ನವದೆಹಲಿ:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು ಮುಸುಕಿದ ವಾತಾವರಣ ಮುಂದುವರಿದಿದೆ. ಮಂಜಿನಿಂದಾಗಿ ವಿಮಾನ ಹಾಗೂ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನ 6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಗಾಳಿಯ ಗುಣಮಟ್ಟದಲ್ಲೂ ಏರುಪೇರಾಗಿದೆ ದಟ್ಟ ಮಂಜಿನಿಂದಾಗಿ ಶುಕ್ರವಾರ ಮುಂಜಾನೆ ದೆಹಲಿ-ಲಖನೌ ಹೆದ್ದಾರಿಯಲ್ಲಿ ಬಹದ್ದೂರ್‌ಗಢ್ ನಿಲ್ದಾಣದ ಬಳಿ ಹಲವಾರು ವಾಹನಗಳು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ದಟ್ಟವಾದ ಮಂಜು ಆವರಿಸಿದ್ದರಿಂದ ಸುಮಾರು 150 ಕ್ಕೂ ಹೆಚ್ಚು ವಿಮಾನಗಳು ಮತ್ತು ಸುಮಾರು 26 ರೈಲುಗಳು ವಿಳಂಬವಾಗಿದೆ. ವಿಮಾನ ವಿಳಂಬದ ಬಗ್ಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಹಿತಿ ನೀಡಿದೆ.ಭಾರತೀಯ ಹವಾಮಾನ ಇಲಾಖೆ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಮಂಜಿನ ದಟ್ಟತೆ ಹೆಚ್ಚಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಹೆಚ್ಚುತ್ತಿರುವ ಚಳಿಯಿಂದ ನಿರಾಶ್ರಿತರ ರಕ್ಷಣೆಗಾಗಿ ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿ ನಿರಾಶ್ರಿತರಿಗೆ ಆಶ್ರಯ ನೀಡಲು 235 ಪಗೋಡಾ ಟೆಂಟ್‌ಗಳನ್ನು ಸ್ಥಾಪಿಸಿದೆ. ಏಮ್ಸ್, ಲೋಧಿ ರಸ್ತೆ ಮತ್ತು ನಿಜಾಮುದ್ದೀನ್ ಫ್ಲೈಓವರ್ ಸೇರಿದಂತೆ ರಾಷ್ಟ್ರ ರಾಜಧಾನಿಯ ಹಲವಾರು ಪ್ರದೇಶಗಳಲ್ಲಿ ರಾತ್ರಿ ಆಶ್ರಯಗಳನ್ನು ಸ್ಥಾಪಿಸಲಾಗಿದೆ. ಇದೇ ರೀತಿಯ ವಾಯುಗುಣ ಮುಂದುವರಿದರೆ ವಾಯು ಗುಣಮಟ್ಟವನ್ನು ಪರಿಸ್ಥಿತಿಯನ್ನು ಅವಲೋಕಿಸಿ, 3ನೇ ಹಂತದ ಜಿಆರ್ಎಪಿ ನೀತಿಯನ್ನು ಸರ್ಕಾರ ಮರು ಜಾರಿ ಮಾಡಿದೆ.