ಸಸ್ಪೆನ್ಸ್, ಥ್ರಿಲ್ಲರ್ ನ ನೈಜ ಘಟನೆಯ ಚಿತ್ರ ‘ದೇವಕಿ’

      ತನ್ನ ವಿಭಿನ್ನ ಟೀಸರ್ ಹಾಗೂ ಟ್ರೇಲರ್ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ದೇವಕಿ’ ಸಿನಿಮಾ ಇಂದು (ಜುಲೈ 5) ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

       ತೆಲುಗು, ಕನ್ನಡ ಭಾಷೆಯಲ್ಲಿ ತಯಾರಾದ ಈ ಚಿತ್ರಕ್ಕೆ ‘ಮಮ್ಮಿ’ ಖ್ಯಾತಿಯ ಲೋಹಿತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮೊದಲ ಚಿತ್ರದಲ್ಲೇ ಪ್ರೇಕ್ಷಕರ ಮನಸು ಗೆದ್ದಿದ್ದ ಈ ಯುವ ಪ್ರತಿಭೆ ಈಗ ಮತ್ತೆ ಸಸ್ಪೆನ್ಸ್, ಥ್ರಿಲ್ಲರ್‍ನ ‘ದೇವಕಿ’ಯನ್ನು ಅಭಿಮಾನಿಗಳಿಗೆ ನೀಡುತ್ತಿದ್ದಾರೆ.

     ಮಮ್ಮಿ ಚಿತ್ರದಲ್ಲಿ ಮುಖ್ಯಪಾತ್ರ ನಿರ್ವಯಿಸಿದ್ದ ಪ್ರಿಯಾಂಕ ಉಪೇಂದ್ರ ಈ ಚಿತ್ರದಲ್ಲೂ ಹೈಲೈಟ್. ಜತೆಗೆ ಪ್ರಿಯಂಕಾ ಹಾಗೂ ಉಪೇಂದ್ರ ಅವರ ಮುದ್ದಿನ ಮಗಳು ಐಶ್ವರ್ಯ ಕೂಡ ಮೊದಲಬಾರಿ ಬಣ್ಣ ಹಚ್ಚಿದ್ದಾರೆ. ಪ್ರಿಯಾಂಕ ಹಾಗೂ ಐಶ್ವರ್ಯ ಈ ಚಿತ್ರದಲ್ಲಿ ತಾಯಿ-ಮಗಳ ಪಾತ್ರ ನಿರ್ವಯಿಸಿದ್ದಾರೆ. ದೇವಕಿಗೆ ಪ್ರಾರಂಭದಲ್ಲಿ ‘ಹೌರಾಬ್ರಿಡ್ಜ್’ ಎಂದು ಹೆಸರಿಡಲಾಗಿತ್ತು. ನಂತರ ಕಥೆಯಲ್ಲಿ ಪ್ರಿಯಂಕಾ ಉಪೇಂದ್ರ ಪಾತ್ರದ ಹೆಸರು ದೇವಕಿ ಆಗಿದಿದ್ದರಿಂದ ಇದೇ ಹೆಸರು ಸಿನಿಮಾದ ಶೀರ್ಷಿಕೆ ಆದ್ರೆ ಸೂಕ್ತವೆಂದು ತಿರ್ಮಾನಕ್ಕೆ ಬರಲಾಗಿದೆಯಂತೆ.

      ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, 2016 ಕೊಲ್ಕತ್ತಾದಲ್ಲಿ ನಡೆದ ಹೆಣ್ಣು ಮಕ್ಕಳ ಅಪಹರಣದ ಕಥೆಯನ್ನು ಒಳಗೊಂಡಿದೆ. ಇದು ಎಮೋಷನಲ್ ಥ್ರಿಲ್ಲರ್ ಚಿತ್ರವಾಗಿದ್ದು, ಸಂಪೂರ್ಣ ಸಿನಿಮಾವನ್ನು ಕಲ್ಕತ್ತಾದಲ್ಲೇ ಚಿತ್ರೀಕರಣ ಮಾಡಲಾಗಿದೆ. ಕಥೆ ನಡೆದ ರಿಯಲ್ ಸ್ಥಳಗಳಲ್ಲೇ ಚಿತ್ರೀಕರಣ ಮಾಡಿರುವುದು ಈ ಚಿತ್ರದ ವಿಶೇಷ. ಅಲ್ಲದೇ ಸಂಪೂರ್ಣ ಕಲ್ಕತ್ತಾದಲ್ಲಿ ಚಿತ್ರೀಕರಣ ಮಾಡಿರುವ ಮೊದಲ ಕನ್ನಡ ಸಿನಿಮಾ ಇದಾಗಿದೆ. ಶೇಕಡ 70% ಭಾಗ ರಾತ್ರಿ ಚಿತ್ರೀಕರಣ ಮಾಡಲಾಗಿದೆ.

