ಕೊಯಮತ್ತೂರು:
ವಾಲ್‌ಪಾರೈನಲ್ಲಿ ನಿನ್ನೆ ಬೆಳಗ್ಗೆ ವರದಿ ಮಾಡಲು ತೆರಳುತ್ತಿದ್ದ ಆಂಗ್ಲ ದೈನಿಕದ ಹಿರಿಯ ಪತ್ರಕರ್ತರು ಮತ್ತು ಛಾಯಾಗ್ರಾಹಕ ವಿಲ್ಸನ್ ಥಾಮಸ್ ಅವರಿಗೆ ಅಂದು ಎಂದಿನಂತೆ ಸಾಮಾನ್ಯ ದಿನವಾಗಿತ್ತು. ಆದರೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ತಡೆಯಲು ಹೆಣಗಾಡುತ್ತಿದ್ದ ಪೊಲೀಸ್ ಅಧಿಕಾರಿಗಳ ತಂಡವನ್ನು ಅವರು ಗಮನಿಸಿದರು.
50ರ ಹರೆಯದ ಟೀ ಎಸ್ಟೇಟ್ ಕಾರ್ಮಿಕ ವೀರಮಣಿ ತನ್ನ ಕೆಲಸದ ಸ್ಥಳದಲ್ಲಿನ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿ 30 ಅಡಿ ಎತ್ತರದ ಹೈವೋಲ್ಟೇಜ್ ವಿದ್ಯುತ್ ಟವರ್ ಅನ್ನು ಹತ್ತಿದನು. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ಎಷ್ಟೆಲ್ಲಾ ಮನವೊಲಿಸಿದರು ಪ್ರಯೋಜನವಾಗಲಿಲ್ಲ. ಆತ ಕೆಳಗೆ ಇಳಿಯಲು ನಿರಾಕರಿಸಿದ. ಅಲ್ಲದೆ ತಮ್ಮ ಎಸ್ಟೇಟ್ ನಿರ್ವಹಣೆಯ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕೆಂದು ಇಲಾಖೆಯ ಅಧಿಕಾರಿಗಳು ಭರವಸೆ ನೀಡಬೇಕೆಂದು ಪಟ್ಟುಹಿಡಿದ.
ಆಗ ಎಂಟ್ರಿ ಕೊಟ್ಟಿದ್ದೆ ವಿಲ್ಸನ್ ಥಾಮಸ್. ರಕ್ಷಣಾ ತಂಡದ ಮನವಿ ಮೇರೆಗೆ ವಿಲ್ಸನ್ ಅವರು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರಾಗಿ ಬದಲಾದರು. ಕೂಡಲೇ ವೀರಮಣಿಗೆ ತಾನು ಇಲಾಖೆ ಅಧಿಕಾರಿ ನಿನ್ನ ದೂರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದರಿಂದ ಖುಷಿಯಾದ ವೀರಮಣಿ ಪ್ರತಿಭಟನೆಯನ್ನು ಹಿಂಪಡೆದು ವಿದ್ಯುತ್ ಟವರ್ ಕೆಳಗೆ ಇಳಿದು ಮೂರು ಗಂಟೆಗಳ ಕಾಲ ನಡೆದ ಸಂಧಾನಕ್ಕೆ ಅಂತ್ಯ ಹಾಡಿದರು.