ಬೆಂಗಳೂರು:
ಬಿಬಿಎಂಪಿ 2023-24ನೇ ಸಾಲಿನಲ್ಲಿ ಏಪ್ರಿಲ್ 1 ರಿಂದ ಜುಲೈ 31 ರವರೆಗೆ 3,065 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಗುರುವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತುಷಾರ್ ಗಿರಿನಾಥ್ ಅವರು, ಒನ್ ಟೈಮ್ ಸೆಟಲ್ಮೆಂಟ್(OTS) ಯೋಜನೆಯಡಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ನೀಡಿದ್ದ ಗಡುವು ಜುಲೈ 31ಕ್ಕೆ ಮುಕ್ತಾಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತೆರಿಗೆ ಸಂಗ್ರಹದಲ್ಲಿ 600 ಕೋಟಿ ರೂ. ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
ಪಾಲಿಕೆ ಕಂದಾಯ ಅಧಿಕಾರಿಗಳ ಪ್ರಕಾರ, ಒಟಿಎಸ್ ಯೋಜನೆಯಡಿ 1.14 ಲಕ್ಷ ಜನರಿಂದ 380.63 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. “ಕಳೆದ ವರ್ಷ ಇದೇ ಸಮಯದಲ್ಲಿ 2,457.30 ಕೋಟಿ ರೂ. ಸಂಗ್ರಹವಾಗಿತ್ತು. ಈ ವರ್ಷ ಪಾಲಿಕೆಯು 3,065.82 ಕೋಟಿ ರೂ. ಸಂಗ್ರಹಿಸಿದೆ. ಪಾಲಿಕೆಯು ತೆರಿಗೆ ಬಾಕಿ ಉಳಿಸಿಕೊಂಡಿದ್ದ ಸುಮಾರು ನಾಲ್ಕು ಲಕ್ಷ ಜನರಿಗೆ ಒಟಿಎಸ್ ಯೋಜನೆಯನ್ನು ಘೋಷಿಸಿದ ನಂತರ ಆದಾಯ ಹೆಚ್ಚಾಗಿದೆ.
ವಿವಿಧ ಸ್ಲ್ಯಾಬ್‌ಗಳ ಅಡಿಯಲ್ಲಿ 16,904 ಆಸ್ತಿ ಮಾಲೀಕರು ಕಡಿಮೆ ತೆರಿಗೆ ಪಾವತಿಸುತ್ತಿದ್ದು, 6,723 ಆಸ್ತಿ ಮಾಲೀಕರಿಂದ 163.13 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ.ಇನ್ನು ಮುಂದೆ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಬಿಬಿಎಂಪಿ ಕಾಯ್ದೆಯಡಿ ನೋಟಿಸ್ ಜಾರಿ ಮಾಡಲಾಗುವುದು. ತೆರಿಗೆ ಪಾವತಿಸದಿದ್ದರೆ ಅವರ ಚರ ಆಸ್ತಿಗಳನ್ನು ವಶಪಡಿಸಿಕೊಳ್ಳಬಹುದು ಎಂದು ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.
ಡಿಮ್ಯಾಂಡ್ ಡ್ರಾಫ್ಟ್‌ಗಳು ಮತ್ತು ಚೆಕ್‌ಗಳ ಮೂಲಕ ಪಾಲಿಕೆಯು ಸುಮಾರು 150 ಕೋಟಿ ರೂಪಾಯಿ ತೆರಿಗೆ ಪಡೆದಿದ್ದು, ಒಟ್ಟು 3,200 ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಭಾರೀ ಮಳೆ ಮತ್ತು ಸಾಫ್ಟ್‌ವೇರ್ ಸಮಸ್ಯೆಗಳಿಂದ ಅನೇಕ ಡಿಫಾಲ್ಟರ್‌ಗಳು ತೆರಿಗೆ ಪಾವತಿಸಲು ಸಾಧ್ಯವಾಗದ ಕಾರಣ ಒಟಿಎಸ್ ಗಡುವು ವಿಸ್ತರಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗಿರಿನಾಥ್, ಇನ್ನೂ ಎಷ್ಟು ಮಂದಿ ಬಾಕಿ ಉಳಿಸಿಕೊಂಡಿದ್ದಾರೆ ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಬೇಡಿಕೆಗಳನ್ನು ಪರಿಶೀಲಿಸಿ ಪಾಲಿಕೆಯು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.