ರಾಮನಗರ:
ನಿಮ್ಮ ಕಷ್ಟ ಸುಖಕ್ಕೆ ಸ್ಪಂದಿಸುವುದು ನಿಮ್ಮ ಮನೆಮಗನಾಗಿರುವ ಸಿ.ಪಿ. ಯೋಗೇಶ್ವರ್ ಅವರೇ ಹೊರತು ಬೇರೆಯವರಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಚನ್ನಪಟ್ಟಣದ ಬೇವೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಈ ಬಾರಿ ಉಪಚುನಾವಣೆಯಲ್ಲಿ ನಿಮ್ಮ ಮನೆಮಗ ಯೋಗೇಶ್ವರ್ ಅಭ್ಯರ್ಥಿಯಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ನಿಮ್ಮ ಊರಿನವರಲ್ಲ. ಯೋಗೇಶ್ವರ್ ತೀರಿಹೋದರೆ ಚಕ್ಕೆರೆಯಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ. ನಿಮಗೆ ಏನೇ ತೊಂದರೆಯಾದರೆ ತಕ್ಷಣಕ್ಕೆ ಬರುವವರು ಯೋಗೇಶ್ವರ್. ಕುಮಾರಸ್ವಾಮಿ ಅವರು ಕಳೆದ ಆರು ವರ್ಷದಲ್ಲಿ ಎಂದಾದರೂ ನಿಮ್ಮ ಕಷ್ಟಕ್ಕೆ ಸ್ಪಂದಿಸಿದ್ದಾರಾ? ನೀವು ಯೋಗೇಶ್ವರ್ ಅವರನ್ನು ಗೆಲ್ಲಿಸಿದ್ದರೆ ಇಷ್ಟು ಹೊತ್ತಿಗೆ ಹತ್ತಾರು ಬಾರಿ ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದರು. ಈಗಲೂ ಅವರು ಬರುತ್ತಿದ್ದಾರೆ. ಇದು ನಮ್ಮ ಊರು, ನಮ್ಮ ಜನ ಎಂಬ ಕಾರಣಕ್ಕೆ ಅವರು ಬರುತ್ತಾರೆ” ಎಂದು ತಿಳಿಸಿದರು.
ಇಷ್ಟು ದಿನ ನಿಮ್ಮ ಬಳಿಗೆ ಬಾರದ ಕುಮಾರಸ್ವಾಮಿ ಅವರು, ನಾನು ತಪ್ಪು ಮಾಡಿದ್ದೇನೆ ಮಗನಿಗೆ ಮತ ಹಾಕಿ ಎಂದು ಕಣ್ಣೀರು ಹಾಕುತ್ತಾ ಬರುತ್ತಾರೆ. ನೀವು ಅವರ ಕಣ್ಣೀರಿಗೆ ಮರುಗಬೇಡಿ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಚನ್ನಪಟ್ಟಣದ ಅಭಿವೃದ್ಧಿಗೆ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಯೋಗೇಶ್ವರ್, ನಾನು ಸೇರಿದಂತೆ ಎಲ್ಲಾ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಜೆಡಿಎಸ್ ಮತ್ತು ಬಿಜೆಪಿಯವರು ಈ ಯೋಜನೆಗಳನ್ನು ಟೀಕಿಸುತ್ತಾರೆ ಎಂದರು. ಈ ಯೋಜನೆಯಿಂದ ಬಡ ಕುಟುಂಬ ಪ್ರತಿ ತಿಂಗಳು 4-5 ಸಾವಿರ ಉಳಿತಾಯ ಮಾಡುವಂತಾಗಿದೆ ಎಂದು ನೀವು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕು. ನಿಮ್ಮೆಲ್ಲರ ಆಶೀರ್ವಾದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಸ್ತದ ಗುರುತಿಗೆ ಮತ ನೀಡಿ ಎಂದು ಮನವಿ ಮಾಡುತ್ತೇನೆ” ಎಂದು ತಿಳಿಸಿದರು.