ಚೆನ್ನೈ:
ಕೆಲಸ ವಿಲ್ಲದ ಕ್ಷೌರಿಕ ಬೆಕ್ಕಿನ ಕೂದಲು ಕತ್ತರಿಸುತ್ತಿದ್ದನಂತೆ , ಬಿಜೆಪಿ ಐಟಿ ವಿಂಗ್ ಸದಸ್ಯರ ಪರಿಸ್ಥಿತಿ ಆ ರೀತಿಯಾಗಿದೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ಮಿಕರ ಕುರಿತು ತಾವು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಡಿಎಂಕೆ ಸಂಸದ ದಯಾನಿಧಿ ಮಾರನ್ ಕ್ಷಮೆಯಾಚಿಸಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕಿಡಿಕಾರಿದ ಅವರು ಕೆಲಸ ವಿಲ್ಲದ ಅಜಾಮ ಬೆಕ್ಕಿನ ಕೂದಲು ಕತ್ತರಿಸುವಂತಾಗಿದೆ ಬಿಜೆಪಿ ಐಟಿ ವಿಂಗ್ ಸದಸ್ಯರ ಪರಿಸ್ಥಿತಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಹಿಂದಿ ಮಾತನಾಡುವ ಉತ್ತರಪ್ರದೇಶ ಮತ್ತು ಬಿಹಾರದ ಜನರು ತಮಿಳುನಾಡಿನಲ್ಲಿ ಶೌಚಾಲಯ ತೊಳೆಯುವ ಮತ್ತು ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿದ್ದಾರೆ. ಆದರೆ, ಇಲ್ಲಿನ ಯುವಜನರು ಇಂಗ್ಲಿಷ್ ಪ್ರೌಢಿಮೆಯಿಂದ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾರನ್ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ತಮಿಳುನಾಡಿನ ಬಿಜೆಪಿ ನಾಯಕರು ಮಾರನ್ ಅವರ ಹೇಳಿಕೆಯನ್ನು ಖಂಡಿಸಿದ್ದು, ಅವರು ಕ್ಷೌರಿಕರನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ ತಮಿಳುನಾಡು ಮುಖ್ಯಸ್ಥ ಕೆ ಅಣ್ಣಾಮಲೈ ಮಾರನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಡಿಎಂಕೆ ಸಂಸದರು “ಯಾರೊಬ್ಬರ ವೃತ್ತಿ ಅಥವಾ ಭಾಷೆಯನ್ನು ಕೀಳಾಗಿ ಕಾಣುವುದರಲ್ಲಿ” ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ.