ಬೆಂಗಳೂರು:
ಲೋಕಸಭೆ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಬಾಕಿಯಿದೆ, ರಾಜ್ಯದ ಎಲ್ಲಾ 28 ಸಂಸದರ ಕಾರ್ಯವೈಖರಿ ವಿಶ್ಲೇಷಣೆ ಮಾಡಲಾಗಿದ್ದು, ಅವರಲ್ಲಿ ಹೆಚ್ಚಿನವರು ತಮ್ಮ ಅವಧಿಯ ಐದು ವರ್ಷಗಳಲ್ಲಿ ಕಳಪೆ ಸಾಧನೆ ತೋರಿದ್ದಾರೆ ಎಂದು ತಿಳಿದು ಬಂದಿದೆ.
ಸಂಸತ್ತಿನಲ್ಲಿ ಹಾಜರಾತಿ, ಕೇಳಿದ ಪ್ರಶ್ನೆಗಳು, ಪ್ರಮುಖ ಚರ್ಚೆಗಳಲ್ಲಿ ಭಾಗವಹಿಸುವಿಕೆ ಮತ್ತು ಅವರ ಕ್ಷೇತ್ರಗಳಲ್ಲಿನ ಕಾರ್ಯಕ್ಷಮತೆಯನ್ನು ಸಮೀಕ್ಷೆ ಪರಿಗಣಿಸಿದೆ. ಎಲ್ಲ ಸಂಸದರ ಸರಾಸರಿ ಹಾಜರಾತಿ ಶೇ.71ರಷ್ಟಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉತ್ತರ ಸಂಸದ ಸದಾನಂದಗೌಡ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಮತ್ತು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ಸದನದಲ್ಲಿ ಪ್ರಶ್ನೆ ಎತ್ತಲಿಲ್ಲ. ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದ್ದು ಬಿಟ್ಟರೆ ಅನಂತಕುಮಾರ್ ಹೆಗಡೆ (ಉತ್ತರ ಕನ್ನಡ ಸಂಸದ), ಡಿ.ವಿ.ಸದಾನಂದಗೌಡ, ಜೋಶಿ, ರಮೇಶ್ ಜಿಗಜಿಣಗಿ (ವಿಜಯಪುರ), ಶ್ರೀನಿವಾಸ ಪ್ರಸಾದ್ (ಚಾಮರಾಜನಗರ) ಮತ್ತು ಬಚ್ಚೇಗೌಡ (ಚಿಕ್ಕಬಳ್ಳಾಪುರ) ಚರ್ಚೆಯಲ್ಲಿ ಭಾಗವಹಿಸಲಿಲ್ಲ ಎಂದು ವಿಶ್ಲೇಷಣೆ ಹೇಳಿದೆ. ಮಂಗಳಾ ಅಂಗಡಿ (ಬೆಳಗಾವಿ) ಒಂದು ಚರ್ಚೆಯಲ್ಲಿ ಭಾಗವಹಿಸಿ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ವಿಮಾನ ಒದಗಿಸುವಂತೆ ಕೋರಿದ್ದರು.
ಸಾಮಾಜಿಕ ವಿಜ್ಞಾನಿಗಳಾದ ಎಆರ್ ವಾಸವಿ ಮತ್ತು ಜಾನಕಿ ನಾಯರ್ ಅವರು ಈ ವಿಶ್ಲೇಷಣೆ ನಡೆಸಿದ್ದು, ಶುಕ್ರವಾರ ನಾಗರಿಕ ಸಮಾಜ ತಂಡ ಸಂವಿದಾನದ ಹಾದಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಬಿಡುಗಡೆಗೊಳಿಸಲಾಯಿತು. ಡಿಕೆ ಸುರೇಶ್ (ಬೆಂಗಳೂರು ಗ್ರಾಮಾಂತರ) ಮತ್ತು ಪ್ರಲ್ಹಾದ್ ಜೋಶಿ ಅವರು ಕೋವಿಡ್ ಸಮಯದಲ್ಲಿ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಹನ್ನೊಂದು ಸಂಸದರು ನಿಧಿಯನ್ನು ನಿರ್ದೇಶಿಸುವ ಮೂಲಕ ಅಥವಾ ಸಭೆಗಳಿಗೆ ಹಾಜರಾಗುವ ಮೂಲಕ ಸೀಮಿತ ಕೆಲಸ ಮಾಡಿದ್ದಾರೆ. ಹದಿನೈದು ಮಂದಿ ಸಂಸದರು ‘ನಿರಾಸಕ್ತರು’ ಎಂದು ಪರಿಗಣಿಸಲಾಗಿದೆ. ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ) ಮತ್ತು ಶ್ರೀನಿವಾಸ ಪ್ರಸಾದ್ ನೆಗೆಟಿವ್ ರೋಲ್ ನಿರ್ವಹಿಸಿದ್ದಾರೆ ಎಂದು ಅವರ ವಿಶ್ಲೇಷಣೆ ತಿಳಿಸಿದೆ.
ರಾಜ್ಯಕ್ಕೆ ಜಿಎಸ್‌ಟಿ ಕೊಡುಗೆಗಳು ಮತ್ತು ತೆರಿಗೆ ಹಂಚಿಕೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸುರೇಶ್ ಮತ್ತು ರಾಜ್ಯದಲ್ಲಿ ಜನೌಷದಿ ಕೇಂದ್ರಗಳನ್ನು ಉತ್ತೇಜಿಸಲು ಸದಾನಂದ ಗೌಡ ಅವರು ಮಾತ್ರ ಕರ್ನಾಟಕದ ನೀತಿಗಳು ಮತ್ತು ಕಾರ್ಯಕ್ರಮಗಳ ಪರ ಮಾತನಾಡಿದ್ದಾರೆ ಎಂದು ಪರಿಗಣಿಸಲಾಗಿದೆ ಎಂದು ವಾಸವಿ ಮತ್ತು ಜಾನಕಿ, ಹೇಳಿದರು.