ವೀರ ಕಂಪಿಲರಾಯನ ಎರಡನೇ ಶಾಸನ ಪತ್ತೆ

 ತುಮಕೂರು:


ಕೊರಂಕೋಟೆ-ಹೊಲತಾಳು ಐತಿಹಾಸಿಕ ಗ್ರಾಮಗಳು

                 ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಚನ್ನರಾಯನದಯರ್ಗ ಕುರಂಕೋಟೆ ಗ್ರಾಮದ ಎರಡು ಕಿಮೀ ದೂರದ ಸಿದ್ಧರಬೆಟ್ಟದ ಹಿಂಭಾದಲ್ಲಿನ ಮಣ್ಣಿನಕೋಟೆಯ ಬಳಿ ಗಣಪತಿ ಚಿತ್ರವಿರುವ ಬಂಡೆಯ ಮೇಲೆ ಮಹತ್ವದ ಶಾಸನವೊಂದು ಪತ್ತೆಯಾಗಿದೆ. ಇದರಿಂದ ಕೊರಂಕೋಟೆ ಮತ್ತು ಸಮೀಪದ ಹೊಲತಾಳು ಗ್ರಾಮಗಳು ಐತಿಹಾಸಿಕವಾಗಿ ಮಹತ್ವದ ಗ್ರಾಮಗಳಾಗಿದ್ದವು ಎಂಬುದು ತಿಳಿದು ಬಂದಿದೆ.

ಕುರಂಕೋಟೆ ಗ್ರಾಮದ ಉತ್ತರಕ್ಕೆ ಸಿದ್ಧರಬೆಟ್ಟದ ತಪ್ಪಲಿನಲ್ಲಿ ಪ್ರಾಚೀನ ಕಾಲದ ಮಣ್ಣಿನಕೋಟೆಯಿದ್ದು, ಅದರ ಪೂರ್ವಕ್ಕೆ ಒಂದು ದೊಡ್ಡ ಬಂಡೆಯ ಮೇಲೆ ರೇಖೆಯಲ್ಲಿ ದೊಡ್ಡದಾದ ಗಣಪತಿಯ ಚಿತ್ರವನ್ನು ಮತ್ತು ಅದರ ಪಕ್ಕದಲ್ಲಿ ಹದಿನೇಳು ಸಾಲುಗಳು ಶಾಸನವನ್ನು ಕೆತ್ತಲಾಗಿದೆ. ಬಹಳ ಸವೆದಿರುವ ಈ ಬಂಡೆಗಲ್ಲು ಶಾಸನವು ಕುಮ್ಮಟ ದುರ್ಗದ ದೊರೆ ವೀರ ಕಂಪಿಲರಾಯನ ಕಾಲದ ಶಾಸನವಾಗಿದೆ.

ಒಟ್ಟು ಹದಿನೇಳು ಸಾಲುಗಳಲ್ಲಿರುವ ಈ ಶಾಸನದಲ್ಲಿ ಕಾಲದ ಭಾಗವು ಬಹಳ ಸವೆದಿದೆ. ಸಂವತ್ಸರದ ಆಧಾರದಿಂದ ಕಾಲದ ಭಾಗವನ್ನು ‘ಜಯಾಭ್ಯುದಂ(ಯ)(ಶ)ಕ 1(2)47 ನೆ ಕ್ರೋಧ (ನ) ನಾಮವೆಂಬ (ಸಂವಛರದಲು) (ಶ್ರಾವ)ಣ ಬ 13 ಲು’ ಎಂದು ತಿದ್ದಿಕೊಂಡಲ್ಲಿ ಈ ಶಾಸನದ ಕಾಲವು ಕ್ರಿಸ್ತಶಕ 1325 ಜುಲೈ 24, ಬುಧವಾರಕ್ಕೆ ಸಮನಾಗುತ್ತದೆ. ಈ ಶಾಸನದಲ್ಲಿ ಕಂಡು ಬರುವ ಅಂಶಗಳು ಈ ಕೆಳಕಂಡಂತಿವೆ.

1. ಈ ಶಾಸನವು ಕುಮ್ಮಟದುರ್ಗದ ದೊರೆ ವೀರ ಕಂಪಿಲರಾಯನ ಹೆಸರನ್ನು ಉಲ್ಲೇಖಿಸಿದೆ. ಇವನು ಜನಪದ ನಾಯಕನಾಗಿ ಹೆಸರು ಮಾಡಿರುವ ಕುಮಾರರಾಮನ ತಂದೆ.

