ಇಳಿಕೆಯತ್ತ ಸೊಪ್ಪು-ತರಕಾರಿ ಬೆಲೆಗಳು

ತುಮಕೂರು:

      ಕ್ಯಾರೇಟ್, ಸೇಬು ದುಬಾರಿ | ಟೊಮೆಟೊ, ದ್ರಾಕ್ಷಿ ಅಗ್ಗ

ಕೆಲವೊಂದು ಸೊಪ್ಪು-ತರಕಾರಿ ಬೆಲೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಕಾಯಿಪಲ್ಲೆಗಳ ದರಗಳು ಇಳಿಯುತ್ತಿದ್ದು ಜನರ ಕೈಗೆಟಕುತ್ತಿವೆ. ಕಳೆದ ವರ್ಷ ಬೆಲೆ ಏರಿಕೆಯ ಬರೆ ಹಾಕಿಸಿಕೊಂಡಿದ್ದ ಗ್ರಾಹಕನಿಗೆ ಬೆಲೆ ಇಳಿಕೆಯು ಕೊಂಚ ಸಮಾಧಾನ ತಂದಿದೆ. ಈ ವಾರ ಹಣ್ಣುಗಳ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವೇನೂ ಆಗಿಲ್ಲ. ಫಾರಂ ಕೋಳಿ ಮಾಂಸ ಕೆಜಿಗೆ 5 ರೂ. ಕಡಿಮೆಯಾಗಿದೆ. ಮೊಟ್ಟೆ, ಮೀನಿನ ದರ ಯಥಾಸ್ಥಿತಿ ಮುಂದುವರಿದಿದೆ.

ಇಳಿದ ಸೊಪ್ಪು-ತರಕಾರಿ ಬೆಲೆ :

ಸೊಪ್ಪು-ತರಕಾರಿ ಬೆಲೆಗಳು ಈ ವಾರ. ಕಳೆದ ವಾರ 40 ರೂ. ಇದ್ದ ಈರುಳ್ಳಿ ಬೆಲೆ ಈ ವಾರ 35 ರೂ. ಗೆ ಇಳಿದಿದೆ. ಕಳೆದ ವಾರ 50-60 ರೂ. ಇದ್ದ ಟೊಮೆಟೊ ದರ ಈ ವಾರ 30 ರೂ. ಗೆ ಇಳಿದಿದೆ. ಆಲೂಗಡ್ಡೆ ಕಳೆದ ವಾರದ ದರ 25-30 ರೂ. ಗೆ ಸಿಗುತ್ತಿದೆ. ಮೂಲಂಗಿ-30 ರೂ. ನಿಂದ 20 ರೂ.ಗೆ ಇಳಿದಿವೆ. ಬೀನ್ಸ್-80 ರೂ. ನಿಂದ 40 ರೂ. ಗೆ, ಕ್ಯಾರೇಟ್-80 ರೂ. ನಿಂದ 100 ರೂ. ಗೆ, ಬೀಟ್ರೂಟ್-80 ರೂ. ನಿಂದ 50 ರೂ. ಗೆ ಇಳಿದಿವೆ.

ಮಿಕ್ಕಂತೆ ಪಟ್ಲಿಕಾಯಿ-50 ರೂ., ಹೀರೆಕಾಯಿ-40 ರೂ., ಬೆಂಡೆಕಾಯಿ-60 ರೂ., ಗೋರಿಕಾಯಿ-40 ರೂ. ಹಾಗೂ ನಾಟಿ ಕೊತ್ತಂಬರಿ-60 ರೂ., ಫಾರಮ್ ಕೊತ್ತಂಬರಿ-40 ರೂ., ಸಬ್ಸಿಗೆ-80 ರೂ., ದಂಟು-40 ರೂ., ಪಾಲಕ್-60 ರೂ., ಪುದೀನಾ-40 ರೂ., ಚಕ್ಕೊತ-60 ರೂ., ಮೆಂತ್ಯೆ ಸೊಪ್ಪು-40 ರೂ. ನಂತೆ ನಂತೆ ಮಾರಾಟವಾಗುತ್ತಿವೆ. ಮುಂದಿನ ದಿನಗಳಲ್ಲಿ ಹೊಸ ಮಾಲು ಬರುವುದರಿಂದ ಸೊಪ್ಪು-ತರಕಾರಿ ಬೆಲೆಗಳು ಮತ್ತಷ್ಟೂ ಇಳಿಯಲಿವೆ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ತರಕಾರಿ ಸಗಟು ವರ್ತಕ ವಾಸು.

