ಬೆಂಗಳೂರು:
2025-26ನೇ ಶೈಕ್ಷಣಿಕ ವರ್ಷದ ತರಗತಿಗಳು ಮೇ 29ರಿಂದ ಆರಂಭವಾಗಲಿವೆ. ಇದಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾರಂಭೋತ್ಸವ, ಸ್ವಚ್ಛತೆ, ಸಿಹಿಯೂಟದ ಜೊತೆಗೆ ಬಿಸಿಯೂಟ, ಕ್ಷೀರಭಾಗ್ಯ, ಆಹಾರ ಪದಾರ್ಥಗಳ ಪರಿಶೀಲನೆ, ನೀರಿನ ಟ್ಯಾಂಕ್ ಮತ್ತಿತರ ವ್ಯವಸ್ಥೆಗಳ ಸ್ವಚ್ಛತೆ ಹಾಗೂ ಸುರಕ್ಷತೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರಿಗೆ ಪ್ರಮುಖ ಸೂಚನೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿದೆ.
1) ಶಾಲೆಗಳಲ್ಲಿ ಪಿ.ಎಂ.ಪೋಷಣ್ (ಮಧ್ಯಾಹ್ನ ಉಪಾಹಾರ ಯೋಜನೆ) ಮತ್ತು ಕ್ಷೀರಭಾಗ್ಯ ಯೋಜನೆಯನ್ನು ರಾಜ್ಯದ ಎಲ್ಲಾ ಸರಕಾರಿ ಮತ್ತು ಅನುದಾನಿತ 1-10 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭೋತ್ಸವದೊಂದಿಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವ ಬಗ್ಗೆ ಮತ್ತು ಮುಂದುವರೆದ ಕಾರ್ಯಕ್ರಮಗಳ ಬಗ್ಗೆ ಶಿಕ್ಷಣ ಸಲಹೆ ನೀಡಿ ಮಾರ್ಗಸೂಚಿ ಪ್ರಕಟಿಸಿದೆ.
2) ಶೈಕ್ಷಣಿಕ ಸಾಲಿನ ಚಟುವಟಿಕೆಗಳು ದಿನಾಂಕ: 29.05.2025ರಿಂದ ಶಾಲೆ ಪ್ರಾರಂಭವಾಗುತ್ತವೆ. ಪಿ.ಎಂ.ಪೋಷಣ್ (ಮಧ್ಯಾಹ್ನ ಉಪಾಹಾರ ಯೋಜನೆ), ಕ್ಷೀರಭಾಗ್ಯ ಯೋಜನೆ ಪೂರಕ ಪೌಷ್ಟಿಕ ಆಹಾರ ವಿತರಣೆಯನ್ನು ವಾರ್ಷಿಕವಾಗಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ 1-10 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡು ಸಂಭ್ರಮದಿಂದ ಸಿಹಿಯೊಂದಿಗೆ ಬಿಸಿಯೂಟ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಸಂಬಂಧಿಸಿದ ಶಾಲೆಗಳ ಮುಖ್ಯಸ್ಥರಿಗೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಮರಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ.
3) ಶಾಲಾ ಹಂತದಲ್ಲಿ ಪೂರ್ವಸಿದ್ಧತೆಯ ನಿರ್ವಹಣೆಯಲ್ಲಿ ಮುಖ್ಯಶಿಕ್ಷಕರ ಜವಾಬ್ದಾರಿಗಳು: ಮುಖ್ಯ ಶಿಕ್ಷಕರು ಏಪ್ರಿಲ್-ಮೇ-2025 ರ ಬೇಸಿಗೆ ರಜಾ ಅವಧಿಯಲ್ಲಿ ಶಾಲೆಗಳಲ್ಲಿ ಉಳಿಕೆ ಇರುವ ಆಹಾರ ಧಾನ್ಯಗಳಾದ ಅಕ್ಕಿ, ಗೋಧಿ, ತೊಗರಿಬೇಳೆಯನ್ನು ಬಿಸಿಲಿನಲ್ಲಿ ಒಣಹಾಕಿ ಸ್ವಚ್ಛಗೊಳಿಸಿ ಬಳಸುವುದು. ಸೂರ್ಯಕಾಂತಿ ಎಣ್ಣೆ, ಹಾಲಿನ ಪುಡಿ, ಹಾಗೂ ಇತರೆ ಆಹಾರ ಪದಾರ್ಥಗಳು ಉಳಿಕೆಯಾಗಿದ್ದಲ್ಲಿ ಪರಿಶೀಲಿಸಿಕೊಂಡು ಉತ್ತಮವಾಗಿದ್ದಲ್ಲಿ ಬಳಸುವುದು.
4) ದಾಸ್ತಾನು ಕೊಠಡಿ ಹಾಗೂ ಅಡುಗೆ ಕೋಣೆಗಳನ್ನು Deep-Cleaning ಮಾಡಿಸಿ ಸ್ವಚ್ಛತೆ ಮಾಡಿಕೊಳ್ಳುವುದು. ಪಾತ್ರೆಪರಿಕರಗಳನ್ನು ಶುಚಿಗೊಳಿಸಿ ಬಳಸಲು ಕ್ರಮಕೈಗೊಳ್ಳುವುದು.ಅಡುಗೆ ಕೋಣೆಗಳಲ್ಲಿ ಇಲಿಗಳು ಬರದಂತೆ ಬೋನುಗಳನ್ನು ಇಟ್ಟು Pest- Control ಕ್ರಮಗಳನ್ನು ಅನುಸರಿಸುವುದು, ಗೋಡೆಗಳನ್ನು ಸ್ವಚ್ಛಗೊಳಿಸಿ ಜಾಡ ತೆಗೆದು, ಹಲ್ಲಿ, ಜಿರಲೆ, ನೊಣಗಳು ಬರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು, ಕಿಟಕಿ, ಎಕ್ಸಾಸ್ಟ್ ಫ್ಯಾನ್ ಇರುವ ಜಾಗದಲ್ಲಿ ಕಬ್ಬಿಣದ ಮೆಶ್ ಹಾಕಿಸಿ ಹೊರಗಿನಿಂದ ಯಾವುದೇ ಕ್ರಿಮಿ-ಕೀಟಗಳು ಅಡುಗೆ ಕೋಣೆ ಒಳಗೆ ಬರದಂತೆ ಭದ್ರಪಡಿಸುವುದು.
5) ಅಕ್ಕಿ, ಗೋಧಿ, ತೊಗರಿಬೇಳೆ ಮುಂತಾದ ಆಹಾರ ಪದಾರ್ಥಗಳನ್ನು ಮಳೆ ನೀರಿನಲ್ಲಿ ನೆನೆಯದಂತೆ ನೋಡಿಕೊಳ್ಳಲು ನೆಲದ ಮೇಲೆ ಪ್ಲಾಸ್ಟಿಕ್/ಮರದ ಮಣೆಗಳನ್ನು ಬಳಸಿ ಅದರ ಮೇಲೆ ಆಹಾರ ಧಾನ್ಯಗಳ ಮೂಟೆಗಳನ್ನು ಜೋಡಿಸುವುದು. ಹೀಗೆ ಜೋಡಿಸುವಾಗ ಮೂಟೆಗಳು ಗೋಡೆಗೆ ತಾಗದಂತೆ ಸುತ್ತಲೂ ಒಂದು ಅಂತರವನ್ನು ಕಾಯ್ದುಕೊಳ್ಳುವುದು. ಆಹಾರ ಉಗ್ರಾಣದ ಕಿಟಕಿಗಳಿಗೆ ಮಳೆ ನೀರು, ಇಬ್ಬನಿ ಹನಿಗಳು ಒಳಗೆ ಬರದಂತೆ ಪ್ಲಾಸ್ಟಿಕ್ ಹಾಳೆಗಳನ್ನು ಅಳವಡಿಸುವುದು.
6) ಶಾಲೆಯಲ್ಲಿ ದಾಸ್ತಾನು ಇರುವ ಆಹಾರ ಪದಾರ್ಥಗಳನ್ನು FIFO ಮತ್ತು FEFO ಪದ್ಧತಿಯಲ್ಲಿ ಬಳಸುವುದು.ಅವಧಿ ಮುಗಿದ ಪದಾರ್ಥಗಳನ್ನು ಬಿಸಿಯೂಟ ತಯಾರಿಕೆಯಲ್ಲಿ ಬಳಸುವಂತಿಲ್ಲ, ಆಹಾರ ಪದಾರ್ಥಗಳ ಪ್ಯಾಕೇಟ್ ಮತ್ತು ಮೂಟೆಗಳ ಮೇಲೆ ಯಾವ ದಿನದಂದು ಆಹಾರ ಪದಾರ್ಥಗಳನ್ನು ದಾಸ್ತಾನಿನಲ್ಲಿಡಲಾಗಿದೆ ಎಂಬ ಮಾಹಿತಿಗೆ ಅನುಗುಣವಾಗಿ ದಿನಾಂಕವನ್ನು ನಮೂದಿಸುವುದು. ಇದರಂತೆ ಪರಿಶೀಲಿಸಿ ಅವಧಿಯಿರುವ ಪದಾರ್ಥಗಳನ್ನೇ ಬಳಸುವುದನ್ನು ಖಚಿತಪಡಿಸಿಕೊಳ್ಳುವುದು. ಅಡುಗೆಯವರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುವುದು.
7) ಕಳಪೆಯಾದ, ಹುಳ ತಿಂದ ಗುಣಮಟ್ಟ ಹಾಳಾಗಿರುವ, ಕೊಳೆತಿರುವ ಆಹಾರ ಧಾನ್ಯಗಳು, ಆಹಾರ ಪದಾರ್ಥಗಳನ್ನು ದಾಸ್ತಾನಿನಿಂದ ಬೇರ್ಪಡಿಸಿ ಹೊರ ಹಾಕುವುದು ಹಾಗೂ ಬಿಸಿಯೂಟಕ್ಕೆ ಬಳಸದಂತೆ ನೋಡಿಕೊಳ್ಳುವುದು.
