ತುಮಕೂರು:
ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಆಗ್ರಹ
ಕೂಡಲೇ ರಾಜ್ಯ ಸರ್ಕಾರ ಬೆಳೆ ನಷ್ಟ ಸಮೀಕ್ಷೆಯನ್ನು ಪೂರ್ಣಗೊಳಿಸಿ, ಆಹಾರ ಧಾನ್ಯ ಬೆಳೆಗಳಿಗೆ ಎಕರೆಗೆ ಕನಿಷ್ಠ 25,000 ರೂ. ಹಾಗೂ ತರಕಾರಿ ಬೆಳೆಗಳಿಗೆ ಎಕರೆಗೆ ಕನಿಷ್ಟ 1,00,000 ರೂ.ನಷ್ಟ ಪರಿಹಾರವನ್ನು ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿಯ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿರುವ ಅವರು, ಕೋಲಾರ–59,000 ಹೆಕ್ಟೇರ್, ಚಿಕ್ಕಬಳ್ಳಾಪುರ–43,002 ಹೆಕ್ಟೇರ್‍ನಲ್ಲಿ ಪ್ರಮುಖ ಬೆಳೆಯಾದ ರಾಗಿಯನ್ನು ಬೆಳೆಯಲಾಗಿದೆ. ಇದರಲ್ಲಿ ಬಹುತೇಕ ಅರ್ಧಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ರಾಗಿ ಬೆಳೆ ನೆಲ ಕಚ್ಚಿ, ಮೊಳಕೆ ಬಂದಿದೆ. ಇದೇ ರೀತಿಯಲ್ಲಿ ತುಮಕೂರು ಜಿಲ್ಲೆಯಲ್ಲೂ 2284 ಹೆಕ್ಟೇರ್ ನಿರಾವರಿ ಪ್ರದೇಶ ಹಾಗು 1.27 ಲಕ್ಚ ಹೆಕ್ಟೇರ್ನಲ್ಲಿ ಅಪಾರ ಬೆಳೆ ನಷ್ಟವಾಗಿದೆ ಎಂದರು.
ನೆಲಗಡಲೆ, ಈರುಳ್ಳಿ, ಭತ್ತ, ರಾಗಿ ಮತ್ತು ರಾಗಿ ಹುಲ್ಲು ಎರಡನ್ನು ಕಳೆದು ಕೊಂಡ ರೈತ, ಮುಂದಿನ ದಿನಗಳಲ್ಲಿ ತನಗೂ ಊಟವಿಲ್ಲ, ಜಾನುವಾರುಗಳಿಗೂ ಮೇವು ಇಲ್ಲದ ಸ್ಥಿತಿಯಿಂದ ನರಳುವಂತಾಗಿದೆ. “ಕೈಗೆ ಬಂದ ತುತ್ತು, ಬಾಯಿಗೆ ಬಾರದೇ” ಹಾಕಿರುವ ಬಂಡವಾಳವನ್ನು ಕಳೆದು ಕೊಂಡು ರೈತರು ಆತಂಕದಲ್ಲಿ ಇದ್ದಾರೆ. ಇದೇ ರೀತಿಯಲ್ಲಿ ವಿಪರೀತ ಬಂಡವಾಳಗಳನ್ನು ಹಾಕಿ ಟಮೋಟ, ಕ್ಯಾರೇಟ್, ಆಲೂಗೆಡ್ಡೆ, ಈರುಳ್ಳಿ ಇತ್ಯಾದಿ ತರಕಾರಿ, ತೋಟಗಾರಿಕೆಯ ಬೆಳೆಗಳನ್ನು ಬೆಳೆದಿರುವ ರೈತರು ಸುಧಾರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾಗುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರ ರಾಗಿ, ಟಮೋಟೊ ಇತ್ಯಾದಿ ಬೆಳೆಗಳನ್ನು ಬೆಳೆಯಲು ರೈತರು ಹೂಡಿಕೆ ಮಾಡಿರುವ ಕನಿಷ್ಠ ಖರ್ಚುಗಳನ್ನಾದರೂ ನಷ್ಟ ಪರಿಹಾರವಾಗಿ ನೀಡಬೇಕೆಂದು ರೈತ ಸಂಘದ ರಾಜ್ಯ ಸಮಿತಿಯು ಆಗ್ರಹಿಸುತ್ತದೆ. ಈ ದೇಸೆಯಲ್ಲಿ ಡಿಸೆಂಬರ್ 2021, ಜನವರಿ 2022 ರಲ್ಲಿ ಪ್ರಬಲ ಚಳುವಳಿಗಳನ್ನು ಇಡೀ ರಾಜ್ಯಾದ್ಯಂತ ಸಂಘಟಿಸಲಾಗುತ್ತದೆ. ದೆಹಲಿ ರೈತ ಚಳುವಳಿಯ ಗೆಲುವಿನ ವಿಶ್ವಾಸದೊಂದಿಗೆ ಈ ಬೇಡಿಕೆಗಳು ಈಡೇರುವವರೆಗೆ ಹೋರಾಟಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕೆಂದು ಕೋರಿದರು.
