ನವದೆಹಲಿ:
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸಿಬಿಐ ನೋಟಿಸ್ ನೀಡಿದ್ದು ಅದನ್ನು ಮುಂದೋಡುವಂತೆ ಅವರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ದೆಹಲಿ ಬಜೆಟ್ ಅನ್ನು ಅಂತಿಮಗೊಳಿಸುವಲ್ಲಿ ನಿರತರಾಗಿರುವ ಕಾರಣ ಸಿಬಿಐ ತನ್ನ ವಿಚಾರಣೆಯನ್ನು ಫೆಬ್ರುವರಿ ಕೊನೆಯ ವಾರದವರೆಗೆ ಮುಂದೂಡುವಂತೆ ಭಾನುವಾರ ಒತ್ತಾಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಿದ ಸುಮಾರು ಮೂರು ತಿಂಗಳ ನಂತರ ಸಿಸೋಡಿಯಾ ಅವರನ್ನು ಭಾನುವಾರ ವಿಚಾರಣೆಗೆ ಕರೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಎಪಿ ನಾಯಕ ಮನೀಶ್ ಸಿಸೋಡಿಯಾ ಮತ್ತು ಇತರ ಶಂಕಿತರ ವಿರುದ್ಧ ತನಿಖೆ ಇನ್ನೂ ನಡೆಯುತ್ತಿರುವುದರಿಂದ ಸದ್ಯ ಚಾರ್ಜ್ ಶೀಟ್‌ನಲ್ಲಿ ಸಿಸೋಡಿಯಾ ಅವರನ್ನು ಆರೋಪಿ ಎಂದು ಹೆಸರಿಸಿಲ್ಲ.
‘ನಾನು ಸಿಬಿಐಗೆ ಪತ್ರ ಬರೆದಿದ್ದೇನೆ ಮತ್ತು ನಾನು ದೆಹಲಿಯ ಬಜೆಟ್ ಅನ್ನು ಅಂತಿಮಗೊಳಿಸುತ್ತಿದ್ದೇನೆ ಮತ್ತು ಇದು ನಿರ್ಣಾಯಕ ಸಮಯವಾಗಿದೆ. ಹೀಗಾಗಿ, ಕಳೆದ ವಾರ ಫೆಬ್ರುವರಿ ಕೊನೆಯ ವಾರದ ನಂತರ ವಿಚಾರಣೆಗೆ ಬರುತ್ತೇನೆ ಎಂದು ಹೇಳಿದ್ದೇನೆ’ ಎಂದು ಮನೀಶ್ ಸಿಸೋಡಿಯಾ ಸುದ್ದಿಗಾರರಿಗೆ ತಿಳಿಸಿದರು.
‘ಸಮಯಕ್ಕೆ ಸರಿಯಾಗಿ ಬಜೆಟ್ ಮಂಡಿಸುವುದು ಹಣಕಾಸು ಸಚಿವನಾಗಿ ನನ್ನ ಕರ್ತವ್ಯ ಮತ್ತು ಅದಕ್ಕಾಗಿ 24 ಗಂಟೆಯೂ ಶ್ರಮಿಸುತ್ತಿದ್ದೇನೆ. ಫೆಬ್ರುವರಿ ಕೊನೆಯ ವಾರದ ನಂತರ ಬಂದು ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ನೀಡುವಂತೆ ಸಿಬಿಐಗೆ ಮನವಿ ಮಾಡಿದ್ದೇನೆ’ ಎಂದು ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