8) ಅಡುಗೆ ಕೋಣೆಯಲ್ಲಿ ಇಡಲಾಗಿರುವ ಅಗ್ನಿ ನಂದಕ ಬಳಕೆಯ ವಾಯಿದೆಯ ಅವಧಿಯನ್ನು ಪರಿಶೀಲಿಸಿ ಅವಧಿ ಮುಗಿದಿದ್ದಲ್ಲಿ ಶಾಲೆ ಪ್ರಾರಂಭವಾಗುವ ಪೂರ್ವದಲ್ಲಿಯೇ Refilling ಮಾಡಿಸಿ ದಿನಾಂಕ ನಮೂದಿಸಿ ಸುಸ್ಥಿತಿಯಲ್ಲಿಡುವಂತೆ ಕ್ರಮವಹಿಸುವುದು. ನೆಲದಿಂದ ನಾಲ್ಕು ಅಡಿ ಎತ್ತರದಲ್ಲಿ ಗೋಡೆಯ ಮೇಲೆ ಕೈಗೆ ಸಿಗುವಂತೆ ಅಡುಗೆ ಮನೆಯಲ್ಲಿ ಅಳವಡಿಸುವುದು.
9) ಶಾಲೆ ಪ್ರಾರಂಭವಾಗುವ ಪೂರ್ವದಲ್ಲಿ ಶಾಲೆಯಲ್ಲಿರುವ ನೀರಿನ ಸಂಪು, ನೀರಿತ ತೊಟ್ಟಿ, ಓವರ್ ಹೆಡ್ ಟ್ಯಾಂಕ್ ಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಹೊಸ ನೀರನ್ನು ತುಂಬುವುದು ಹಾಗೂ ನಲ್ಲಿ ಪೈಪ್ ಗಳು ಕೆಟ್ಟು ಹೋಗಿದ್ದಲ್ಲಿ ಅಗತ್ಯ ರಿಪೇರಿಯನ್ನು (ಹೊಸ ಪರಿಕರಗಳನ್ನು ಖರೀದಿಸಿ ಅಳವಡಿಸಿ) ಮಾಡಿಸಿ ನೀರಿನ ಸರಬರಾಜಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದು. ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸ್ಥಳೀಯ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ದಾನಿಗಳು, ಕಂಪನಿಗಳು, ಜನಪ್ರತಿನಿಧಿಗಳ ಅನುದಾನದಿಂದ ಸಹಾಯ ಪಡೆದು RO-Drinking Water Filterಗಳನ್ನು ಅಳವಡಿಸಿಕೊಳ್ಳುವುದು. ಈಗಾಗಲೇ ಶಾಲೆಯಲ್ಲಿ ಬಳಸುತ್ತಿರುವ ವಾಟರ್ ಫಿಲ್ಟರ್ ಗಳ ಗುಣಮಟ್ಟ ಕಳಪೆಯಾಗಿದ್ದಲ್ಲಿ ಇಲ್ಲವೇ ಕೆಟ್ಟು ಹೋಗಿದ್ದಲ್ಲಿ ಕೂಡಲೇ ಶಾಲಾ ಉಳಿಕೆ ಅನುದಾನದಿಂದ ರಿಪೇರಿ ಮಾಡಿಸಿ ಬಳಕೆಗೆ ಸಿದ್ಧಪಡಿಸಿಕೊಳ್ಳುವುದು.
10) ಅಡುಗೆ ಕೋಣೆಯಲ್ಲಿ ಮತ್ತು ಉಗ್ರಾಣದಲ್ಲಿ ಗಾಜಿನ ಬಲ್ಬುಗಳನ್ನು ಅಳವಡಿಸದೇ ಇದ್ದಲ್ಲಿ ಬದಲಾಯಿಸಿ ಎಲ್.ಇ.ಡಿ. ಬಲ್ಬುಗಳನ್ನು ಅಳವಡಿಸುವುದು. ಅಡುಗೆ ಕೋಣೆಗಳ 2 White Wash Bright coloured painting ಸ್ವಚ್ಛಗೊಳಿಸುವುದು, ಹೊರಗೋಡೆಯಲ್ಲಿ ಪಿ.ಎಂ. ಪೋಷಣ್ ಶಿರೋನಾಮೆ, ಮಧ್ಯಾಹ್ನ ಉಪಾಹಾರ ಯೋಜನೆಯ ಲೋಗೋ ಚಿಹ್ನೆಗಳನ್ನು ಬಣ್ಣದಲ್ಲಿ ಆಕರ್ಷಣೀಯವಾಗಿ ಕಾಣುವಂತೆ ಬರೆಸುವುದು. ವಾರದ ಆಹಾರ ಸೂಚಿತ ಮೆನುವನ್ನು ಪೂರಕ ಪೌಷ್ಟಿಕ ಆಹಾರದ ನಿಗದಿತ ಪ್ರಮಾಣ, WIFS ಮತ್ತು NDD ಮಾತ್ರೆಗಳ ವಿತರಣೆ ಮತ್ತು ಪೌಷ್ಟಿಕಾಂಶಗಳ ಬಗ್ಗೆ ಮಾಹಿತಿ ಬರೆಸುವುದು.