2. ಇವನು ಯಾವುದೋ ಕಾರಣಕ್ಕೆ ಈ ಭಾಗಕ್ಕೆ ಬಂದಾಗ ಇವನ ಕೈಕೆಳಗಿನ ಅಧಿಕಾರಿ
ಪಾದಾತಿ ಹೊಂನ್ನಯ್ಯ ಎಂಬುವನು ರಾಜನಿಗೆ ಗೌರವಾರ್ಥ ಕೂರಂಗೆ ಕೋಟೆಯ ಪೂರ್ವದ ಹೊರತಾಣ ಗ್ರಾಮವನ್ನು ದಾನವಾಗಿ ನೀಡಿರುವನು. ಕೂರಂಗೆ ಕೋಟೆ ಎಂದರೆ ಈಗಿನ ಕುರಂಕೋಟೆಯೇ ಆಗಿದೆ. ಹೊರತಾಣ ಎಂದರೆ ಈಗಿನ ಹೊಲತಾಳು ಗ್ರಾಮವೇ ಆಗಿದೆ. ಈ ಗ್ರಾಮವನ್ನು ಯಾರಿಗೆ ದಾನಕೊಟ್ಟನೆಂಬ ವಿವರವಿಲ್ಲ.

3. ಸುಮಾರು ಕ್ರಿಸ್ತಶಕ ಹದಿನೇಳನೇ ಶತಮಾನದ ನಂಜುಂಡ ಕವಿಯ ಕುಮಾರ ರಾಮನ ಸಾಂಗತ್ಯ ಕೃತಿಯಲ್ಲಿ ಹುಳಿಯೇರು ಸ್ಥಳದ ಮೇಲೆ ಕಂಪಿಲರಾಯನು ದಂಡೆತ್ತಿ ಹೋಗಿದ್ದನೆಂಬ ಮಾಹಿತಿಯಿದೆ. ಅಲ್ಲದೆ ಸರಿ ಸುಮಾರು ಇದೇ ಕಾಲಮಾನದ ತಿಪಟೂರು ಬಳಿಯ ಒಂದು ವಿರಗಲ್ಲಿನಲ್ಲಿ ಹೊಯ್ಸಳರ ಮೇಲೆ ಯುದ್ಧ ಮಾಡಿದ

ಕಂಪಿಲರಾಯ ವೀರನೊಬ್ಬನನ್ನು ಕೊಂದ ಮಾಹಿತಿಯಿದೆ (ಎಕ ಘಿII, ತಿಪಟೂರು 24, ಕ್ರಿ.ಶ.1325). ಈ ಎರಡೂ ಸಾಕ್ಷಿಗಳನ್ನು ಆಧರಿಸಿ ಕಂಪಿಲರಾಯ ಹುಳಿಯಾರು ಮತ್ತು ತಿಪಟೂರಿನ ಕಡೆ ದಂಡೆತ್ತಿ ಹೋಗುವಾಗ ಇದೇ ಮಾರ್ಗದಲ್ಲಿ ಬಂದಾಗ ಅವನ ಸೈನ್ಯದ ಮುಖಂಡ ಹೊಂನ್ನಯ್ಯ ಎಂಬುವನು ತನ್ನ ಒಡೆಯನಿಗೆ ಒಳಿತಾಗಲೆಂದು ಅಥವಾ ಯುದ್ಧದಲ್ಲಿ ಜಯವಾಗಲೆಂದು ಹೊಲತಾಳು ಗ್ರಾಮವನ್ನು ದಾನವಾಗಿ ನೀಡಿರುವನು.

