ರೇಣುಕ ಸ್ವಾಮಿ ಕೇಸ್‌ : ಜಾಮೀನಿಗೆ ಅರ್ಜಿ ಸಲ್ಲಿಸಿದ ನಟ ದರ್ಶನ್….!

ಬೆಂಗಳೂರು :

    ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಕೊನೆಗೂ ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ಎ1 ಆರೋಪಿ ಪವಿತ್ರಾ ಸೇರಿದಂತೆ ಇನ್ನೂ ಕೆಲವು ಆರೋಪಿಗಳು ಈಗಾಗಲೇ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು, ಆದರೆ ಅವರ ಅರ್ಜಿಗಳು ತಿರಸ್ಕೃತಗೊಂಡಿವೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಎರಡನೇ ಬಾರಿಗೆ ಜಾಮೀನು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಆದರೆ ದರ್ಶನ್ ಮಾತ್ರ ಈವರೆಗೆ ಜಾಮೀನು ಅರ್ಜಿ ಸಲ್ಲಿಸಿರಲಿಲ್ಲ. ಇದೀಗ ಕೊನೆಗೂ ದರ್ಶನ್ ಜಾಮೀನಿಗೆ ಅರ್ಜಿ ಹಾಕಿದ್ದಾರೆ.

    ಪ್ರಕರಣದ ಆರೋಪ ಪಟ್ಟಿ ಸಲ್ಲಿಕೆಯಾಗಿ ಎರಡು ವಾರಕ್ಕೂ ಹೆಚ್ಚು ಸಮಯವಾಗಿದ್ದು, ತುಸು ಹೆಚ್ಚೇ ಸಮಯ ತೆಗೆದುಕೊಂಡು ದರ್ಶನ್, ತಮ್ಮ ವಕೀಲರ ಕಡೆಯಿಂದ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ದರ್ಶನ್​ರ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ಇಂದೇ ದರ್ಶನ್​ರ ಜಾಮೀನು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ದಟ್ಟವಾಗಿದೆ.

   ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿಯಾಗಿದ್ದು, ಕೊಲೆಗೆ ಪವಿತ್ರಾ ಮತ್ತು ದರ್ಶನ್ ಅವರುಗಳೇ ನೇರ ಕಾರಣ ಎಂದು ಪೊಲೀಸರ ತನಿಖೆ ಹೇಳುತ್ತಿದೆ. ದರ್ಶನ್ ಪ್ರಭಾವದಿಂದಲೇ ಅಪಹರಣ ಮತ್ತು ಕೊಲೆಯಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ದರ್ಶನ್​ಗೆ ಜಾಮೀನು ಸಿಗುವುದು ಕಷ್ಟ ಎನ್ನಲಾಗುತ್ತಿದೆ. ಇದರ ನಡುವೆ, ದರ್ಶನ್​ಗೆ ಕೊಲ್ಲುವ ಉದ್ದೇಶ ಇರಲಿಲ್ಲ, ಅಚಾನಕ್ಕಾಗಿ ಘಟನೆ ನಡೆದಿದೆ ಅಲ್ಲದೆ ರೇಣುಕಾ ಸ್ವಾಮಿ ಸತ್ತಾಗ ದರ್ಶನ್ ಸ್ಥಳದಲ್ಲಿರಲಿಲ್ಲ ಎಂಬ ಮಾತುಗಳು ಸಹ ಕೇಳಿ ಬರುತ್ತಿದ್ದು, ಇದೇ ಆಧಾರದ ಮೇಲೆ ಜಾಮೀನು ಅರ್ಜಿಗೆ ವಕೀಲರು ವಾದಿಸುವ ಸಾಧ್ಯತೆ ಇದೆ.

   ಜೂನ್ ತಿಂಗಳ 9ನೇ ತಾರೀಖಿನಂದು ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್​ನಲ್ಲಿ ಕೂಡಿಹಾಕಿ ಅಮಾನುಷವಾಗಿ ಹಲ್ಲೆ ಮಾಡಲಾಗಿತ್ತು. ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿ ದೇಹವನ್ನು ಸುಮ್ಮನಹಳ್ಳಿ ಮೋರಿಗೆ ಬಿಸಾಡಲಾಗಿತ್ತು. ಈ ಪ್ರಕರಣದಲ್ಲಿ ಜೂನ್ 11 ರಂದು ಬೆಳಿಗ್ಗೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯ ಬಂಧನ ಆಗಿದೆ. ಎಲ್ಲ ಆರೋಪಿಗಳು ಈಗ ಜೈಲಿನಲ್ಲಿದ್ದು, ವಿಚಾರಣಾಧೀನ ಕೈದಿಗಳಾಗಿದ್ದಾರೆ.

Recent Articles

spot_img

Related Stories

Share via
Copy link