ಮೈಸೂರಿನಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು

    ಮೈಸೂರು ಅರಮನೆ ಬಳಿ ನಡೆದಿದ್ದ ಸ್ಫೋಟ ಪ್ರಕರಣದಲ್ಲಿ  ಗಾಯಗೊಂಡಿದ್ದ ಬೆಂಗಳೂರಿನ ಲಕ್ಷ್ಮಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಇದರಿಂದ ಪ್ರಕರಣದಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಇಂದು ಮಧ್ಯಾಹ್ನ ನಂಜನಗೂಡು ಮೂಲದ ಹೂವಿನ ವ್ಯಾಪಾರಿ ಮಂಜುಳಾ ಸಾವಿಗೀಡಾಗಿದ್ದರು. ಇದರ ಬೆನ್ನಲ್ಲೇ ಚಿಕಿತ್ಸೆ ಫಲಿಸದೇ ಲಕ್ಷ್ಮಿ ಕೊನೆಯುಸಿರೆಳೆದಿದ್ದಾರೆ.

    ಗುರುವಾರ ರಾತ್ರಿ ಅರಮನೆ ಮುಂದೆ ಬಲೂನ್‌ಗೆ ಗಾಳಿ ತುಂಬುವ ಹೀಲಿಯಂ ಗ್ಯಾಸ್​​ ಸಿಲಿಂಡರ್​ ಸ್ಫೋಟವಾಗಿ ಬಲೂನ್‌ ಮಾರುತ್ತಿದ್ದ ಉತ್ತರ ಪ್ರದೇಶದ ಕನೌಜ್ ಮೂಲದ ವ್ಯಾಪಾರಿ ಸಲೀಂ ಖಮರುದ್ದೀನ್ (40) ಎಂಬಾತ ಮೃತಪಟ್ಟಿದ್ದ. ಈ ವೇಳೆ ಹೂವಿನ ವ್ಯಾಪಾರಿ ಮಂಜುಳಾ, ಬೆಂಗಳೂರಿನ ಕಾಮಾಕ್ಷಿಪಾಳ್ಯದ ಲಕ್ಷ್ಮಿ, ಕೋಲ್ಕತಾದ ಶಮಿನಾ ಶಬಿಲ್‌, ರಾಣೆಬೆನ್ನೂರಿನ ಕೊಟ್ರೇಶ್‌ ಮತ್ತು ರಂಜಿತಾ ಸೇರಿ ಐವರು ಗಾಯಗೊಂಡಿದ್ದರು. ಇವರನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಗಾಯಾಳು ಮಹಿಳೆ ಮಂಜುಳಾ ಮೃತಪಟ್ಟಿದ್ದಾರೆ. ಇದೀಗ ಲಕ್ಷ್ಮಿ ಅವರು ಕೂಡ ಮೃತಪಟ್ಟಿದ್ದಾರೆ.

   ಬಲೂನ್​ಗಳಿಗೆ ಹೀಲಿಯಂ ಗ್ಯಾಸ್ ತುಂಬಿಸುವಾಗ ಏಕಾಏಕಿ ಸಿಲಿಂಡರ್​ ಸ್ಫೋಟಗೊಂಡಿದ್ದರಿಂದ ದುರಂತ ಸಂಭವಿಸಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್​ ಅಧಿಕಾರಿಗಳು ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ.

   ಇನ್ನು ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮೃತ ಬಲೂನ್ ವ್ಯಾಪಾರಿ ಸಲೀಂ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಪ್ರವಾಸಿಗರೊಬ್ಬರ ಹೇಳಿಕೆಯ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

   ಸ್ಫೋಟದಲ್ಲಿ ರಾಣೆಬೆನ್ನೂರು ಮೂಲದ ಕೊಟ್ರೇಶ್ ಬೀರಪ್ಪ ಗಾಯಗೊಂಡಿದ್ದರು. ಅವರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬದೊಂದಿಗೆ ಮೈಸೂರು ಪ್ರವಾಸಕ್ಕೆ ಬಂದಿದ್ದ ಕೊಟ್ರೇಶ್‌, ತಮ್ಮ ಮಕ್ಕಳಿಗೆ ಬಲೂನ್ ಕೊಡಿಸಲು ಬಂದಿದ್ದ ವೇಳೆ, ಬಲೂನ್ ವ್ಯಾಪಾರಿ ಸಲೀಂ ಸೈಕಲ್ ಮೇಲೆ ಸಿಲಿಂಡರ್ ಇಟ್ಟುಕೊಂಡು ಬಲೂನ್‌ಗೆ ಗಾಳಿ ತುಂಬಿಸುತ್ತಿದ್ದರು. ಈ ವೇಳೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿತ್ತು.

Recent Articles

spot_img

Related Stories

Share via
Copy link