4. ಈಗಿನ ಕುರಂಕೋಟೆಯನ್ನು ಪ್ರಸ್ತುತ ಶಾಸನದಲ್ಲಿ ಕೂರಂಗೆ ಕೋಟೆ ಎಂದು ಕರೆದಿದೆ. ಕ್ರಿಸ್ತಶಕ 1430 ರ ಅವಧಿಯಲ್ಲಿ ವಿಜಯನಗರದ ದೊರೆ ಪ್ರೌಢದೇವರಾಯನ ಮಹಾಮಂತ್ರಿ ಲಕ್ಕಣ್ಣ ದಂಡೇಶನು ರಚಿಸಿರುವ ಶಿವತತ್ತ್ವಚಿಂತಾಮಣಿ ಎಂಬ ಕಾವ್ಯದಲ್ಲಿ ಈ ಕೂರಂಗೆ ಕೋಟೆಯ ಉಲ್ಲೇಖವಿದೆ. ಅದರಲ್ಲಿ ನೂತನ ಶಿವಗಣಂಗಳ ಚರಿತ್ರೆಯನ್ನು ಹೇಳುವಾಗ

ಕೂರಂಗಿಕೋಟೆಯಲಿ ವರಧಾನ್ಯದಮ್ಮನುಂ
ಧಾರುಣೀತಳವಯೆ ಗರ್ಭದಶ್ವಕ್ಕೆಯತಿ
ಘೋರವಹ ಶೂಲೆ ಹುಟ್ಟಲ್ ನಿಂದಕರು ನೆರೆದು ಮಾಣಿಸೆಂದೆನಲಾಕ್ಷಣ
ವೀರವ್ರತೋದ್ರೇಕಿ ಪಾದತೀರ್ಥವ ತಳಿದ
ಭೋರನಾಕುದುರೆಯಂ ಮಯ ಕಾಣಿಸಿ ಮೆõದ
ಧಿರಗುಣಿ ವರದಾನಿಯಮ್ಮನೊಪ್ಪುವ ವಿಮಲಚರಣಾಂಬುಜಕ್ಕೆ ಶರಣು ||

ಎಂದು ವರ್ಣಿಸಿದ್ದಾನೆ. ಅಂದರೆ ಕೂರಂಗೆ ಕೋಟೆಯಲ್ಲಿ ಶಿವಶರಣೆ ವರದಾನಿಯಮ್ಮನು ತನ್ನ ಮಹಿಮೆಯಿಂದ ಮೆರೆಯುತ್ತಿರುತ್ತಾಳೆ. ಆಗ ಆ ಊರಿನ ಒಂದು ಗರ್ಭ ಧರಿಸಿದ ಕುದುರೆಗೆ ಘೋರವಾದ ಖಾಯಿಲೆ ಬರುತ್ತದೆ. ವೈರಿಗಳು ವರದಾನಿಯಮ್ಮನಿಗೆ ನಿಂದಿಸಿ ಈ ಖಾಯಿಲೆಯನ್ನು ವಾಸಿ ಮಾಡಿದರೆ ನಿನ್ನ ಮಹಿಮೆಯನ್ನು ಒಪ್ಪುತ್ತೇವೆಂದು ಪಂಥವೊಡ್ಡುತ್ತಾರೆ.

ಆಗ ಆ ಮಹಾ ಮಹಿಮಳಾದ ವರದಾನಿಯಮ್ಮನು ಶಿವ ಶರಣರ ಪಾದತೀರ್ಥವನ್ನು ಆ ಕುದುರೆಯ ಮೇಲೆ ಚಿಮುಕಿಸಿದಾಗ ಕುದುರೆಯು ಸುಲಭವಾಗಿ ಮರಿಯನ್ನು ಹಾಕುವುದಲ್ಲದೆ ಅದರ ಖಾಯಿಲೆಯೂ ವಾಸಿಯಾಗುತ್ತದೆ. ಇವಳನ್ನು ಕವಿ ಧೀರಗುಣಿ ಎಂದು ವರ್ಣಿಸಿದ್ದಾನೆ (ಶಿವತತ್ತ್ವಚಿಂತಾಮಣಿ, ಸಂಧಿ 38, ಪದ್ಯ 74)

ಇಂದಿನ ಹೊಲತಾಳು ಅಂದಿನ ಹೊರತಾಣ :

