಟಿವಿ ಅಳವಡಿಸಲು ವ್ಯವಸ್ಥೆ ಮಾಡಲಾಗಿದೆ.

ಸಂಚಾರ ದಟ್ಟಣೆ ನಿಯಂತ್ರಣ ಕುರಿತು ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಆಚರಣೆ ಮಾಡಬೇಕು. ದೇವದಾಸಿ ಪದ್ಧತಿ, ಬೇವಿನ ಉಡುಗೆಯಂತಹ ಮೂಢನಂಬಿಕೆಗಳನ್ನು ಆಚರಿಸುವವರ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಮಾತನಾಡಿ, ಪ್ರತಿಬಾರಿಯಂತೆ ಈ ಬಾರಿಯೂ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಹಾಗೂ ವಿವಿಧ ಇಲಾಖೆಗಳು ಎಲ್ಲ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು.

ಮಾಜಿ ಧೂಡಾ ಅಧ್ಯಕ್ಷ ಯಶವಂತರಾವ್ ಜಾದವ್ ಮಾತನಾಡಿ, ಜಿಲ್ಲಾಡಳಿತ ಹಾಗೂ ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ಸರಳವಾಗಿ ಕುಸ್ತಿ ಪಂದ್ಯಾವಳಿ ಹಾಗೂ ಕುರಿ ಕಾಳಗಗಳನ್ನು ಆಯೋಜನೆ ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ್ ಹಾಗೂ ಉಪ ಮೇಯರ್ ಗಾಯಿತ್ರಿಬಾಯಿ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ಬಿ.ಎಸ್ ಗಿರೀಶ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಪಿ.ಮುದ್ದಜ್ಜಿ, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ಸುಂಕದ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಇತರರು ಹಾಜರಿದ್ದರು.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap