ಆಟೋ, ಕ್ಯಾಬ್ ಚಾಲಕರಿಗೆ ವಿಶೇಷ ಆರೋಗ್ಯ ತಪಾಸಣೆ : ದಿನೇಶ್‌ ಗುಂಡೂರಾವ್

ಬೆಂಗಳೂರು

     ಆಟೋ ರಿಕ್ಷಾ ಮತ್ತು ಕ್ಯಾಬ್ ಚಾಲಕರಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದು, ಇದು ಕಳವಳಕಾರಿಯಾಗಿದೆ. ಹೀಗಾಗಿ ಆಟೋ ರಿಕ್ಷಾ ಮತ್ತು ಕ್ಯಾಬ್ ಚಾಲಕರ ಆರೋಗ್ಯ ತಪಾಸಣೆಗೆ ಉಪಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  ತಿಳಿಸಿದ್ದಾರೆ.

    ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಗುರುವಾರ ಮಾತನಾಡಿದ ಅವರು, ಕಳೆದ ವರ್ಷ ರಾಜ್ಯದಲ್ಲಿ ವರದಿಯಾದ ಹೃದಯಾಘಾತ ಪ್ರಕರಣಗಳಲ್ಲಿ ಶೇ 30 ರಷ್ಟು ಆಟೋ ಮತ್ತು ಟ್ಯಾಕ್ಸಿ ಚಾಲಕರಿದ್ದಾರೆ ಎಂಬುದು ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ   ದತ್ತಾಂಶಗಳಿಂದ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ. 

   ವಾಯು ಮಾಲಿನ್ಯ, ನಿದ್ರೆಯ ಕೊರತೆ, ಹೆಚ್ಚಿನ ಒತ್ತಡ, ಕಳಪೆ ಆಹಾರ ಪದ್ಧತಿ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸ್ಥಿತಿಗಳು ಸೇರಿದಂತೆ ಅನಾರೋಗ್ಯಕರ ಜೀವನಶೈಲಿ ಆಟೋ, ಕ್ಯಾಬ್ ಚಾಲಕರಲ್ಲೇ ಹೃದಯಾಘಾತ ಪ್ರಕರಣ ಹೆಚ್ಚಳಕ್ಕೆ ಕಾರಣ ಎಂದು ಸಚಿವರು ಹೇಳಿದ್ದಾರೆ. ಮಾಲಿನ್ಯ, ನಿದ್ರೆಯ ಕೊರತೆ, ಹೊರಗೆ ಊಟ ಮಾಡುವುದು, ಒತ್ತಡ ಸಮಸ್ಯೆಗೆ ಕಾರಣವಾಗುತ್ತಿದೆ. ಅಲ್ಲದೆ, ಅವರಿಗೆ ಬಿಪಿ ಮತ್ತು ಮಧುಮೇಹವೂ ಇರಬಹುದು. ಇಷ್ಟೇ ಅಲ್ಲದೆ, ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳದಿರುವುದು, ಇತರ ಕಾಯಿಲೆಗಳು ಇರುವುದು ಎಲ್ಲವೂ ಸೇರಿ ಸಮಸ್ಯೆಯಾಗುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. 

    ಉದ್ದೇಶಿತ ಆರೋಗ್ಯ ತಪಾಸಣೆ ಯೋಜನೆಯನ್ನು ಜಾರಿಗೆ ತರಲು ಆಟೋ ಮತ್ತು ಕ್ಯಾಬ್ ಚಾಲಕರ ಸಂಘಗಳೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ಗುಂಡೂರಾವ್ ಹೇಳಿದ್ದಾರೆ. ಮತ್ತೊಂದೆಡೆ, ಶಾಲಾ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹೃದಯ ಆರೋಗ್ಯ ತಪಾಸಣೆ ಯೋಜನೆಯನ್ನು ಜಾರಿಗೊಳಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೂ ಸರ್ಕಾರ ಮೌಲ್ಯಮಾಪನ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ. ಮಕ್ಕಳ ಮೇಲಿನ ಮಾನಸಿಕ ಒತ್ತಡದ ಬಗ್ಗೆ ಮಾತನಾಡಿದ ಅವರು, ಆಪ್ತ ಸಮಾಲೋಚನೆ ಸಹ ವಿಶಾಲ ಯೋಜನೆಯ ಭಾಗವಾಗಿರುತ್ತವೆ ಎಂದಿದ್ದಾರೆ. 

    ಶಾಲಾ ಮಕ್ಕಳಿಗೂ ಮಾನಸಿಕ ಒತ್ತಡವಿರುತ್ತದೆ, ಅವರಿಗೆ ಮಾನಸಿಕ ಸಮಾಲೋಚನೆ ನೀಡಲಾಗುವುದು. ಇದರ ಅಡಿಯಲ್ಲಿ ಯಾವುದೇ ಆರಂಭಿಕ ತಪಾಸಣೆಯನ್ನು ಮಾಡಬಹುದೇ ಎಂದು ನಾವು ಚರ್ಚಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Recent Articles

spot_img

Related Stories

Share via
Copy link