ಬೆಂಗಳೂರು:
ಲಂಚ ನೀಡಲು ನಿರಾಕರಿಸಿದ ಸವಾರನ ಮೇಲೆ ಹಲ್ಲೆ ನಡೆಸಿದ್ದ ವಿಜಯನಗರ ಸಂಚಾರ ಪೊಲೀಸ್ ಠಾಣೆಗೆ ಸೇರಿದ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್’ರನ್ನು ಅಮಾನತುಗೊಳಿಸಲಾಗಿದೆ.
ಶುಕ್ರವಾರ ರಾತ್ರಿ ಜಿಟಿ ಮಾಲ್ ಬಳಿ ಕುಡಿದು ವಾಹನ ಚಲಾಯಿಸಿದ್ದ ಬೈಕ್ ಸವಾರನನ್ನು ತಡೆದಿದ್ದ ಪೊಲೀಸರು, 10,000 ರೂ. ದಂಡ ಪಾವತಿಸವಂತೆ ಸೂಚಿಸಿದ್ದರು. ಈ ದಂಡ ತಪ್ಪಿಸಬೇಕಾದರೆ ರೂ.3,000 ಹಣ ನೀಡುವಂತೆ ಸೂಚಿಸಿದ್ದರು. ಈ ವೇಳೆ ಗೂಗಲ್ ಪೇ ಮೂಲಕ ಪಾವತಿಸಲು ಸವಾರ ಮುಂದಾದಾಗ ನಗದು ರೂಪದಲ್ಲಿ ಪಾವತಿಸುವಂತೆ ಒತ್ತಾಯಿಸಿದ್ದರು. ಇದಕ್ಕೆ ಒಪ್ಪದ ಸವಾರ ನ್ಯಾಯಾಲಯದಲ್ಲಿ ದಂಡ ಪಾವತಿಸಿ, ಬೈಕ್ ಮರಳು ಪಡೆಯಲು ಠಾಣೆಗೆ ಹೋಗಿದ್ದ. ಈ ವೇಳೆ ಪೊಲೀಸರು ಹಲ್ಲೆ ನಡೆಸಿದ್ದಾರೆಂದು ಸವಾರ ಆರೋಪಿಸಿದ್ದರು.
ಘಟನೆ ಬಳಿಕ ಹಲ್ಲೆಗೊಳಗಾದ ಸವಾರ ಈಶ್ವರ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೂರಿನ ಆಧಾರದ ಮೇಲೆ, ಸಂಚಾರ (ಪಶ್ಚಿಮ) ಡಿಸಿಪಿ, ವಿಜಯನಗರ ಸಂಚಾರ ಉಪವಿಭಾಗದ ಎಸಿಪಿಗೆ ವಿಚಾರಣೆ ನಡೆಸುವಂತೆ ಸೂಚಿಸಿದ್ದರು. ವಿಚಾರಣೆಯ ನಂತರ, ಸೋಮವಾರ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಸಬ್-ಇನ್ಸ್ಪೆಕ್ಟರ್ ಅನ್ನು ಶಾಂತಾರಾಮಯ್ಯ ಮತ್ತು ಕಾನ್ಸ್ಟೇಬಲ್ ಅನ್ನು ಸಾದಿಕ್ ಎಂದು ಗುರುತಿಸಲಾಗಿದೆ. ದೂರಿನಲ್ಲಿ, ಶಾಂತಾರಾಮಯ್ಯ ಮತ್ತು ಸಾದಿಕ್ ಪೊಲೀಸ್ ಠಾಣೆಯೊಳಗೆ ತನ್ನನ್ನು ಒದ್ದು ಥಳಿಸಿದ್ದಾರೆ ಎಂದು ಈಶ್ವರ್ ಆರೋಪಿಸಿದ್ದಾರೆ.