ದ್ರಾಕ್ಷಿ ಅಗ್ಗ : ಬಾಳೆಹಣ್ಣು ಉಳಿದು ಮಿಕ್ಕೆಲ್ಲಾ ಹಣ್ಣುಗಳು ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ. ಸೇಬು ಮತ್ತಷ್ಟು ದುಬಾರಿಯಾಗಿದ್ದು ಕೆ.ಜಿ. 140-160 ಗೆ ಏರಿದೆ. ದಾಳಿಂಬೆ-160 ರೂ.ನಿಂದ 120 ರೂ.ಗೆ ಇಳಿದಿದೆ. ದ್ರಾಕ್ಷಿ ಸೀಸನ್ ಶುರುವಾಗಿದ್ದು ವಾರದಿಂದ ವಾರಕ್ಕೆ ಬೆಲೆ ಇಳಿಯುತ್ತಿದ್ದು, ಈ ವಾರ ಕೆ.ಜಿ. 100 ರೂ. ನಂತೆ ಮಾರಾಟವಾಗುತ್ತಿದೆ.

ಮಾಲು ಇಲ್ಲದ್ದರಿಂದ ಕಲ್ಲಂಗಡಿ, ಕರಬೂಜ ಬೆಲೆಗಳು ಏರಿಕೆಯಾಗಿವೆ. ಸಂಕ್ರಾಂತಿ ಕಳೆದ ಬಳಿಕ ಬೇಸಿಗೆ ಆರಂಭವಾಗುವುದರಿಂದ ಹಣ್ಣುಗಳಿಗೆ ಬೇಡಿಕೆ ಹೆಚ್ಚಿ ಬೆಲೆಗಳು ಮತ್ತಷ್ಟೂ ಏರಿಕೆ ಆಗುತ್ತವೆ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ಟಿಕೆಪಿ ಫ್ರೂಟ್ಸ್ ಸ್ಟಾಲ್‍ನ ಮಾಲೀಕ ವೆಂಕಟೇಶ್.

ಕೋಳಿ, ಕೊಂಚ ಇಳಿಕೆ : ಕಳೆದ ವಾರ ಹೊಸ ವರ್ಷಾಚರಣೆ ನಡುವೆ ಕೊಂಚ ಏರಿಕೆಯಾಗಿದ್ದ ಕೋಳಿ ಮಾಂಸದ ಬೆಲೆ ತುಸು ಇಳಿದಿದೆ. ಫಾರಂ ಕೋಳಿ ಮಾಂಸದ ಬೆಲೆ ಕೆ.ಜಿ.ಗೆ 120 ರೂ. ನಿಂದ 115 ರೂ. ಗೆ ಇಳಿದಿದೆ. ಬ್ರಾಯ್ಲರ್ ಯಥಾಸ್ಥಿತಿ ಕೆ.ಜಿ.ಗೆ 130 ರೂ. ನಂತೆ ಮಾರಾಟವಾಗುತ್ತಿದೆ. ಮೊಟ್ಟೆ 1 ಡಜನ್ ಗೆ 66 ರಿಂದ 68 ರೂ. ಗೆ 2 ರೂ. ಏರಿದೆ.

ಅಯ್ಯಪ್ಪ ವ್ರತಾಚರಣೆ ಹಾಗೂ ಮುಂದಿನ ವಾರ ಸಂಕ್ರಾಂತಿ ಹಬ್ಬ ಇರುವುದರಿಂದ ಸದ್ಯ ಕೋಳಿ ಬೆಲೆ ಏರಿಕೆ ಆಗುವುದಿಲ್ಲ ಎನ್ನುತ್ತಾರೆ ಹುಳಿಯಾರಿನ ಕೋಳಿ ವರ್ತಕ ಕರವೇ ಶ್ರೀನಿವಾಸ್.

ಇಳಿದ ಕೆಂಪು ಚಿನ್ನ :

ಈ ಹಿಂದೆ ಅಕಾಲಿಕ ಮಳೆಯಿಂದ ಗಿಡದಲ್ಲೆ ಕೊಳೆತು ಬೆಳೆಹಾನಿಯಾಗಿ ಕಳೆದ 3-4 ತಿಂಗಳಿನಿಂದಲೂ ಕೆ.ಜಿ. ಗೆ 80-100 ರೂ. ನಂತೆ ದುಬಾರಿ ದರಕ್ಕೆ ಮಾರಾಟವಾಗುತ್ತಿದ್ದ ಟೊಮೆಟೊ ದರ ಸದ್ಯ ಕೆ.ಜಿ. ಗೆ 30 ರೂ. ಗೆ ಇಳಿದಿದೆ.

