ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರ ನೂರು ದಿನಗಳ ಕಾರ್ಯಕ್ರಮ ರಾಜಕೀಯ ತಂತ್ರದ ಭಾಗವಷ್ಟೇ. ಜನರ ಮನಸ್ಥಿತಿಯನ್ನು ಸಜ್ಜು ಮಾಡುವ ವ್ಯಾಖ್ಯಾನ ಬಿಟ್ಟರೆ ಇದರಲ್ಲಿ ಬೇರೆನೂ ಇಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್ , ನಾವು ಸಹ ರಾಜಕೀಯ ತಂತ್ರ ಹೊಂದಿದ್ದೇವೆ. ಪ್ರತಿಯೊಂದು ಪಕ್ಷವು ಒಂದೊಂದು ತಂತ್ರ ಅನುಸರಿಸುತ್ತವೆ. ಎಕ್ಸಿಟ್ ಪೋಲ್ ಸುಳ್ಳಾಗಲಿದೆ. ಇಂಡಿಯಾ ಒಕ್ಕೂಟ ಬಹುಮತ ಪಡೆಯುತ್ತದೆ ಮತ್ತು ಸರ್ಕಾರ ರಚಿಸುತ್ತದೆ ಎಂದು ಹೇಳಿದರು.
ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವಿರಾ ಎಂದು ಕೇಳಿದಾಗ “ಖಂಡಿತವಾಗಿ ಭೇಟಿ ನೀಡುತ್ತೇನೆ. ಹೆಚ್ಚು ಮಳೆ ಸುರಿದು ತೊಂದರೆ ಉಂಟಾಗಿರುವ ಭಾಗಗಳನ್ನು ಪರಿಶೀಲನೆ ನಡೆಸಲಾಗುವುದು” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ತಿಳಿಸಿದರು. ಪರಿಷತ್ ಚುನಾವಣೆ ಮತದಾನ ಮುಗಿದ ನಂತರ ಅಧಿಕಾರಿಗಳ ಸಭೆ ನಡೆಸಲಾಗುವುದು. ತೊಂದರೆಗಳನ್ನು ನಿವಾರಿಸಲಾಗುವುದು” ಎಂದರು.