ಮಂಡ್ಯ,
ನೆಂಟಸ್ತನ ಬೆಳೆಸಿರುವ ಜೆಡಿಎಸ್, ಬಿಜೆಪಿ ನಾಯಕರು ಒಂದು ದಿನವಾದರೂ ನಿಮ್ಮ ಪರವಾಗಿ ಕೇಂದ್ರ ಸರ್ಕಾರದ ಮುಂದೆ ಧ್ವನಿ ಎತ್ತಿದ್ದಾರಾ? ದೇವೇಗೌಡರು ಈಗ ಕಣ್ಣೀರು ಹಾಕುತ್ತಿದ್ದಾರೆ. ದೇವೇಗೌಡರ ಕಣ್ಣೀರು ಅವರ ಕುಟುಂಬಕ್ಕೆ ಸೀಮಿತವಾಯಿತೇ ಹೊರತು ಬಡ ಜನರಪರವಾಗಿ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.ಈ ಕುರಿತು ಮಂಡ್ಯದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಜನರು ಈಗ ಜಾಗೃತರಾಗಬೇಕು. ಉಳಿ ಪೆಟ್ಟು ಬೀಳದೆ ಯಾವ ಕಲ್ಲು ಶಿಲೆ ಆಗುವುದಿಲ್ಲ. ನೇಗಿಲು ಹಾಕದೆ ಯಾವ ಭೂಮಿಯಲ್ಲೂ ಬೆಳೆ ಬೆಳೆಯಲು ಆಗುವುದಿಲ್ಲ. ನಾವು ನೀವು ಶ್ರಮ ಪಟ್ಟಾಗ ಮಾತ್ರ ನಾವು ಅಭಿವೃದ್ಧಿ ಕಾಣಲು ಸಾಧ್ಯ ಎಂದು ಹೇಳಿದರು.
ನಮ್ಮ ಈ ಗ್ಯಾರಂಟಿ ಯೋಜನೆಗಳು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ರಕ್ಷಣೆಗೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಮಕ್ಕಳ ಶಾಲಾ ಶುಲ್ಕ, ಎಲ್ಲಾ ಪದಾರ್ಥ ಬೆಲೆ ಏರಿಕೆಯಾಗಿದೆ. ನಮ್ಮ ಯೋಜನೆಗಳಿಂದ ಬಡ ಕುಟುಂಬಕ್ಕೆ ವಾರ್ಷಿಕ 50-60 ಸಾವಿರ ಉಳಿತಾಯ ಆಗುತ್ತಿದೆ. ಈ ಯೋಜನೆಗಳಿಗೆ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ 52 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದಾರೆ.ನಿಮ್ಮ ಋಣ ತೀರಿಸಿದ ತೃಪ್ತಿ ನಮಗಿದೆ. ಮಂಡ್ಯ ಕಾರ್ಖಾನೆ, ನದಿ, ಕಾಲುವೆಗಳನ್ನು ಹೊಸ ಮಾದರಿಯಾಗಿ ಮಾಡಿ ನಿಮ್ಮ ಜೀವನದಲ್ಲಿ ಬದಲಾವಣೆ ತರಲಾಗುವುದು. ಅಂಬರೀಶ್ ಅವರು ನಮ್ಮ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಅವರ ಹೆಸರಲ್ಲಿ ರಸ್ತೆ ಮಾಡಲು ನಮ್ಮ ನಾಯಕರು ತೀರ್ಮಾನಿಸಿದ್ದಾರೆ. ಅಂಬರೀಶ್ ಅವರ ಸ್ನೇಹಿತರಾದ ಸ್ಟಾರ್ ಚಂದ್ರು ಅವರನ್ನು ಲೋಕ ಸಭೆ ಅಭ್ಯರ್ಥಿಯಾಗಿ ಮಾಡಿದ್ದೇವೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಚಂದ್ರು ಅವರು ಗೆಲ್ಲುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರ ಇತ್ತು. ಆದರೆ ನಾವು ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಕಾವೇರಿ ಭಾಗದಲ್ಲಿ ಕೆರೆ ತುಂಬಿಸಲು ಕಾಲುವೆ ಅಭಿವೃದ್ಧಿಗೆ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇವೆ. ಕೆಆರ್ ಎಸ್ ಪ್ರವಾಸಿ ತಾಣ ಮಾಡಲು ಟೆಂಡರ್ ಕರೆಯಲಾಗಿದೆ. ನಾವು ಮೇಕೆದಾಟು ಯೋಜನೆ ಆಗ್ರಹಿಸಿ ಹೋರಾಟ ಮಾಡಿದ್ದೆ ನಿಮಗಾಗಿ. ಇದು ಕೇವಲ ಬೆಂಗಳೂರಿಗೆ ಮಾತ್ರ ಪ್ರಯೋಜನವಲ್ಲ. ಅಲ್ಲಿ 64 ಟಿಎಂಸಿ ನೀರು ಇದ್ದರೆ, ಸಂಕಷ್ಟದ ಸಮಯದಲ್ಲಿ ಅಲ್ಲಿಂದ ತಮಿಳುನಾಡಿಗೆ ನೀರು ಬಿಟ್ಟು ಕೆಆರ್ ಎಸ್, ಕಬಿನಿ, ಹಾರಂಗಿಯ ನೀರನ್ನು ಈ ಭಾಗದ ಜನರ ಬಳಕೆಗೆ ನೀಡಬಹುದು.ನಾವು ತಮಿಳುನಾಡಿಗೆ ಬಗ್ಗಲಿಲ್ಲ. ನಮ್ಮ ರೈತರು ಬದುಕಿದ ನಂತರ ನಿಮಗೆ ನೀರು ಬಿಡುತ್ತೇವೆ ಎಂದು, ನಿಮ್ಮ ಬೆಳೆಗೆ ನೀರು ಹರಿಸಿದ ನಂತರ ತಮಿಳುನಾಡಿಗೆ ನೀರು ಬಿಟ್ಟೆವು. ನಾವು ನಿಮ್ಮ ಬೆಳೆಯನ್ನು ರಕ್ಷಣೆ ಮಾಡಿದ್ದೇವೆಯೇ ಇಲ್ಲವೇ ಎಂಬುದನ್ನು ನಿಮ್ಮ ಆತ್ಮಸಾಕ್ಷಿಯಿಂದ ಹೇಳಿ. ಕಷ್ಟ ಕಾಲದಲ್ಲೂ ನಿಮ್ಮ ಬೆಳೆ ಉಳಿಸಿದ್ದೇವೆ. ದೇವರು ವರ ಮತ್ತು ಶಾಪ ಕೊಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ನೀವು ನಮಗೆ ಕೊಟ್ಟ ಅವಕಾಶದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಮೊದಲ ಕ್ಯಾಬಿನೆಟ್ ನಲ್ಲೆ ಈ ಯೋಜನೆಗಳಿಗೆ ನಮ್ಮ ಸರ್ಕಾರ ಅನುಮೋದನೆ ನೀಡಿತು. ಆಮೂಲಕ ದೇಶದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟು ಮಾದರಿಯಾಗಿದ್ದೇವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