ಹುಬ್ಬಳ್ಳಿ:
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಯಾರು ಪೇಮೆಂಟ್ ಮಾಡಿದ್ದಾರೆ ಎಂಬುದನ್ನು ಮೇ 7 ರ ನಂತರ ಬಹಿರಂಗಪಡಿಸುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿಚಾರ ಬಂದಾಗ ಲಿಂಗಾಯತರು, ವೀರಶೈವ ಲಿಂಗಾಯತರು ಬಿಜೆಪಿ ಜೊತೆಗೆ ನಿಲ್ಲುತ್ತಾರೆ. ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ನಮಗೆ. ನಮ್ಮ ಅಭ್ಯರ್ಥಿಗೆ ಯಾವುದೇ ಸಮಸ್ಯೆಯಿಲ್ಲ. ಹಿಂದೆ ಮಾತೆ ಮಹಾದೇವಿ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು ಅವರ ಎಷ್ಟು ಮತಗಳನ್ನು ಪಡೆದರೆ ಎಂಬುದು ಎಲ್ಲರಿಗೂ ಗೊತ್ತಿದೆ. ದಿಂಗಾಲೇಶ್ವರ ಸ್ವಾಮೀಜಿ ಒಂದು 5000 ಮತಗಳನ್ನು ಪಡೆಯುತ್ತಾರೆ. ಹಿಂದೆ ಮಾಜಿ ಸಚಿವ ವಿನಯ್ ಕುಲಕರ್ಣಿ ದಿಂಗಾಲೇಶ್ವರ ಸ್ವಾಮೀಜಿಯನ್ನ ತೆಗಳುತ್ತಿದ್ದರು. ಇದೀಗ ಒಳ್ಳೆಯ ಸ್ವಾಮೀಜಿ ಎಂದು ಹೇಳುತ್ತಿರುವುದನ್ನು ಗಮನಿಸಿದರೆ ಸ್ವಾಮೀಜಿಗೆ ಪೇಮೆಂಟ್ ಆಗಿದೆ ಎಂಬುದು ಖಚಿತ ಎಂದರು.
ರಾಜ್ಯದಲ್ಲಿ ಸೃಷ್ಟಿಯಾಗುತ್ತಿರುವ ತಾಲಿಬಾನ್ ಮಾದರಿಯ ಸಂಸ್ಕೃತಿಯನ್ನು ರಾಜ್ಯಪಾಲರು ಗಮನಿಸುತ್ತಿದ್ದಾರೆ. ಎಲ್ಲಾ ಘಟನಾವಳಿಗಳನ್ನು ಕ್ರೂಢೀಕರಿಸಿ ರಾಷ್ಟ್ರಪತಿಯವರಿಗೆ ವರದಿ ಸಲ್ಲಿಸಬೇಕು. ಈ ಕುರಿತು ರಾಜ್ಯಪಾಲರನ್ನು ಭೇಟಿಯಾಗಲು ನಾವು ಮಾತನಾಡುತ್ತಿದ್ದೇವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಮತದಾರರನ್ನು ಬೆದರಿಸುತ್ತಿದ್ದಾರೆ. ಇಂತಹ ವಿಚಾರಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.
ಶಿವಮೊಗ್ಗದಲ್ಲಿ ಹಿರಿಯ ನಾಯಕರಿದ್ದಾರೆ :
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅಲ್ಲಿ ಮೂವರು ಹಿರಿಯ ನಾಯಕರಿದ್ದಾರೆ. ಅಷ್ಟೊಂದು ದೂರ ಕಾಲು ಚಾಚುವಂತ ವ್ಯಕ್ತಿ ನಾನಲ್ಲ ಎನ್ನುವ ಮೂಲಕ ಪುನಹ ಯಡಿಯೂರಪ್ಪ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈಶ್ವರಪ್ಪ ಸ್ಪರ್ಧೆ ಕುರಿತ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ಅಲ್ಲಿನ ಚುನಾವಣೆಯ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