ಧರ್ಮಸ್ಥಳ:
ಧರ್ಮಸ್ಥಳದಲ್ಲಿ ಕಳೆದ 10 ವರ್ಷಗಳ ಹಿಂದೆ ನೂರಾರು ಶವಗಳನ್ನು ಹೂಳಿದ್ದೇನೆ ಎಂದು ತಿಳಿಸಿರುವ ಅನಾಮಿಕ ವ್ಯಕ್ತಿ, ಸೋಮವಾರ ನೇತ್ರಾವತಿ ನದಿಯ ಸ್ನಾನಘಟ್ಟದ ಸಮೀಪದ ಅರಣ್ಯ ಪ್ರದೇಶದಲ್ಲಿ ಶವಗಳನ್ನು ಹೂತಿರುವ ಸ್ಥಳಗಳನ್ನು ಗುರುತಿಸಿ ತೋರಿಸಿದ್ದಾನೆ. ಈತ ಹಲವು ಜಾಗಗನ್ನು ತೋರಿಸಿದ್ದಾನೆ ಎನ್ನಲಾಗಿದ್ದು, ಅಲ್ಲಿ ಇಂದು ಅಗೆಯುವ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಇದರೊಂದಿಗೆ ಎಸ್‌ಐಟಿ ತನಿಖೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಧರ್ಮಸ್ಥಳದ ಅರಣ್ಯದಲ್ಲಿ ಯಾವುದೇ ಕಾನೂನು ಪ್ರಕ್ರಿಯೆ ಮಾಡದೇ ನೆಲದಲ್ಲಿ ಹೂಳಲಾಗಿದೆ ಎಂಬ ಸಂಚಲನಕಾರಿ ಆರೋಪದ ಮೇಲೆ ರಾಜ್ಯ ಸರ್ಕಾರ ನೇಮಕ ಮಾಡಿರುವ ಎಸ್ಐಟಿ (SIT) ನಡೆಸುತ್ತಿರುವ ತನಿಖೆಗೆ ತಿರುವು ಸಿಕ್ಕಿದೆ. ಧರ್ಮಸ್ಥಳದ ನೇತ್ರಾವತಿ ನದಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಈಗಾಗಲೇ ತಾನು ತಲೆಬುರುಡೆಯನ್ನು ತಂದ ಸ್ಥಳ ಮತ್ತು ಶವ ಹೂಳಲಾಗಿದ್ದ ಸ್ಥಳದಲ್ಲಿ ಇನ್ನಷ್ಟು ಮೂಳೆಗಳು ಇವೆ ಎಂಬುದನ್ನು ಕೂಡ ಎಸ್‌ಐಟಿ ತಂಡಕ್ಕೆ ತೋರಿಸಿದ್ದಾನೆ. ಕೇವಲ ಶವ ಹೂತಿದ್ದ ಜಾಗವಷ್ಟೇ ಅಲ್ಲದೆ, ಅಲ್ಲಿನ ಸಮಾಧಿಯ ರೂಪದಲ್ಲಿದ್ದ ಕೆಲವು ಸ್ಥಳಗಳನ್ನೂ ನಿರ್ದಿಷ್ಟವಾಗಿ ಗುರುತಿಸಿದ್ದಾನೆ. ವ್ಯಕ್ತಿ ಸ್ಥಳ ತೋರಿಸಿದ ಆಧಾರದ ಮೇಲೆ ಅರಣ್ಯದ ಒಳಭಾಗದಲ್ಲಿ ಸಮಾಧಿಗಳ ಮೇಲೆ ಮಾರ್ಕಿಂಗ್ ಪ್ರಕ್ರಿಯೆ ಮಾಡಲಾಗಿದೆ.
ದೂರುದಾರನ ಮಾಹಿತಿ ಆಧಾರದಲ್ಲಿ ಸ್ಥಳ ಗುರುತಿಸುವ ಆರಂಭಿಕ ಪ್ರಕ್ರಿಯೆಯನ್ನು ನಿನ್ನೆ ಮಾಡಲಾಗಿದೆ. ಅಲ್ಲಿ ಕಾವಲಿಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಇಂದು ಅಗೆಯುವ ಪ್ರಕ್ರಿಯೆ ನಡೆಯಬಹುದು ಎಂದು ತಿಳಿದುಬಂದಿದೆ.
ಅರಣ್ಯ ಹಾಗೂ ಕಂದಾಯ ಇಲಾಖೆ, ಫಾರೆನ್ಸಿಕ್ ವಿಜ್ಞಾನ ತಂಡ , ಅಸ್ಥಿಪಂಜರ ತಜ್ಞ , ಮಾನವಶಾಸ್ತ್ರಜ್ಞ ಹಾಗೂ ಮೆಡಿಕೋ-ಲೀಗಲ್ ತಜ್ಞರು ಈ ಸಂದರ್ಭದಲ್ಲಿ ಹಾಜರಿದ್ದರು. ಸ್ಥಳದ ಮಣ್ಣಿನ ರಚನೆ, ಪರಿಸರದ ಸ್ಥಿತಿ, ಮತ್ತು ಸ್ಥಳದ ಭೌಗೋಳಿಕ ಲಕ್ಷಣಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಡಿಜಿಟಲ್ ದಾಖಲೆಗಾಗಿ ಫೋಟೋಗ್ರಫಿ ಹಾಗೂ ವಿಡಿಯೋ ದಾಖಲೆ ಪ್ರಕ್ರಿಯೆ ನಡೆಸಲಾಯಿತು.
ಅನಾಮಿಕ ವ್ಯಕ್ತಿಯೊಂದಿಗೆ ಎಸ್ಐಟಿ ತನಿಖಾ ಅಧಿಕಾರಿ ದಯಾಮಾ ನೇತೃತ್ವದಲ್ಲಿ ಸುಮಾರು 45 ನಿಮಿಷಗಳ ಕಾಲ ಕಾಡಿನೊಳಗೆ ಇರುವ ಶವ ಹೂತಿರುವ ಸಾಧ್ಯತೆಯಿರುವ ಸ್ಥಳಗಳನ್ನು ಮಾರ್ಕ್ ಮಾಡಲಾಯಿತು. ಅಲ್ಲಿ ಗುರುತಿಸಿದ ಸ್ಥಳಗಳಲ್ಲಿ ಮುಂದಿನ ಹಂತದಲ್ಲಿ ಶೋಧಕಾರ್ಯ ಆರಂಭವಾಗಲಿದೆ. ಅಲ್ಲಿ ವೈಜ್ಞಾನಿಕವಾಗಿ ಶವಗಳನ್ನು ಹೊರತೆಗೆಯುವ ಮತ್ತು ಶವಗಳ ಕುರುಹುಗಳು ಲಭ್ಯ ಇವೆಯೇ ಎಂಬುದನ್ನು ಪತ್ತೆ ಮಾಡುವುದಕ್ಕೆ ಮುಂದಾಗಲಿದ್ದಾರೆ
ತಾತ್ಕಾಲಿಕವಾಗಿ ಗುರುತಿಸಿದ ಪ್ರದೇಶಗಳ ಸುತ್ತ ಎಚ್ಚರಿಕೆಯೊಂದಿಗೆ ಟೇಪ್ ಅಳವಡಿಸಿ ಶೋಧನೆಗೆ ತಯಾರಿ ನಡೆಸಲಾಗುತ್ತಿದೆ. ಇದರ ನಂತರ ಮಣ್ಣಿನ ಆಳ ಪರೀಕ್ಷೆ, ಶವಗಳ ಶೋಧನಾ ಪೂರ್ವ ತಯಾರಿ ಮುಂದಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ವ್ಯಕ್ತಿ ಯಾರು, ಇಷ್ಟು ದಿನಗಳ ನಂತರ ಮುಂದೆ ಬಂದದ್ದೇಕೆ ಎಂಬ ವಿಚಾರವನ್ನೂ ಎಸ್‌ಐಟಿ ತನಿಖೆಗೆ ಎತ್ತಿಕೊಳ್ಳಲಿದೆ ಎನ್ನಲಾಗಿದೆ.
