ವಿಪಕ್ಷದ ಧ್ವನಿ ಹತ್ತಿಕ್ಕಬೇಡಿ : ರಾಹುಲ್‌ ಗಾಂಧಿ

ನವದೆಹಲಿ: 

    ಸಂಸತ್ತಿನಲ್ಲಿ ನಾವು ದೇಶದ ಜನರ ಧ್ವನಿಯಾಗಿ ಕುಳಿತಿದ್ದೇವೆ. ಆಡಳಿತ ಪಕ್ಷದ ಸದಸ್ಯರಂತೆ ವಿರೋಧ ಪಕ್ಷದ ಸದಸ್ಯರಿಗೆ ಕೂಡ ಜನರ ಸಮಸ್ಯೆಗಳು, ಆಶೋತ್ತರಗಳಿಗೆ ಧ್ವನಿಯಾಗಬೇಕು. ಜನರ ಸಮಸ್ಯೆಗಳನ್ನು ಸರ್ಕಾರದ ಮುಂದಿಡುವ ಕೆಲಸ ನಾವು ಸಮರ್ಥವಾಗಿ ಮಾಡಬೇಕಾಗಿದೆ. ಹೀಗಾಗಿ ಸದನದಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕಬೇಡಿ ಎಂದು ಸಂಸದ ರಾಹುಲ್ ಗಾಂಧಿ ಹೇಳಿದರು.

    ಎರಡನೇ ಅವಧಿಗೆ ಲೋಕಸಭಾಧ್ಯಕ್ಷರಾಗಿ ಓಂ ಬಿರ್ಲಾ ಅವರು ಆಯ್ಕೆಗೊಂಡ ನಂತರ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಕಳೆದ ಬಾರಿಗಿಂತ ಈ ಬಾರಿ ಪ್ರತಿಪಕ್ಷಗಳು ಭಾರತೀಯ ಜನರ ಧ್ವನಿಯನ್ನು ಗಮನಾರ್ಹವಾಗಿ ಪ್ರತಿನಿಧಿಸುತ್ತವೆ. ಸದನದಲ್ಲಿ ವಿರೋಧ ಪಕ್ಷದವರ ಧ್ವನಿಯನ್ನು ಪ್ರತಿನಿಧಿಸಲು ಅವಕಾಶ ನೀಡುವುದು ಬಹಳ ಮುಖ್ಯ ಎಂದು ಒತ್ತಿ ಹೇಳಿದರು.

    ನಮ್ಮ ಧ್ವನಿಯನ್ನು ಪ್ರತಿನಿಧಿಸಲು, ಮಾತನಾಡಲು, ಭಾರತದ ಜನರ ಧ್ವನಿಯನ್ನು ಪ್ರತಿನಿಧಿಸಲು ನೀವು ನಮಗೆ ಅವಕಾಶ ನೀಡುತ್ತೀರಿ ಎಂದು ನನಗೆ ವಿಶ್ವಾಸವಿದೆ ಎಂದರು.ಸದನವನ್ನು ಎಷ್ಟು ಸಮರ್ಥವಾಗಿ ನಡೆಸಲಾಗುತ್ತಿದೆ ಎಂಬುದು ಪ್ರಶ್ನೆಯಲ್ಲ, ಸದನದಲ್ಲಿ ಭಾರತದ ಧ್ವನಿಯನ್ನು ಕೇಳಲು ಎಷ್ಟರ ಮಟ್ಟಿಗೆ ಅವಕಾಶ ನೀಡುತ್ತೀರಿ ಎಂಬುದು ಮುಖ್ಯ ಎಂದರು.

    ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸಿ ಸದನವನ್ನು ಸಮರ್ಥವಾಗಿ ನಡೆಸಬಹುದು ಎಂಬ ಕಲ್ಪನೆಯು ಪ್ರಜಾಸತ್ತಾತ್ಮಕವಲ್ಲದ ಕಲ್ಪನೆಯಾಗಿದೆ. ಈ ಬಾರಿಯ ಚುನಾವಣೆಯು ದೇಶದ ಸಂವಿಧಾನವನ್ನು ಪ್ರತಿಪಕ್ಷಗಳು ರಕ್ಷಿಸುತ್ತದೆ ಎಂದು ಜನರು ನಿರೀಕ್ಷೆಯಿಟ್ಟುಕೊಂಡಿದ್ದಾರೆ ಎಂದು ಗೊತ್ತಾಗುತ್ತದೆ. ಪ್ರತಿಪಕ್ಷಗಳಿಗೆ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಮುಂದಿಡಲು ಅವಕಾಶ ನೀಡಿ, ಆ ಮೂಲಕ ಭಾರತದ ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡಬೇಕಿದೆ ಎಂದರು. 

