ನವದೆಹಲಿ:
ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಅದು ಸಹ 12 ವರ್ಷಗಳ ಬಳಿಕ. ಈ ಗೆಲುವಿನ ಬೆನ್ನಲ್ಲೇ ಭಾರತ ತಂಡದ ಪ್ರದರ್ಶನವನ್ನು ಹಾಡಿ ಹೊಗಳಲಾಗುತ್ತಿದೆ. ಈ ಹೊಗಳುವಿಕೆಗೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಕೂಡ ಅರ್ಹರು. ಏಕೆಂದರೆ ಟೂರ್ನಿಗಾಗಿ ಗಂಭೀರ್ ತೆಗೆದುಕೊಂಡ ನಿರ್ಧಾರಗಳು ಫಲ ಕೊಟ್ಟಿದೆ. ಅದಕ್ಕೆ ಸಾಕ್ಷಿಯೇ ಟೀಮ್ ಇಂಡಿಯಾ ಚಾಂಪಿಯನ್ ಆಗಿರುವುದು. ಇಲ್ಲಿ ಗೌತಮ್ ಗಂಭೀರ್ ತೆಗೆದುಕೊಂಡ ಮಹತ್ವದ ನಿರ್ಧಾರಗಳಾವುವು ಎಂದು ನೋಡುವುದಾದರೆ….
- ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಅವರನ್ನು ಕಣಕ್ಕಿಳಿಸಿರುವುದು. ಭಾರತ ತಂಡದ ಖಾಯಂ ವಿಕೆಟ್ ಕೀಪರ್ ಆಗಿದ್ದ ರಿಷಭ್ ಪಂತ್ ಅವರನ್ನು ಬೆಂಚ್ ಕಾಯಿಸಿ ಗಂಭೀರ್ ಇಂಗ್ಲೆಂಡ್ ವಿರುದ್ಧದ ಸರಣಿಯಿಂದಲೇ ರಾಹುಲ್ ಅವರನ್ನು ಸತತ ಪಂದ್ಯಗಳಲ್ಲಿ ಕಣಕ್ಕಿಳಿಸಿದ್ದರು. ಪರಿಣಾಮ ನಿರ್ಣಾಯಕ ಪಂದ್ಯಗಳಲ್ಲಿ ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
- ಇನ್ನು ಕುಲ್ದೀಪ್ ಯಾದವ್ ಅವರು ಲೀಗ್ ಹಂತದ ಪಂದ್ಯಗಳಲ್ಲಿ ವಿಫಲರಾದರೂ ಗೌತಮ್ ಗಂಭೀರ್ ನಿರ್ಣಾಯಕ ಪಂದ್ಯಗಳಲ್ಲಿ ಅವರನ್ನೇ ಕಣಕ್ಕಿಳಿಸಿದರು. ಇಲ್ಲಿ ಅನುಭವಕ್ಕೆ ಮಹತ್ವ ನೀಡಿದರ ಪರಿಣಾಮ ಫೈನಲ್ ಪಂದ್ಯದಲ್ಲಿ 10 ಓವರ್ಗಳಲ್ಲಿ ಕೇವಲ 40 ರನ್ ನೀಡಿ 2 ಪ್ರಮುಖ ವಿಕೆಟ್ ಕಬಳಿಸಿದರು.
- ಗೌತಮ್ ಗಂಭೀರ್ ತೆಗೆದುಕೊಂಡ ಮಹತ್ವದ ನಿರ್ಧಾರವೆಂದರೆ ವರುಣ್ ಚಕ್ರವರ್ತಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿರುವುದು. ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಲಾದ ತಂಡದಲ್ಲಿ ವರುಣ್ ಅವರಿಗೆ ಸ್ಥಾನ ನೀಡಿರಲಿಲ್ಲ. ಬದಲಾಗಿ ಹೆಚ್ಚುವರಿ ಬ್ಯಾಟರ್ ಆಗಿ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಟೂರ್ನಿ ಆರಂಭಕ್ಕೆ ದಿನಗಳು ಮಾತ್ರ ಇರುವಾಗ ಗೌತಮ್ ಗಂಭೀರ್ ಯಶಸ್ವಿ ಜೈಸ್ವಾಲ್ ಅವರನ್ನು ತಂಡದಿಂದ ಹೊರಗಿಟ್ಟು, ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ಆಯ್ಕೆ ಮಾಡಿದರು.
- ಈ ಒಂದು ದೃಢ ನಿರ್ಧಾರ ಇಡೀ ಟೂರ್ನಿಯ ಚಿತ್ರಣ ಬದಲಿಸಿತು ಎಂದರೆ ತಪ್ಪಾಗಲಾರದು. ಏಕೆಂದರೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೂರು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದ ವರುಣ್ ಚಕ್ರವರ್ತಿ ಒಟ್ಟು 9 ವಿಕೆಟ್ ಕಬಳಿಸಿದರು. ಅಲ್ಲದೆ ಎದುರಾಳಿ ಬ್ಯಾಟರ್ಗಳನ್ನು ಪ್ರತಿ ಪಂದ್ಯದಲ್ಲೂ ಕಾಡಿದರು.
- ಫೈನಲ್ ಪಂದ್ಯಕ್ಕೂ ಮುನ್ನ ನ್ಯೂಝಿಲೆಂಡ್ ತಂಡದ ಅತೀ ದೊಡ್ಡ ಚಿಂತೆ ಕೂಡ ವರುಣ್ ಚಕ್ರವರ್ತಿ ಆಗಿದ್ದರು. ಹೀಗೆ ತನ್ನ ಮಿಸ್ಟರಿ ಸ್ಪಿನ್ ಮೂಲಕ ಎದುರಾಳಿ ಪಡೆಗಳ ಚಿಂತೆ ಹೆಚ್ಚಿಸಿದ ವರುಣ್ 12 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.
ಗೌತಮ್ ಗಂಭೀರ್ ತೆಗೆದುಕೊಂಡ ದೃಢ ನಿರ್ಧಾರಗಳಿಂದಲೇ ಇದೀಗ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಿಸಿದೆ ಎಂದರೆ ತಪ್ಪಾಗಲಾರದು. ಈ ಚಾಂಪಿಯನ್ ಪಟ್ಟದೊಂದಿಗೆ ಆಟಗಾರನಾಗಿ ಹಾಗೂ ಕೋಚ್ ಆಗಿ 3 ಐಸಿಸಿ ಟ್ರೋಫಿಗಳನ್ನು ಗೆದ್ದ ಭಾರತದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಗೌತಮ್ ಗಂಭೀರ್ ತಮ್ಮದಾಗಿಸಿಕೊಂಡಿದ್ದಾರೆ.