ಸರ್ಕಾರಗಳ ಈ ರೈತ ವಿರೋಧಿ ನಿಲುವು ಅತ್ಯಂತ ಅಮಾನವೀಯ, ಅನಾಗರಿಕ ಕ್ರಮಗಳಾಗಿವೆ. “ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ” (ಎನ್‍ಡಿಆರ್‍ಎಫ್)ಯ ಅವೈಜ್ಞಾನಿಕ ಮಾನದಂಡಗಳನ್ನು ಸಂಪೂರ್ಣವಾಗಿ ಪರಿಷ್ಕರಿಸಿ, ಕನಿಷ್ಟ ರೈತರು ಬೆಳೆ ಬೆಳೆಯಲು ಮಾಡಿರುವ ಖರ್ಚಾನ್ನಾದರೂ ನೀಡಬೇಕೆಂದು ಆಗ್ರಹಿಸುತ್ತದೆ. ಇಂತಹ ಬದಲಾವಣೆಗಳು ಬರುವವರೆಗೆ “ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ” (ಎನ್‍ಡಿಆರ್‍ಎಫ್)ಯ ಜೊತೆಗೆ ರಾಜ್ಯ ಸರ್ಕಾರ, ಬೆಳೆ ನಷ್ಟಕ್ಕೆ ಸಂಬಂಧಿಸಿ “ಕೃಷಿ ಬೆಲೆ ಆಯೋಗದ” ವರದಿಯನ್ನಾದರೂ ಜಾರಿ ಮಾಡಲು ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡಬೇಕೆಂದು ರೈತ ಸಂಘವು ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.
ತಮ್ಮ ತಮ್ಮ ಬೆಳಗಳ ನಷ್ಟವಾಗಿರುವುದರ ಬಾವಚಿತ್ರ, ವಿಡಿಯೋಗಳನ್ನು ತೆಗೆದು ಜೋಪಾನ ಮಾಡಬೇಕೆಂದು, ಮುಂದಿನ ದಿನಗಳಲ್ಲಿ ಇಲಾಖೆಗಳ ತಪ್ಪು ಸಮೀಕ್ಷೆಗಳನ್ನು ಸರಿಪಡಿಸಲು ಇವು ಸಹಾಯವಾಗುತ್ತೇವೆಂದು ರೈತ ಸಂಘ ರೈತರಲ್ಲಿ ವಿನಂತಿಸಿದರು.
ಜಿಲ್ಲಾ ನಾಯಕರುಗಳಾದ ಸಿ.ಅಜ್ಜಪ್ಪ, ಬಿ. ಉಮೇಶ್, ದೊಡ್ಡ ನಂಜಯ್ಯ , ನರಸಿಂಹಮೂರ್ತಿ, ಕೋದಂಡಪ್ಪ ಮತ್ತಿತರರು ಹಾಜರಿದ್ದರು.
ಸರ್ಕಾರಗಳು ರೈತನ ನೆರವಿಗೆ
ಬರದಿರುವುದು ಖಂಡನೀಯ
ಲಾಕ್‍ಡೌನ್ ಸಮಸ್ಯೆಗಳಿಂದ ನಿಧಾನವಾಗಿ ಹೊರಬಂದು, ಅಪಾರ ಬಂಡವಾಳಗಳನ್ನು ಹೂಡಿಕೆ ಮಾಡಿ ವಿವಿಧ ಬೆಳೆಗಳನ್ನು ಬೆಳೆದಿರುವ ರಾಜ್ಯದ ರೈತನ ಮೇಲೆ ಪ್ರಕೃತಿಯ ವಿಕೋಪದಿಂದ ಉಂಟಾಗಿರುವ ಪರಿಸ್ಥಿತಿ “ಗಾಯದ ಮೇಲೆ ಬರೆ ಎಳೆದಂತಾಗಿದೆ”. ಇಂತ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷವಾದ ನೆರವಿನೊಂದಿಗೆ ರೈತರನ್ನು ರಕ್ಷಿಸಲು ಮುಂದಾಗಬೇಕಾಗಿತ್ತು. ಆದರೆ ಸರ್ಕಾರಗಳು ಇದಕ್ಕೆ ವಿರುದ್ದವಾಗಿ ನಡೆದುಕೊಳ್ಳುವುದು ತೀರಾ ಖಂಡನೀಯ.
ಜಿ.ಸಿ.ಬಯ್ಯಾರೆಡ್ಡಿ
ಹೋರಾಟ ರೂಪಿಸಲು ಜಿಲ್ಲಾ ಮಟ್ಟದ ಸಭೆ
ತುಮಕೂರು ಜಿಲ್ಲೆಯಲ್ಲೆ ಆಗಿರುವ ಅಪಾರವಾದ ಬೆಳೆ ನಷ್ಟ ಪರಿಹಾರ ಮತ್ತು ಇತ್ತೀಚೆಗೆ ಜಿಲ್ಲಾ ಹಾಲು ಒಕ್ಕೂಟ ಹಾಲಿನ ದರ ಇಳಿಕೆ ಮಾಡಿರುವ ಸಮಸ್ಯೆಗಳ ಕುರಿತು ಚರ್ಚಿಸಿ, ವಿಶಾಲವಾದ ಚಳುವಳಿಯನ್ನು ರೂಪಿಸಲು ಇಂದು ರೈತ ಸಂಘದ ಜಿಲ್ಲಾ ಮಟ್ಟದ ಸಭೆಯನ್ನು ಕರೆಯಲಾಗಿದೆ. ಮುಂಬರುವ ದಿನಗಳಲ್ಲಿ ನಡೆಯಲಿರುವ ವಿಶಾಲವಾದ ರೈತ ಚಳುವಳಿಯಲ್ಲಿ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರೈತ ಸಂಘ ಮನವಿ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