ಮುಂದಿನ ದಿನಗಳಲ್ಲಿ ಹೊಸ ಮಾಲು ಬರುವುದರಿಂದ ಬೆಲೆ ಇನ್ನೂ 5-10 ರೂ. ಇಳಿಯಲಿದ್ದು, ವನಿತೆಯರು ಹುಣಸೆಹಣ್ಣಿನ ಡಬ್ಬಕ್ಕೆ ಕೈ ಹಾಕುವುದು ತಪ್ಪಲಿದೆ. ಕೆಲ ಹೊಟೇಲ್‍ಗಳ ಮೆನು ಪಟ್ಟಿಯಲ್ಲಿ ಮಾಯವಾಗಿದ್ದ ಟೊಮೊಟೊ ಬಾತ್ ಮತ್ತೆ ಕಾಣಿಸಿಕೊಳ್ಳುತ್ತಿದೆ. ನಗರ ಪ್ರದೇಶಗಳಲ್ಲಿ ಶತಕ ದರ ದಾಟಿದ್ದ ಟೊಮೆಟೊಹಣ್ಣು ಮಾರುಕಟ್ಟೆ ವಿಶ್ಲೇಷಕರಿಂದ ಕೆಂಪು ಬಂಗಾರ ಎಂಬ ಉಪಮೇಯಕ್ಕೆ ಭಾಜನವಾಗಿತ್ತು.

ಹಣ್ಣುಗಳ ಧಾರಣೆ
(ಬೆಲೆ ಕೆ.ಜಿ ರೂ.)

ಸೇಬು                140-160
ದಾಳಿಂಬೆ             100-120
ಮೊಸಂಬಿ               60-80
ನಾಟಿ ಕಿತ್ತಳೆ          60-80
ಸಪೋಟ               40-60
ಏಲಕ್ಕಿ ಬಾಳೆ        40-50
ಪಚ್ಚ ಬಾಳೆ          20
ಪಪ್ಪಾಯ           20-30
ಕಲ್ಲಂಗಡಿ             30
ಕರಬೂಜ           50-60
ಸೀಬೆ             60-80
ಪೈನಾಪಲ್          50-60
ದ್ರಾಕ್ಷಿ                100

ತರಕಾರಿ (ಬೆಲೆ ಕೆ.ಜಿ ರೂ.)

ಟೊಮೆಟೊ      30
ಈರುಳ್ಳಿ         35
ಆಲೂಗಡ್ಡೆ       25-30
ಬೀನ್ಸ್           40
ಕ್ಯಾರೆಟ್        100
ಬೀಟ್ರೂಟ್       50
ಮೂಲಂಗಿ       20
ಗೆಡ್ಡೆಕೋಸು      30
ನುಗ್ಗೆಕಾಯಿ     300
ಬದನೆಕಾಯಿ     40
ಎಲೆಕೋಸು        60
ಹೂಕೋಸು           30-40
ಹಸಿ ಮೆಣಸಿನಕಾಯಿ  80
ಕ್ಯಾಪ್ಸಿಕಂ        80-100

ಮೊಟ್ಟೆ/ಮಾಂಸ ಬೆಲೆ (ಕೆ.ಜಿಗೆ)
ಬ್ರಾಯ್ಲರ್    130
ಫಾರಂ         115
ನಾಟಿ ಕೋಳಿ ಮಾಂಸ       250-300
ಮಟನ್         600-650
ಮೀನು (ಸಾಮಾನ್ಯ)    120-150
ಮೊಟ್ಟೆ
(1 ಡಜನ್)     68

ಕೊಬ್ಬರಿ ಧಾರಣೆ
(ತಿಪಟೂರು)
ಪ್ರತಿ ಕ್ವಿಂಟಾಲ್
ಕನಿಷ್ಠ        14,500
ಗರಿಷ್ಠ     17,800
ಮಾದರಿ        17,300
ಒಟ್ಟು ಆವಕ– 1933.71 ಕ್ವಿಂಟಾಲ್
(4497 ಚೀಲ)

          -ಚಿದಾನಂದ್ ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link