ತುಮಕೂರು
ಅಸ್ಪೃಷ್ಯ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಶಿಷ್ಠಾಚಾರ ನಿಯಮದ ಪ್ರಕಾರ ತಮಗಿರುವ ಸವಲತ್ತು ಬಳಸಿಕೊಳ್ಳುತ್ತಿರುವುದನ್ನು ಸಹಿಸದ ಕೆಲವರು, ಅವರನ್ನು ಝಿರೋ ಟ್ರಾಫಿಕ್ ಮಂತ್ರಿ ಎಂದು ಹೇಳಿಕೆ ನೀಡುವ ಮೂಲಕ ಇಡೀ ಸಮುದಾಯಕ್ಕೆ ಅವಮಾನ ಮಾಡಿದ್ದು, ಇವರ ವಿರುದ್ದ ಹೊಲೆ, ಮಾದಿಗರು ಒಟ್ಟಾಗಿ ಪ್ರತಿಭಟಿಸುವುದು ಅನಿವಾರ್ಯವಾಗಿದೆ ಎಂದು ಕೆಂಚಮಾರಯ್ಯ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ನಲ್ಲಿ ಡಿ.ಸಿ.ಎಂ. ಡಾ.ಜಿ.ಪರಮೇಶ್ವರ್ ಅವರ ಅಭಿಮಾನಿಗಳು ಆಯೋಜಿಸಿದ್ದ ತುಮಕೂರು ನಗರ ಹಾಗೂ ಗ್ರಾಮಾಂತರದ ಸಭೆಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿಯೊಬ್ಬರು ತಮ್ಮ ಪ್ರವಾಸದ ವೇಳೆ ಝೀರೋ ಟ್ರಾಫಿಕ್ ಬಳಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದಿನ ಹಲವಾರು ಡಿ.ಸಿ.ಎಂ.ಗಳು ಈ ನಿಯಮವನ್ನು ಪಾಲಿಸಿದ್ದಾರೆ. ಆದರೆ ಅಸ್ಪಷ್ಯ ಜಾತಿಗೆ ಸೇರಿದ ದಲಿತರೊಬ್ಬರು ಈ ಸೌಲಭ್ಯ ಬಳಕೆ ಮಾಡುತ್ತಿರುವುದನ್ನು ಸಹಿಸಲಾಗದೆ, ಕೆಲ ರಾಜಕಾರಣಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದು, ಇಂತಹವರ ವಿರುದ್ದ ಎಡ, ಬಲ ಎರಡು ಜಾತಿಯವರು ಹಾಗೂ ಡಾ.ಜಿ.ಪರಮೇಶ್ವರ್ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ನಿಷ್ಠಾವಂತರು ಒಗ್ಗೂಡಿ ಹೋರಾಟ ರೂಪಿಸಬೇಕಿದೆ.
ಈ ಸಂಬಂಧ ಜೂನ್ 11 ಅಥವಾ 12 ರಂದು ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸುತ್ತಿದ್ದು, ಎಲ್ಲರೂ ತಮ್ಮಲ್ಲಿನ ಅಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಮುದಾಯದ ಒಗ್ಗಟ್ಟು ಪ್ರದರ್ಶಿಸಲು ಕೋರಿದರು. ಸಭೆಯಲ್ಲಿದ್ದ ರೆಡ್ಡಿ ಚಿನ್ನಯಲ್ಲಪ್ಪ, ಜಿ.ಎಸ್.ಸೋಮಣ್ಣ, ನರಸೀಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಶಿವಾಜಿ, ದಿನೇಶ್ ಮತ್ತಿತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.