      ಎಫ್‍ಎಂದಲ್ಲಿ ಜೂನಿಯರ್ ಆರ್‍ಜೆ ಆಗುವುದಕ್ಕಾಗಿ ಅಡಿಷನ್ ನೀಡಲು ಹೋದ ಮಗಳು ಕಾಣೆಯಾಗುತ್ತಾಳೆ. ಮುಂದೆ ತಾಯಿ ತನ್ನ ಮಗಳನ್ನು ಹೇಗೆ ಹುಡುಕುತ್ತಾಳೆ, ಅಮ್ಮ ಮಗಳ ತೊಳಲಾಟ ಹೇಗಿರುತ್ತದೆ ಎಂಬುದು ಈ ಸಿನಿಮಾ ಕಥೆಯ ಒಂದು ಏಳೆಯ ಸಾರಾಂಶವಾಗಿದೆ. ಇದರಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ತಾಯಿ ಮಗಳ ಸೆಂಟಿಮೆಂಟ್ ಸಹ ಹೈಲೈಟ್. ಇನ್ನು ಚಿತ್ರದ ಮೂಲಕ ನಿರ್ದೇಶಕ ಲೋಹಿತ್ ವಿಶೇಷವಾದ ಕಥೆಯನ್ನು ಅಭಿಮಾನಿಗಳಿಗೆ ಹೇಳ ಹೊರಟಿದ್ದು, ಪೂರ್ತಿ ಚಿತ್ರವನ್ನು ಲೈವ್ ಲೊಕೇಷನ್‍ನಲ್ಲಿ ಚಿತ್ರೀಕರಣ ಮಾಡಿದ್ದಾರೆ.

      ಅಂದಂಗೆ ‘ದೇವಕಿ’ಯನ್ನು ಆರ್.ಸಿ.ಜಿ ಸಿನಿಮಾಸ್ ಲಾಂಛನದಲ್ಲಿ ರವೀಶ್.ಆರ್.ಸಿ ಮತ್ತು ಅಕ್ಷಯ್ ಸಿ.ಎಸ್ ಅವರುಗಳು ನಿರ್ಮಾಣ ಮಾಡಿದ್ದಾರೆ. ಇವರಿಗಿದು ಮೊದಲ ಚಿತ್ರವಾದರೂ ಎಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳದೆ ನಿರ್ದೇಶಕರು ಕೇಳಿದ್ದನ್ನು ಕೊಟ್ಟು ಚಿತ್ರ ಚನ್ನಾಗಿ ಬರುವಂತೆ ಮಾಡಿದ್ದಾರೆ. ಅಲ್ಲಿಗೆ ಗಾಂಧಿನಗರಕ್ಕೆ ಹೊಸ ಪ್ರತಿಭೆಗಳಿಗೆ ಬೆನ್ನು ತಟ್ಟುವ ನಿರ್ಮಾಣ ಸಂಸ್ಥೆಯೊಂದು ಹುಟ್ಟಿಕೊಂಡಂತಾಗಿದೆ.

      ಚಿತ್ರದಲ್ಲಿ ಸಂಗೀತ, ಛಾಯಾಗ್ರಹಣ ಹೈಲೈಟ್ ಆಗಿದ್ದು, ಅದನ್ನು ನೊಬಿನ್ ಪಾಲ್ ಹಾಗೂ ಹೆಚ್.ಸಿ.ವೇಣು ಅಚ್ಚುಕಟ್ಟಾಗಿ ನಿರ್ವಯಿಸಿದ್ದಾರೆ. ಉಳಿದಂತೆ ರವಿಚಂದ್ರನ್ ಸಿ ಸಂಕಲನ. ಶಿವಕುಮಾರ್ ಕಲಾ ನಿರ್ದೇಶನ, ಡಾ||ರವಿವರ್ಮ ಸಾಹಸ ನಿರ್ದೇಶನ ಹಾಗೂ ಗುರುಪ್ರಸಾದ್ ಕಶ್ಯಪ್ ಸಂಭಾಷಣೆ ಈ ಚಿತ್ರಕ್ಕಿದೆ. ತಾರಾಗಣದಲ್ಲಿ ಪ್ರಿಯಾಂಕ ಉಪೇಂದ್ರ, ಐಶ್ವರ್ಯ ಉಪೇಂದ್ರ, ಕಿಶೋರ್, ಸಂಜೀವ್ ಜೈಸ್ವಾಲ್, ಸಂದೀಪ್ ಸೇರಿದಂತೆ ಬಂಗಾಲಿ ಥಿಯೇಟರ್ ಕಲಾವಿದರು ಉಳಿದ ಪಾತ್ರಗಳಲ್ಲಿ ಇದ್ದಾರೆ. ಚಿತ್ರಕ್ಕೆ ಹಿನ್ನಲೆ ಧ್ವನಿ ನೀಡಿದ್ದಾರೆ ಉಪೇಂದ್ರ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