ನವದೆಹಲಿ:
ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣ ಅಡವು ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಮಂಜುನಾಥ್ ಗೌಡ ಅವರ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಂಡಿದೆ.
2014 ರಲ್ಲಿ ಮಂಜುನಾಥ ಗೌಡ ಬ್ಯಾಂಕಿನ ಅಧ್ಯಕ್ಷರಾಗಿದ್ದಾಗ ಈ ಹಗರಣ ನಡೆದಿದ್ದು, ಆಗ ತನಿಖೆ ನಡೆಸಿದ್ದ ಸಿಐಡಿ ಮಂಜುನಾಥ ಗೌಡ ಅವರನ್ನು ಬಂಧಿಸಿತ್ತು. ಬಳಿಕ ಪ್ರಕರಣ ಇಡಿಗೆ ವರ್ಗಾವಣೆಗೊಂಡಿತ್ತು. ಸದ್ಯ ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿರುವ ಆರ್.ಎಂ. ಮಂಜುನಾಥ್ ಗೌಡ ಜೈಲಿನಲ್ಲಿದ್ದು, ಅವರಿಗೆ ಸೇರಿದ ₹13.91 ಕೋಟಿ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಚರಾಸ್ತಿ ಹಾಗೂ ಸ್ತಿರಾಸ್ತಿ ಸೇರಿ ₹13.91 ಕೋಟಿ ಸೀಜ್ ಮಾಡಲಾಗಿದೆ. ಸದ್ಯ ಮಂಜುನಾಥ ಗೌಡ ಪಿಎಂಎಲ್ ಆ್ಯಕ್ಟ್ ಅಡಿ ಆರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
