ನವದೆಹಲಿ
ಈ ಬಾರಿ ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಸಿಕ್ಕಿಲ್ಲ. ಹೀಗಾಗಿ ಬೆಂಗಳೂರು ಅಭಿವೃದ್ಧಿ ಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜತೆ ಚರ್ಚೆ ನಡೆಸಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ನವದೆಹಲಿಯಲ್ಲಿ ಪ್ರಧಾನಿಯವರನ್ನು ಬೇಟಿ ಮಾಡಿ ಮಾತುಕತೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಗಿಫ್ಟ್ ಸಿಟಿ’ ಬಗ್ಗೆ ಮಾತನಾಡಿದ್ದಾಗ ಅದನ್ನು ನೀಡಲ್ಲ ಎಂದಿದ್ದರು. ಹೀಗಾಗಿ ಬೇರೆ ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡುವಂತೆ ಮನವಿ ಮಾಡಲಾಗಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆಯೂ ಚರ್ಚೆ ನಡೆಯಿತು. 5300 ಕೋಟಿ ರೂ. ಬಜೆಟ್ನ ಭದ್ರಾ ಮೇಲ್ಡಂಡೆ ಯೋಜನೆಯ ಹಣ ಬಂದಿಲ್ಲ. ಅದನ್ನು ಪರಿಶೀಲಿಸುವ ಬಗ್ಗೆ ಪ್ರಧಾನಿ ಭರವಸೆ ನೀಡಿದ್ದಾರೆ. ಕಾವೇರಿ ನದಿ ನೀರು, ಮಹದಾಯಿ ಯೋಜನೆ ಬಗ್ಗೆಯೂ ಪ್ರಸ್ತಾಪ ಎಂದು ಶಿವಕುಮಾರ್ ತಿಳಿಸಿದರು.ಬಿಜೆಪಿ ಪಾದಯಾತ್ರೆಗೆ ಜೆಡಿಎಸ್ ನಾಯಕರ ವಿರೋಧ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿ ಪಾದಯಾತ್ರೆ ಬಗ್ಗೆ ಗೊತ್ತಿಲ್ಲ.
ಆ ಬಗ್ಗೆ ಇಲ್ಲಿ ಮಾತನಾಡುವುದಿಲ್ಲ, ಬೆಂಗಳೂರಿನಲ್ಲಿ ಮಾತನಾಡುತ್ತೇನೆ ಎಂದರು. ಪಾದಯಾತ್ರೆಗೆ ಪ್ರತಿಯಾಗಿ ನಾವು ಏನು ಬೇಕೋ ಆ ಸಿದ್ಧತೆ ಮಾಡಿಕೊಂಡಿದ್ದೇವೆ. ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ನಾನು ಮಾತನಾಡಲ್ಲ. ಅವರು ಎನ್‌ಡಿಎ, ನಾವು ‘ಇಂಡಿಯಾ’. ಎಲ್ಲದಕ್ಕೂ ಕಾಲ ಉತ್ತರ ಕೊಡಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.