   ಎರಡನೇ ಅವಧಿಗೆ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿರುವ ಓಂ ಬಿರ್ಲಾ ಅವರನ್ನು ಪ್ರತಿಪಕ್ಷ ನಾಯಕರು ಅಭಿನಂದಿಸಿ ನಿಷ್ಪಕ್ಷಪಾತವಾಗಿ ಕೆಲಸ ಮಾಡುವಂತೆ ಒತ್ತಾಯಿಸಿದರು.ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು, ಸಂಸದರನ್ನು ಅಮಾನತು ಮಾಡುವಂತಹ ತೀರ್ಮಾನಕ್ಕೆ ಬರುವುದಿಲ್ಲ ಎಂದು ಭಾವಿಸುತ್ತೇನೆ, ಏಕೆಂದರೆ ಅದು ಸದನದ ಗೌರವಕ್ಕೆ ಧಕ್ಕೆಯನ್ನುಂಟುಮಾಡುತ್ತದೆ ಎಂದರು.

ಬಿರ್ಲಾ ಅವರು ಪ್ರತಿಪಕ್ಷಗಳ ಬಗ್ಗೆ ನಿಷ್ಪಕ್ಷಪಾತವಾಗಿ ವರ್ತಿಸುತ್ತಾರೆ ಮತ್ತು ವಿರೋಧ ಪಕ್ಷಗಳ ನಾಯಕರಿಗೆ ಸಮಾನ ಅವಕಾಶವನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.

   ನೀವು ತಾರತಮ್ಯವಿಲ್ಲದೆ ಮುನ್ನಡೆಯುತ್ತೀರಿ ಎಂದು ಭಾವಿಸುತ್ತೇನೆ. ಸ್ಪೀಕರ್ ಆಗಿ ನೀವು ಎಲ್ಲಾ ಪಕ್ಷಗಳಿಗೆ ಸಮಾನ ಅವಕಾಶ ಮತ್ತು ಗೌರವವನ್ನು ನೀಡುತ್ತೀರಿ ಎಂದು ನಾವು ನಂಬುತ್ತೇವೆ. ನಿಷ್ಪಕ್ಷಪಾತವು ಈ ಮಹಾನ್ ಹುದ್ದೆಯ ದೊಡ್ಡ ಜವಾಬ್ದಾರಿಯಾಗಿದೆ. ಇಲ್ಲಿ ಕುಳಿತಿರುವ ನೀವು ಪ್ರಜಾಪ್ರಭುತ್ವದ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಎಂದರು.

   ಯಾವುದೇ ಸಾರ್ವಜನಿಕ ಪ್ರತಿನಿಧಿಯ ಧ್ವನಿಯನ್ನು ಹತ್ತಿಕ್ಕಲಾಗುವುದಿಲ್ಲ. ಸದನದ ಘನತೆಗೆ ಧಕ್ಕೆ ತರುವಂತಹ ಅಮಾನತುಗಳಂತಹ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದರು.

   ತೃಣಮೂಲ ಕಾಂಗ್ರೆಸ್ ನಾಯಕ ಸುದೀಪ್ ಬಂಡೋಪಾಧ್ಯಾಯ ಅವರು ಓಂ ಬಿರ್ಲಾ ಅವರು ವಿರೋಧ ಪಕ್ಷಗಳ ಬಗ್ಗೆ ನಿಷ್ಪಕ್ಷಪಾತವಾಗಿರುತ್ತಾರೆ ಎಂದು ಆಶಿಸಿದರು.17ನೇ ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರ ಅಮಾನತು ವಿಚಾರವನ್ನು ಪ್ರಸ್ತಾಪಿಸಿದ ಅವರು, ಇದು ಅಪೇಕ್ಷಣೀಯವಲ್ಲ ಎಂದರು.

   ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಮಸೂದೆಗಳನ್ನು ಅಂಗೀಕರಿಸಿರುವುದನ್ನು ಪ್ರಸ್ತಾಪಿಸಿದರೆ, ಹಲವು ಮಸೂದೆಗಳನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ ಎಂದು ಅವರು ಹೇಳಿದರು.ಈಗ ಬಿರ್ಲಾ ಸ್ಪೀಕರ್ ಆಗಿರುವುದರಿಂದ ಅವರು ಯಾವುದೇ ಪಕ್ಷಕ್ಕೆ ಸೇರಿಲ್ಲ ಎಂದು ಡಿಎಂಕೆ ಸದಸ್ಯ ಬಾಲು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link