ದರ್ಶನ್‌ ಮಧ್ಯಂತರ ಜಾಮೀನು ರದ್ದು ಕೋರಿ ಪೊಲೀಸರಿಂದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

ಬೆಂಗಳೂರು:

   ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌  ಅವರಿಗೆ ಹೈಕೋರ್ಟ್‌ ಮಂಜೂರು ಮಾಡಿದ್ದ ಮಧ್ಯಂತರ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ (ಡಿ. 4) ಮೇಲ್ಮನವಿ ಸಲ್ಲಿಸಲಾಗಿದೆ. ಸದ್ಯ ಬೆನ್ನು ನೋವಿನ ಶಸ್ತ್ರ ಚಿಕಿತ್ಸೆಗಾಗಿ ಜಾಮೀನಿನ ಮೇಲೆ ಹೊರಗಿರುವ ದರ್ಶನ್‌ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

   ಪ್ರಾಸಿಕ್ಯೂಷನ್‌  ಪರವಾಗಿ ವಕೀಲರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದ್ದು, ದರ್ಶನ್‌ ಅವರಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಮಂಜೂರು ಮಾಡಿರುವ ಮಧ್ಯಂತರ ಜಾಮೀನು ರದ್ದು ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಡಿ. 6 ಅಥವಾ ಡಿ. 9ರಂದು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.

   ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಸೇರಿದಂತೆ 17 ಮಂದಿ ಬಂಧನವಾಗಿತ್ತು. ಪ್ರಕರಣದಲ್ಲಿ ದರ್ಶನ್‌ ಎ2 ಆರೋಪಿಯಾಗಿದ್ದು, ಒಂದಷ್ಟು ತಿಂಗಳು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಅಲ್ಲಿ ವಿಶೇಷ ಆತಿಥ್ಯವನ್ನು ಪಡೆದ ಆರೋಪದ ಮೇಲೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಅವರನ್ನು ಸ್ಥಳಾಂತರಿಸಲಾಯಿತು. ಈ ಮೊದಲಿನಿಂದಲೂ ವಿಪರೀತ ಬೆನ್ನು ನೋವಿನಿಂದ ಬಳಲುತ್ತಿದ್ದ ನಟ ದರ್ಶನ್‌ ಅನಾರೋಗ್ಯ ಕಾರಣ ನೀಡಿ ಅ. 30ರಂದು ಜೈಲಿನಿಂದ ಮಧ್ಯಂತರ ಜಾಮೀನು ಪಡೆದುಕೊಂಡು ಹೊರಬಂದಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

   ದರ್ಶನ್‌ ಅವರಿಗೆ ಕರ್ನಾಟಕ ಹೈಕೋರ್ಟ್‌ ನೀಡಿರುವ ಮಧ್ಯಂತರ ಜಾಮೀನನ್ನು ರದ್ದು ಮಾಡಬೇಕು ಎಂದು ಸರ್ಕಾರದ ಪರ ವಕೀಲರಿಂದ ಬುಧವಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ ದರ್ಶನ್‌ ಮಧ್ಯಂತರ ಜಾಮೀನಿಗೆ ಸಂಬಂಧಿಸಿದಂತೆ ಕೊಕ್ಕೆ ಹಾಕಿದರೆ ನಟ ಮತ್ತೆ ಜೈಲು ಪಾಲಾಗಬೇಕಾಗುತ್ತದೆ. ಸದಾ ಒಂದಿಲ್ಲೊಂದು ಸಂಕಷ್ಟಕ್ಕೆ ಗುರಿಯಾಗುತ್ತಿರುವ ದರ್ಶನ್‌ ಈ ಸುದ್ದಿಯಿಂದ ಮತ್ತಷ್ಟು ಆತಂಕಗೊಂಡಿರುತ್ತಾರೆ.

Recent Articles

spot_img

Related Stories

Share via
Copy link