ಬೆಂಗಳೂರು:
ನನ್ನ ವಿರುದ್ಧವೂ ರಾಜ್ಯಪಾಲರಿಗೆ ದೂರು ನೀಡಲು ಷಡ್ಯಂತ್ರಗಳು ನಡೆಯುತ್ತಿವೆ. ಆದರೆ, ಯಾವುದಕ್ಕೂ ನಾನು ಹೆದರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾನುವಾರ ಹೇಳಿದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಟ್ರಸ್ಟ್‌ಗೆ ಕೆಐಎಡಿಬಿ ಜಮೀನು ಮಂಜೂರು ವಿವಾದ ಕುರಿತು ಕಾಂಗ್ರೆಸ್ ನಾಯಕರ ವಿರುದ್ಧ ಸಲ್ಲಿಕೆಯಾಗಿರುವ ಎರಡು ಅರ್ಜಿಗಳಿಗೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು,
ಇದರ ಬಗ್ಗೆ ನಮ್ಮ ಬಳಿ ಯಾವುದೇ ಮಾಹಿತಿಲ್ಲ. ಕೆಲವರು ಕಾಂಗ್ರೆಸ್ ನಾಯಕರ ವಿರುದ್ಧ ದೂರು ಸಲ್ಲಿಸಿದ್ದಾರೆ. ನನ್ನ ವಿರುದ್ಧವೂ ದೂರು ಸಲ್ಲಿಸಲು ಯತ್ನಗಳು ನಡೆಯುತ್ತಿವೆ. ದೂರು ಸಲ್ಲಿಸಲಿ. ಆದರೆ, ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಗಾಲಿ ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಸೇರಿದಂತೆ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಾಯಕರ ವಿರುದ್ಧ ರಾಜಭವನದಲ್ಲಿ ಯಾವುದೇ ದೂರುಗಳೂ ದಾಖಲಾಗಿಲ್ಲ ಎಂದು ರಾಜ್ಯಪಾಲರು ಕಾಂಗ್ರೆಸ್ ನಿಯೋಗಕ್ಕೆ ತಿಳಿಸಿದ್ದಾರೆ ಎಂದು ಶಿವಕುಮಾರ್ ಅವರು ಮಾಹಿತಿ ನೀಡಿದರು.
ರಾಜ್ಯಪಾಲರ ಹೇಳಿಕೆ ಗೊಂದಲ ಸೃಷ್ಟಿಸಿದೆ. ನಮಗೆ ಸಿಕ್ಕಿರುವ ಮಾಹಿತಿ ಆಧಾರದ ಮೇಲೆ ವಿಪಕ್ಷಗಳ ಸದಸ್ಯರ ವಿರುದ್ಧ ಕಾನೂನು ಕ್ರಮ ಕೋರಿ ದೂರು ಸಲ್ಲಿಸಿದ್ದೆವು. ಆದರೆ, ಇದೀಗ ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು ಎಂದರು