ಬೆಂಗಳೂರು
ನಗರದಲ್ಲಿ ರಜಾದಿನ ಭಾನುವಾರ ಅತಿ ಹೆಚ್ಚು ಅಪಘಾತಗಳು ಸಂಭವಿಸಿ ಸಾವು ನೋವುಗಳು ಸಂಭವಿಸಿರುವುದು ಸಂಚಾರ ಪೊಲೀಸರ ಕಳೆದ ವರ್ಷದ ಅಪಘಾತದ ಅಂಕಿ-ಅಂಶಗಳಿಂದ ಬೆಳಕಿಗೆ ಬಂದಿದೆ.
ಕಳೆದ 2019 ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಭಾನುವಾರವೇ ಹೆಚ್ಚಿನ ಅಪಘಾತಗಳು ನಡೆದಿದ್ದು ಮೃತಪಟ್ಟ 744 ಮಂದಿಯಲ್ಲಿ ಭಾನುವಾರವೇ 140 ಮಂದಿ ಇರುವುದು ಕಂಡುಬಂದಿದೆ.ಮಂಗಳವಾರ 126 ಜನ, ಬುಧವಾರ 105 ಮಂದಿ, ಶುಕ್ರವಾರ 97 ಜನರು, ಗುರುವಾರ 95 ಮಂದಿ, ಶನಿವಾರ 94 ಹಾಗೂ ಸೋಮವಾರ 87 ಜನರು ಮೃತಪಟ್ಟಿದ್ದಾರೆ
ಭಾನುವಾರ ವಾಹನ ದಟ್ಟಣೆ ನಗರದಲ್ಲಿ ಕಡಿಮೆ ಇರುವುದರಿಂದ ಕೆಲವರು ಅತಿ ವೇಗದಿಂದ ವಾಹನ ಚಲಾಯಿಸಲು ಹೋಗಿ ಸಾವು ತಂದುಕೊಂಡಿದ್ದಾರೆ ಸಂಜೆ 6 ರಿಂದ 9 ಗಂಟೆ ಅಧಿಕ ಅಪಘಾತದ ಸಮಯವಾಗಿದ್ದು, ಕಳೆದ ವರ್ಷ ನಗರದಲ್ಲಿ ನಡೆದ ಮಾರಣಾಂತಿಕ ಅಪಘಾತಗಳು ಸಂಜೆ 6 ರಿಂದ 9ರ ವೇಳೆಯಲ್ಲಿ ಅಧಿಕವಾಗಿದ್ದವು. ಈ ವೇಳೆ 133 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, ನಂತರದ ಸ್ಥಾನದಲ್ಲಿ ಮಧ್ಯರಾತ್ರಿ 12 ರಿಂದ ಬೆಳಗ್ಗೆ 6 ಗಂಟೆ ವೇಳೆಗೆ 128 ಸಾವು ಸಂಭವಿಸಿವೆ.
ಸಂಚಾರ ವಿರಳ ವೇಗ ಹೆಚ್ಚಳ
ಸಂಜೆ ವೇಳೆ ವಾಹನ ಸವಾರರ ಮಾನಸಿಕ ಒತ್ತಡ ಹೆಚ್ಚಿರುವುದರಿಂದ ಅಜಾಗರೂಕರಾಗಿ ವಾಹನ ಚಲಾಯಿಸಿ ಸಾವು ತಂದು ಕೊಂಡಿದ್ದಾರೆ.ನಗರದಲ್ಲಿ ಪ್ರತಿದಿನ ಇಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟರೆ, ಸುಮಾರು 30ಕ್ಕೂ ಹೆಚ್ಚು ವಾಹನ ಸವಾರರು ಗಾಯಗೊಳ್ಳುತ್ತಿದ್ದಾರೆ ಎಂಬ ಅಂಶ ನಗರ ಸಂಚಾರ ಪೊಲೀಸರು ಸಿದ್ದಪಡಿಸಿರುವ ವರದಿಯಲ್ಲಿದೆ.
ನಗರದಲ್ಲಿ ಕಳೆದ ಮೂರು ವರ್ಷಗಳಲ್ಲಿ ನಡೆದ ರಸ್ತೆ ಅಪಘಾತಗಳ ಪಟ್ಟಿ ಬಿಡುಗಡೆ ಮಾಡಿದ್ದು, 2019ರ ಅಂಕಿ ಅಂಶಗಳ ಪ್ರಕಾರ, ನಗರದಲ್ಲಿ 2018ಕ್ಕಿಂತಲೂ ಹೆಚ್ಚು ರಸ್ತೆ ಅಪಘಾತಗಳು 2019ರಲ್ಲಿ ನಡೆದಿವೆ. ಅಂದರೆ 2019ರಲ್ಲಿ 4,688 ಅಪಘಾತಗಳು ನಡೆದರೆ, 2018ರಲ್ಲಿ 4,611 ಅಪಘಾತಗಳು ಸಂಭವಿಸಿದ್ದವು. ಆದರೆ, 2017ರಲ್ಲಿ 5,065 ಅಪಘಾತಗಳು ನಡೆದಿದ್ದವು. ಕಳೆದ ಎರಡು ವರ್ಷದ ಅಂಕಿ ಅಂಶಗಳಲ್ಲಿ ಗಮನಿಸಿದರೆ ಅಪಘಾತಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ದ್ವಿಚಕ್ರವಾಹನ ಸವಾರರು ಹೆಚ್ಚು
2019ರಲ್ಲಿ ನಡೆದ 4,688 ರಸ್ತೆ ಅಪಘಾತ ಪ್ರಕರಣಗಳಲ್ಲಿ ಒಟ್ಟು 744 ಜನ ದ್ವಿಚಕ್ರ ವಾಹನ ಚಾಲನೆ ವೇಳೆ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ. ಇದು 2018ರಲ್ಲಿ ಮೃತಪಟ್ಟವರಿಗಿಂತಲೂ ಹೆಚ್ಚಿದೆ. ಅಂದರೆ, 2018 ರಲ್ಲಿ 663 ಮಂದಿ ಮೃತಪಟ್ಟಿದ್ದರು. 2017 ರಲ್ಲಿ 609 ಜನ ಮೃತಪಟ್ಟಿದ್ದರು. ಕಳೆದ ಮೂರು ವರ್ಷದಿಂದ ಬೆಂಗಳೂರಿನಲ್ಲಿ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೃತಪಡುತ್ತಿರುವವರ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ. ಇದರಲ್ಲಿ ದ್ವಿಚಕ್ರ ವಾಹನ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಯೇ ಹೆಚ್ಚಿದೆ. ಕಳೆದ ವರ್ಷ ನಗರದಲ್ಲಿ 356 ಜನ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರೆ, 246 ಜನ ಪಾದಚಾರಿಗಳು ಮೃತಪಟ್ಟಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