ಈ ವರ್ಣನೆಯಿಂದ ಕುರಂಕೋಟೆಯ ಪೂರ್ವದ ಹೆಸರು ಕೂರಂಗೆಕೋಟೆ ಎಂದಿದ್ದು ಇದು ಪ್ರಸ್ತುತ ದೊರೆತಿರುವ ಕ್ರಿಸ್ತ ಶಕ 1325 ರ ಶಾಸನದಲ್ಲಿ ಮತ್ತು ಕ್ರಿಸ್ತ ಶಕ 1430 ರ ಶಿವತತ್ತ್ವ ಚಿಂತಾಮಣಿ ಕಾವ್ಯದಲ್ಲೂ ಉಲ್ಲೇಖವಾಗಿರುವುದು ಗಮನಾರ್ಹ. ಈಗಿರುವ ಕುರಂಕೋಟೆ ಹೊಸ ಜಾಗವಾಗಿದ್ದು ಶಾಸನಸ್ಥ ಕೂರಂಗೆ ಕೋಟೆ ಈಗ ಸಿದ್ಧರಬೆಟ್ಟದ ಹಿಂಭಾಗದಲ್ಲಿ ಪಾಳು ಬಿದ್ದಿರುವ ಮಣ್ಣಿನಕೋಟೆಯ ಒಳಭಾಗದ ಗ್ರಾಮವಾಗಿತ್ತು. ಅಲ್ಲದೆ ಸಮೀಪದ ಈಗಿನ ಹೊಲತಾಳು ಗ್ರಾಮವು ಶಾಸನದಲ್ಲಿ ಹೊರತಾಣ ಎಂದು ಉಲ್ಲೇಖವಾಗಿದೆ.

ಗ್ರಾಮ ದಾನದ ಉಲ್ಲೇಖ :

ಈ ಶಾಸನ ದೊರಕಿರುವುದರಿಂದ ಕಂಪಿಲರಾಯನು ಕ್ರಿಸ್ತಶಕ 1325 ರ ಜುಲೈ ತಿಂಗಳಿನಲ್ಲಿ ಹುಳಿಯೇರು ದಂಡಯಾತ್ರೆ, ತಿಪಟೂರು ಭಾಗದ ದಂಡ ಯಾತ್ರೆಯನ್ನು ಮುಗಿಸಿ ಕುಮ್ಮಟದುರ್ಗಕ್ಕೆ ಹಿಂದಿರುಗುವಾಗ ಕೂರಂಗೆ ಕೋಟೆಯನ್ನು ವಶಪಡಿಸಿ ಕೊಂಡಿದ್ದನೆಂದು, ಇದರ ನೆನಪಿಗೆ ಅವನ ಸೈನ್ಯದ ಅಧಿಕಾರಿ ಹೊನ್ನಯ್ಯನು ಗ್ರಾಮದಾನವನ್ನು ನೀಡಿದ್ದಾನೆಂದು ಹೇಳಬಹುದಾಗಿದ್ದು ಇದರಿಂದಾಗಿ ತುಮಕೂರು ಜಿಲ್ಲೆಯಲ್ಲಿ ಕಂಪಿಲರಾಯನ ಉಲ್ಲೇಖವಿರುವ ಎರಡನೆ ಶಾಸನ ದೊರೆತಂತಾಗಿದೆ.

ಸಂಶೋಧನೆಗೆ ಸಹಕರಿಸಿದವರು :

ಈ ಶಾಸನವನ್ನು ದಿನಾಂಕ : 29.10.2020 ರಂದು ಮೊದಲಿಗೆ ಪತ್ತೆಹಚ್ಚಿ, ಅದನ್ನು ತೋರಿಸಿ ಓದಲು ಪ್ರೇರೇಪಿಸಿ ಕ್ಷೇತ್ರ ಕಾರ್ಯದಲ್ಲಿ ಜೊತೆಯಿದ್ದ ಮಿತ್ರರಾದ ಡಾ.ರವಿಕುಮಾರ್‍ನೀಹ, ಕಾಂತರಾಜುಗುಪ್ಪಟ್ಣ, ಡಾ.ಬೀರಂಜಗದೀಶ್, ಲಕ್ಮೀಶ್‍ಪಾಳೇಗಾರ ಹಾಗು ಸಹಾಯ ಮಾಡಲು ಜೊತೆಯಿದ್ದ ಸಂಶೋಧನಾ ವಿದ್ಯಾರ್ಥಿಗಳಾದ ಕುರುಬರ ಗಾದಿಲಿಂಗಪ್ಪ, ಧನುಷ್, ಸತೀಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

-ಸಂಶೋಧನೆ

ಪ್ರೊ.ಡಿ.ವಿ.ಪರಮಶಿವಮೂರ್ತಿ
ಪ್ರಾಧ್ಯಾಪಕರು ಮತ್ತು ಡೀನ್
ತುಮಕೂರು ವಿಶ್ವವಿದ್ಯಾನಿಲಯ

 

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap