ʼಡಿಜಿಟಲ್‌ ಕಾಂಡೋಮ್‌ʼ ಬಿಡುಗಡೆ, ಇದರ ವಿಶೇಷತೆ ಏನ್‌ ಗೊತ್ತಾ?

ಜರ್ಮನಿ :

   ಪ್ರಸ್ತುತ ಈ ಡಿಜಿಟಲ್‌ ಯುಗದಲ್ಲಿ ಎಲ್ಲವೂ ಡಿಜಿಟಲೀಕರಣವಾಗಿದೆ. ಇದೀಗ ಡಿಜಿಟಲ್‌ ಕಾಂಡೋಮ್‌ ಸಹ ಬಿಡುಗಡೆಯಾಗಿದೆ. ವಿಚಿತ್ರವಾದರೂ ಇದು ಸತ್ಯ. ಕೆಲವೊಂದು ಬಾರಿ ಕೆಲವರು ತಮ್ಮ ಸಂಗಾತಿಯೊಂದಿಗೆ ಕಳೆಯುವ ಖಾಸಗಿ ಕ್ಷಣಗಳನ್ನು ಅನುಮತಿಯಿಲ್ಲದೆ ವಿಡಿಯೋ ಮಾಡಿ ಅಥವಾ ಫೋಟೋ ಕ್ಲಿಕ್ಕಿಸಿ ಯಾವುದೋ ಸಂದರ್ಭದಲ್ಲಿ ಆ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುತ್ತಾರೆ. ಇಂತಹ ದುರುದ್ದೇಶಗಳನ್ನು ತಪ್ಪಿಸುವ ಉದ್ದೇಶದಿಂದ ಜರ್ಮನ್‌ ಮೂಲದ ಕಂಪೆನಿಯೊಂದು ಡಿಜಿಟಲ್‌ ಕಾಂಡೋಮ್‌ ಅನ್ನು ಬಿಡುಗಡೆ ಮಾಡಿದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

   ಇದು ಸಾಮಾನ್ಯ ಕಾಂಡೋಮ್‌ ಅಲ್ಲ. ಬದಲಿಗೆ ಇದೊಂದು ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್‌‌ ಹೆಸರು “ಕ್ಯಾಮ್ಡೋಮ್‌”. ಇದು ನೀವು ನಿಮ್ಮ ಸಂಗಾತಿಯೊಂದಿಗೆ ಖಾಸಗಿ ಸಮಯವನ್ನು ಕಳೆಯುವಾಗ ನಿಮ್ಮ ಫೋನ್‌ ಅನ್ನು ರಹಸ್ಯ ಮೋಡ್‌ನಲ್ಲಿ ಇರಿಸಲು ಸಹಾಯ ಮಾಡುತ್ತದೆ. ಅಂದರೆ ಈ ಸಂದರ್ಭದಲ್ಲಿ ನಿಮ್ಮ ಅನುಮತಿಯಿಲ್ಲದೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಕ್ಯಾಮೆರಾ ಅಥವಾ ಮೈಕ್ರೋಫೋನ್‌ ರೆಕಾರ್ಡಿಂಗ್‌ ಮಾಡಲು ಆಗುವುದಿಲ್ಲ. ಈ ಮೂಲಕ ಸಂಗಾತಿ ಜೊತೆ ಕಳೆಯುವ ಖಾಸಗಿ ಕ್ಷಣದ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡಲಿದೆ. ಈ ವಿಶಿಷ್ಟ ಕಾನ್ಸೆಪ್ಟ್‌ ಅನ್ನು ಜರ್ಮನಿಯ ಸೆಕ್ಶುವಲ್‌ ಹೆಲ್ತ್‌ ಕಂಪೆನಿಯಾದ “ಬಿಲ್ಲಿ ಬಾಯ್”‌ ಕಂಪೆನಿ ಇನ್ನೋಸಿಯನ್‌ ಬರ್ಲಿನ್ ಸಂಸ್ಥೆಯ ಸಹಯೋಗದೊಂದಿಗೆ “CAMDOM” ಆಪ್ಲಿಕೇಶನ್‌ ಅನ್ನು ಬಿಡುಗಡೆಗೊಳಿಸಿದೆ.

   ಈ ಅಪ್ಲಿಕೇಶನ್‌ ಅನ್ನು ಬಳಸಲು ತುಂಬಾ ಸುಲಭ ಮತ್ತು ಇದು ಜನರ ಗೌಪ್ಯತೆಯನ್ನು ಕಾಪಾಡುತ್ತದೆ ಎಂದು ಬಿಲ್ಲಿ ಬಾಯ್‌ ಕಂಪೆನಿ ಹೇಳಿದೆ. ಇದನ್ನು ಬಳಸಲು ಮೊದಲು ಬಳಕೆದಾರರು ಅಪ್ಲಿಕೇಶನ್‌ ಅನ್ನು ತೆರೆದು ನಂತರ ಅದರಲ್ಲಿ ವರ್ಚುವಲ್‌ ಬಟನ್‌ ಅನ್ನು ಸ್ವೈಪ್‌ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಫೋನಿನ ಮೈಕ್ರೋಫೋನ್‌ ಮತ್ತು ಕ್ಯಾಮೆರಾ ಆಫ್‌ ಆಗುತ್ತದೆ. ಒಂದು ವೇಳೆ ನಿಮ್ಮ ಸಂಗಾತಿ ಏನಾದರೂ ಕ್ಯಾಮೆರಾ ಆನ್‌ ಮಾಡಲು ಪ್ರಯತ್ನಿಸಿದರೆ ಈ ಅಪ್ಲಿಕೇಷನ್‌ ಎಚ್ಚರಿಕೆಯನ್ನು ಕಳುಹಿಸಲು ಅಲಾರಾಂ ಅನ್ನು ಧ್ವನಿಸುತ್ತದೆ.

   ಅಷ್ಟೇ ಅಲ್ಲದೆ ಈ ಆಪ್‌ ತನ್ನ ಬ್ಲೂಟೂತ್‌ ವ್ಯಾಪ್ತಿಯಲ್ಲಿ ಯಾವುದಾದರೂ ಕ್ಯಾಮೆರಾ ಆನ್‌ ಆಗಿದ್ದರೆ ಆ ಬಗ್ಗೆಯೂ ಎಚ್ಚರಿಕೆಯನ್ನು ನೀಡುತ್ತದೆ. ಈ ಅಪ್ಲಿಕೇಶನ್‌ ಅನ್ನು 30 ಕ್ಕೂ ಹೆಚ್ಚು ದೇಶಗಳಲ್ಲಿ ಬಳಸಲಾಗುತ್ತಿದೆ ಎಂದು ಬಿಲ್ಲಿ ಬಾಯ್‌ ಕಂಪೆನಿ ಹೇಳಿದೆ. ಈ ಅಪ್ಲಿಕೇಶನ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಐಒಎಸ್‌ ಸಾಧನಗಳಲ್ಲೂ ಲಭ್ಯವಾಗಲಿದೆ.ಈ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವ್ಯಕ್ತಿಯ ಖಾಸಗಿ ಕ್ಷಣದ ಗೌಪ್ಯತೆಯನ್ನು ಭದ್ರಪಡಿಸುವಲ್ಲಿ ಈ ಅಪ್ಲಿಕೇಶನ್‌ ಸಹಾಯವಾಗಲಿದೆ.

Recent Articles

spot_img

Related Stories

Share via
Copy link